ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗನ ಕಬಡ್ಡಿ ಅಕಾಡೆಮಿ

ಪ್ರೊ ಕಬಡ್ಡಿ ಕೋಚ್‌ ಕನಸು ನನಸು; ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ಶಿಕ್ಷಣಕ್ಕೆ ಸೌಲಭ್ಯ
Last Updated 12 ಆಗಸ್ಟ್ 2022, 15:21 IST
ಅಕ್ಷರ ಗಾತ್ರ

ಮಂಗಳೂರು: ಪ್ರೊ ಕಬಡ್ಡಿಯಲ್ಲಿ ಬೆಂಗಾಳ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ ತಂಡಗಳ ಕೋಚ್ ಆಗಿದ್ದ ಜಗದೀಶ್ ಕುಂಬ್ಳೆ ಅವರ ಸುಸಜ್ಜಿತ ಕಬಡ್ಡಿ ಅಕಾಡೆಮಿ ನಿರ್ಮಾಣದ ಕನಸು ನನಸಾಗಿದೆ. ಗಡಿನಾಡು ಕಾಸರಗೋಡಿನಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿ ಉದ್ಘಾಟನೆಗೆ ಸಜ್ಜಾಗಿದೆ. ಆಗಸ್ಟ್‌ 15ರಂದು ಕಾರ್ಯಾರಂಭಗೊಳ್ಳಲಿದೆ.

ಮಂಗಳೂರು–ಕಾಸರಗೋಡು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕುಂಬ್ಳೆ ಪಟ್ಟಣದಿಂದ ಮೂರೂವರೆ ಕಿಲೋಮೀಟರ್ ದೂರದ ನಾಯ್ಕಾಪುವಿನಲ್ಲಿ ಅಕಾಡೆಮಿಯಲ್ಲಿ ಸ್ಥಾಪನೆಯಾಗಿದ್ದು 30ರಷ್ಟು ಮಂದಿಗೆ ಇಲ್ಲಿ ವಸತಿ ಸಹಿತ ತರಬೇತಿ ಲಭಿಸಲಿದೆ. ವಸತಿ ರಹಿತ ತರಬೇತಿ ಪಡೆಯಲು 50ಕ್ಕೂ ಹೆಚ್ಚು ಮಂದಿಗೆ ಅವಕಾಶವಿದೆ. 2002ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದ ಜಗದೀಶ್ ಕುಂಬ್ಳೆ ಅವರೇ ಅಕಾಡೆಮಿಯ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದು ಸುನಿಲ್ ಕುಮಾರ್ ಮತ್ತು ಗಣೇಶ್ ಸಹಾಯಕ ಕೋಚ್‌ಗಳಾಗಿ ಇರುವರು.

‘ಎರಡು ಮಣ್ಣಿನ ಅಂಗಣ ಮತ್ತು ಎರಡು ಮ್ಯಾಟಿಂಗ್ ಅಂಗಣ ಸಜ್ಜುಗೊಳಿಸಲಾಗಿದೆ. ಸಮೀಪದ ಅನುದಾನಿತ ಶಾಲೆಯ ಅಥ್ಲೆಟಿಕ್‌ ಟ್ರ್ಯಾಕ್‌ ಬಳಸಿಕೊಳ್ಳುವುದಕ್ಕೂ ಒಪ್ಪಂದವಾಗಿದೆ. ಅಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವ ಹೆಚ್ಚುವರಿ ಅಭ್ಯಾಸಕ್ಕೆ ಅವಕಾಶವಿದೆ’ ಎಂದು ‘ಪ್ರಜಾವಾಣಿ’ಗೆ ಜಗದೀಶ್ ತಿಳಿಸಿದರು.

ಪ್ರೊ ಕಬಡ್ಡಿ ಲೀಗ್‌ನ ಮೊದಲ ಎರಡು ಆವೃತ್ತಿಗಳು ಮುಗಿಯುತ್ತಿದ್ದಂತೆ ಕಬಡ್ಡಿ ಆಸಕ್ತರ ಸಂಖ್ಯೆ ಹೆಚ್ಚಾಗಿತ್ತು. ಅವರ ಹಸಿವು ಇಂಗಿಸುವುದಕ್ಕಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಕಟ್ಟಡದ ಮಹಡಿಯೊಂದರಲ್ಲಿ ಕಬಡ್ಡಿ ತರಬೇತಿ ನೀಡುವ ಕಾರ್ಯಕ್ಕೆ ಜಗದೀಶ್ ಮುಂದಾಗಿದ್ದರು. ಕಾಸರಗೋಡು, ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದವರು ಮಾತ್ರವಲ್ಲದೆ ಉತ್ತರ ಭಾರತದ ಕೆಲವು ಮಂದಿ ಕೂಡ ಇಲ್ಲಿ ತರಬೇತಿಗೆ ಹಾಜರಾಗುತ್ತಿದ್ದರು.

‘ರಾಷ್ಟ್ರೀಯ ಮಟ್ಟದ, ರಾಜ್ಯ ಮಟ್ಟದ ಮತ್ತು ವಿಶ್ವವಿದ್ಯಾಲಯ ಮಟ್ಟದ ಸುಮಾರು 20 ಆಟಗಾರರನ್ನು ತಯಾರು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಅಕಾಡೆಮಿ ನಿರ್ಮಿಸಲು ಮುಂದಾಗಿದ್ದೆ. ಅಕಾಡೆಮಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ತರಬೇತಿ ನೀಡಲಾಗುವುದು’ ಎಂದು ಅವರು ವಿವರಿಸಿದರು.

ಮಂಗಳೂರು ಕಾಲೇಜು ಜೊತೆ ಒಪ್ಪಂದ

ಅಕಾಡೆಮಿಯಲ್ಲಿ ತರಬೇತಿ ಪಡೆಯುವವರಿಗೆ ಶಿಕ್ಷಣಕ್ಕಾಗಿ ಮಂಗಳೂರಿನ ಯೆನೆಪೋಯ ಶಿಕ್ಷಣ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಸತಿಯುತ ತರಬೇತಿ ಪಡೆಯುವವರು ಬೆಳಿಗ್ಗೆ ಮತ್ತು ಸಂಜೆ ತರಬೇತಿಯ ನಡುವೆ ಕಾಲೇಜಿಗೆ ಹೋಗಿ ಬರಬಹುದು. ಕಾಲೇಜಿನಲ್ಲಿ ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ತೇರ್ಗಡೆ ಹೊಂದುವವರಿಗೆ ಉಚಿತ ತರಬೇತಿಯ ಸೌಲಭ್ಯವೂ ಸಿಗಲಿದೆ.

‘ಪಿಯುಸಿ ಹಂತದವರ ಮೇಲೆ ಹೆಚ್ಚು ಗಮನ ನೀಡುತ್ತಿದ್ದೇವೆ. ಉಳಿದಂತೆ, ಆರು–ಏಳನೇ ತರಗತಿಯವರು ತರಬೇತಿಗೆ ಸೇರಲು ಅರ್ಹರು. ಕಬಡ್ಡಿಯಲ್ಲಿ ಪಳಗಿದವರ ಕೌಶಲ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಅರಂಭಿಕ ಹಂತದಲ್ಲಿರುವವರಿಗೆ ಒಂದೆರಡು ತಿಂಗಳು ಫಿಟ್‌ನೆಸ್‌ ತರಬೇತಿ ನೀಡಿ ನಂತರ ಕೌಶಲಗಳನ್ನು ಹೇಳಿಕೊಡಲಾಗುವುದು. ನಂತರವಷ್ಟೇ ಆಟದ ತಂತ್ರಗಳನ್ನು ತಿಳಿಸಲಾಗುವುದು’ ಎಂದು ಜಗದೀಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT