ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಗೇಮ್ಸ್: ಭಾರತ ಚೆಸ್ ಪಟುಗಳಿಗೆ ಆನಂದ್ ಮಾರ್ಗದರ್ಶನ

Last Updated 29 ಜನವರಿ 2022, 14:05 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಸೆಪ್ಟೆಂಬರ್‌ನಲ್ಲಿ ಚೀನಾದ ಹಾಂಗ್ಜುವಿನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನ ಚೆಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡಕ್ಕೆ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮಾರ್ಗದರ್ಶನ ನೀಡಲಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ 12 ವರ್ಷಗಳ ಬಳಿಕ ಚೆಸ್ ಸೇರ್ಪಡೆಯಾಗಿದೆ. ಗೇಮ್ಸ್‌ನಲ್ಲಿ ಅತ್ಯುತ್ಕೃಷ್ಟ ತಂಡವನ್ನು ಕಣಕ್ಕೆ ಇಳಿಸಲು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌) ಯೋಜನೆ ಹಾಕಿಕೊಂಡಿದೆ.2010ರಲ್ಲಿ ಗುವಾಂಗ್ಜುವಿನಲ್ಲಿ ನಡೆದ ಗೇಮ್ಸ್‌ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

‘ಸಿದ್ಧತೆಗಳು ಈಗಲೇ ಆರಂಭವಾಗಿವೆ.ನಾಲ್ಕು ಚಿನ್ನದ ಪದಕಗಳನ್ನು ಗೆಲ್ಲುವ ಗುರಿ ಇದೆ. ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 10 ಮಂದಿ ಸಂಭಾವ್ಯರನ್ನು ಆರಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ರೇಟಿಂಗ್ ಆಧಾರದಲ್ಲಿ ಆಯ್ಕೆ ನಡೆದಿದೆ. ಆಟಗಾರರು ಮತ್ತು ವಿಶ್ವನಾಥನ್ ಆನಂದ್ ಮೊದಲ ಮುಖಾಮುಖಿ ಮುಂದಿನ ಗುರುವಾರ ನಡೆಯಲಿದೆ’ ಎಂದು ಎಐಸಿಎಫ್‌ ಪ್ರಕಟಣೆ ತಿಳಿಸಿದೆ.

ಪುರುಷರ ವಿಭಾಗದಲ್ಲಿ ವಿದಿತ್ ಗುಜರಾತಿ, ಪಿ.ಹರಿಕೃಷ್ಣ, ನಿಹಾಲ್ ಸರಿನ್‌, ಎಸ್‌.ಎಲ್‌.ನಾರಾಯಣನ್‌, ಕೆ.ಶಶಿಕಿರಣ್‌, ಬಿ.ಅಧಿಬನ್, ಕಾರ್ತಿಕೇಯನ್ ಮುರಳಿ, ಅರ್ಜುನ್ ಎರಿಗೈಸಿ, ಅಭಿಜಿತ್ ಗುಪ್ತಾ ಮತ್ತು ಸೂರ್ಯ ಶೇಖರ್ ಗಂಗೂಲಿ, ಮಹಿಳೆಯರ ವಿಭಾಗದಲ್ಲಿ ಕೊನೇರು ಹಂಪಿ, ಡಿ.ಹರಿಕಾ, ವೈಶಾಲಿ ಆರ್‌, ತಾನಿಯ ಸಚ್‌ದೇವ್‌, ಭಕ್ತಿ ಕುಲಕರ್ಣಿ, ವಂತಿಕಾ ಅಗರವಾಲ್‌, ಮೇರಿ ಆ್ಯನ್ ಗೊಮೆಜ್‌, ಸೌಮ್ಯ ಸ್ವಾಮಿನಾಥನ್‌ ಮತ್ತು ಈಶ ಕರವಡೆ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್‌ ಅವರಿಗೆ ಅಭಿಜಿತ್ ಕುಂಟೆ, ದಿವ್ಯೇಂದು ಬರುವಾ ಮತ್ತು ದಿನೇಶ್ ಶರ್ಮಾ ಅವರು ತಲಾ ಐವರು ಆಟಗಾರರನ್ನು ಆರಿಸಿಕೊಡಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚೆಸ್ ಸ್ಪರ್ಧೆಗಳು ಸೆಪ್ಟೆಂಬರ್ 11ರಂದು ಆರಂಭವಾಗಲಿವೆ. ಪುರುಷ ಮತ್ತು ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ರ‍್ಯಾಪಿಡ್ ಟೈಮ್ ಕಂಟ್ರೋಲ್ ಮಾದರಿಯಲ್ಲಿ ಸ್ಪರ್ಧೆಗಳು ಇರಲಿವೆ. ಈ ಸ್ಪರ್ಧೆ 11ರಿಂದ 14ರ ವರೆಗೆ ನಡೆಯಲಿದೆ. ಐವರು ಆಟಗಾರರ ನಾಲ್ಕು ಬೋರ್ಡ್‌ ಸ್ಪರ್ಧೆಯು ಸ್ಟ್ಯಾಂಡರ್ಡ್ ಟೈಮ್ ಕಂಟ್ರೋಲ್ ಮಾದರಿಯಲ್ಲಿ ಸೆಪ್ಟೆಂಬರ್‌ 16ರಿಂದ 24ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT