ಶುಕ್ರವಾರ, ಜೂನ್ 25, 2021
21 °C
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ

ಸಿಂಧು, ಸೈನಾ ಸವಾಲು ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಕಂಡಿದೆ.

ಹಾಲಿ ವಿಶ್ವ ಚಾಂಪಿಯನ್‌ ಸಿಂಧು, ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಹೋರಾಟದಲ್ಲಿ 16–21, 16–21 ನೇರ ಗೇಮ್‌ಗಳಿಂದ ಚೀನಾ ತೈಪೆಯ ತೈ ಜು ಯಿಂಗ್‌ ಎದುರು ಪರಾಭವಗೊಂಡರು.

ಇದರೊಂದಿಗೆ ತೈ ಜು ಅವರು ಸಿಂಧು ವಿರುದ್ಧದ ಗೆಲುವಿನ ದಾಖಲೆಯನ್ನು 12–5ಕ್ಕೆ ಹೆಚ್ಚಿಸಿಕೊಂಡರು.

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಸಿಂಧು, ಮೊದಲ ಗೇಮ್‌ನ ಶುರುವಿನಲ್ಲಿ ಲಭಿಸಿದ ಮುನ್ನಡೆಯನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲರಾದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ತೈ ಜು, ಎರಡನೇ ಗೇಮ್‌ನಲ್ಲಿ ಮಿಂಚಿದರು. ಅವರು 20–11ರಿಂದ ಮುನ್ನಡೆ ಗಳಿಸಿದ್ದ ವೇಳೆ ಸಿಂಧು, ಆರು ಮ್ಯಾಚ್‌ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡರು. ಹೀಗಿದ್ದರೂ ಭಾರತದ ಆಟಗಾರ್ತಿಗೆ ಸೋಲು ತಪ್ಪಿಸಿಕೊಳ್ಳಲು ಆಗಲಿಲ್ಲ.

ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಸೈನಾ 8–21, 7–21ರಲ್ಲಿ ಸ್ಪೇನ್‌ನ ಕ್ಯಾರೋಲಿನಾ ಮರಿನ್‌ ಎದುರು ಸುಲಭವಾಗಿ ಶರಣಾದರು. ಈ ಹೋರಾಟ 30 ನಿಮಿಷಗಳಲ್ಲಿ ಮುಗಿಯಿತು.

ಮೊದಲ ಗೇಮ್‌ನ ಶುರುವಿನಿಂದಲೇ ಚುರುಕಿನ ಆಟ ಆಡಿದ ಮರಿನ್‌ 10–6 ಮುನ್ನಡೆ ಗಳಿಸಿದರು. ವಿರಾಮದ ಬಳಿಕವೂ ಮಿಂಚಿನ ಆಟ ಆಡಿದ ಸ್ಪೇನ್‌ನ ಆಟಗಾರ್ತಿ ಸುಲಭವಾಗಿ ಗೆದ್ದರು.

ಎರಡನೇ ಗೇಮ್‌ನ ಶುರುವಿನಲ್ಲಿ ಎದುರಾಳಿಗೆ ಅಲ್ಪ ಪ್ರತಿರೋಧ ಒಡ್ಡಿದ ಸೈನಾ, ನಂತರ ಹಲವು ತಪ್ಪುಗಳನ್ನು ಮಾಡಿದರು. ಹೀಗಾಗಿ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಮರಿನ್‌ ಅವರ ಗೆಲುವಿನ ಹಾದಿ ಸುಗಮವಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು