ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧುಗೆ ಶುಭಾರಂಭದ ಕನಸು

ಕಣದಲ್ಲಿ ಸೈನಾ, ಶ್ರೀಕಾಂತ್‌
Last Updated 6 ಜನವರಿ 2020, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಹೋದ ವರ್ಷ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಪಿ.ವಿ.ಸಿಂಧು, 2020ನೇ ಋತುವಿನಲ್ಲಿ ಗೆಲುವಿನ ಮುನ್ನುಡಿ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಮಂಗಳವಾರದಿಂದ ಆರಂಭವಾಗುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಸಿಂಧು ಮೊದಲ ಸುತ್ತಿನಲ್ಲಿ ರಷ್ಯಾದ ಎವಜೆನಿಯಾ ಕೊಸೆಟ್ಸ್‌ಕಾಯ ಎದುರು ಸೆಣಸಲಿದ್ದಾರೆ.

ಸೈನಾ ನೆಹ್ವಾಲ್‌ ಕೂಡ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಸೈನಾ ಅವರೂ ಹೋದ ವರ್ಷ ಸತತ ವೈಫಲ್ಯ ಅನುಭವಿಸಿದ್ದರು. ಮೊದಲ ಸುತ್ತಿನಲ್ಲಿ ಸೈನಾ, ಅರ್ಹತಾ ಹಂತದಲ್ಲಿ ಗೆದ್ದುಬಂದ ಆಟಗಾರ್ತಿಯ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಕಿದಂಬಿ ಶ್ರೀಕಾಂತ್‌, ಚೀನಾ ತೈಪೆಯ ಚೊವು ತಿಯೆನ್‌ ಚೆನ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ.

ಬಿ.ಸಾಯಿ ಪ್ರಣೀತ್‌ ಅವರು ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ವಿರುದ್ಧ ಹೋರಾಡಲಿದ್ದಾರೆ.

ಸಮೀರ್‌ ವರ್ಮಾ ಅವರಿಗೆ ಥಾಯ್ಲೆಂಡ್‌ಗೆ ಕಂಟಾಪೊನ್‌ ವಾಂಗ್‌ಚಾರೋನ್‌ ಸವಾಲು ಎದುರಾಗಲಿದೆ.

ಪರುಪಳ್ಳಿ ಕಶ್ಯಪ್‌ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಕೆಂಟೊ ಮೊಮೊಟಾ ಎದುರು ಆಡಬೇಕಿದೆ. ಹೀಗಾಗಿ ಅವರ ಪ್ರಶಸ್ತಿಯ ಕನಸು ಬಹುತೇಕ ಕಮರಿದೆ. ಎಚ್‌.ಎಸ್‌.ಪ್ರಣಯ್‌, ಜಪಾನ್‌ನ ಕಂಟಾ ಸುನೆಯಾಮಾ ವಿರುದ್ಧ ಪೈಪೋಟಿ ನಡೆಸಬೇಕಿದೆ.

ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿರುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

2019ರ ಋತುವಿನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಭಾರತದ ಜೋಡಿಯು ಮೊದಲ ಸುತ್ತಿನಲ್ಲಿ ಒಂಗ್‌ ಯೀವ್‌ ಸಿನ್‌ ಮತ್ತು ಟಿಯೊ ಯೀ ಎದುರು ಪೈಪೋಟಿ ನಡೆಸಲಿದೆ.

ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ದಕ್ಷಿಣ ಕೊರಿಯಾದ ಚಾಂಗ್‌ ಯೀ ನಾ ಮತ್ತು ಕಿಮ್‌ ಹ್ಯೂ ರಿನ್‌ ವಿರುದ್ಧ ಸೆಣಸಲಿರುವ ಭಾರತದ ಜೋಡಿ ಶುಭಾರಂಭದ ನಿರೀಕ್ಷೆಯಲ್ಲಿದೆ.

ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಸಾಯಿರಾಜ್‌ ಅವರು ಚೀನಾದ ವಾಂಗ್‌ ಯೀ ಲ್ಯೂ ಮತ್ತು ಹುವಾಂಗ್‌ ಡೊಂಗ್‌ ಪಿಂಗ್‌ ಎದುರೂ, ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಜೆರಿ ಚೋಪ್ರಾ ಅವರು ಜೆಂಗ್‌ ಸಿ ವೀ ಮತ್ತು ಹುವಾಂಗ್‌ ಯಾ ಕ್ವಿಯೊಂಗ್‌ ವಿರುದ್ಧವೂ ಹೋರಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT