ಬುಧವಾರ, ಮಾರ್ಚ್ 3, 2021
30 °C

ಬೆಂಗಳೂರಿನಲ್ಲಿ ಹಾಕಿ ಆಟಗಾರ್ತಿಯರಿಗೆ ಗೋಲ್‌ಕೀಪಿಂಗ್‌ ತರಬೇತಿ ಶಿಬಿರ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಹಾಕಿ ಆಟಗಾರ್ತಿಯರಿಗಾಗಿ ಹಾಕಿ ಇಂಡಿಯಾ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿ ಏಳು ದಿನಗಳ ವಿಶೇಷ ಗೋಲ್‌ಕೀಪಿಂಗ್‌ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.

ಏಳು ಮಂದಿ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ (ಜುಲೈ 8)ದಿಂದ ಆರಂಭವಾಗುವ ಶಿಬಿರವನ್ನು ನೆದರ್ಲೆಂಡ್ಸ್ ಗೋಲ್‌ಕೀಪಿಂಗ್‌ ಪರಿಣತ ಮಾರ್ಟಿಜನ್‌ ಡ್ರಿವರ್‌ ನಡೆಸಿಕೊಡುವರು.

ಅನುಭವಿ ಜೋಡಿಯಾದ ಸವಿತಾ ಹಾಗೂ ರಜನಿ ಎತಿಮರ್ಪು ಅವರಲ್ಲದೆ ಯುವ ಗೋಲ್‌ಕೀಪರ್‌ಗಳಾದ ಸ್ವಾತಿ, ಸೋನಾಲ್‌ ಮಿಂಜ್‌, ಬಿಚುದೇವಿ ಖರಿಬಮ್‌, ಚಾಂಚಲ್‌, ಖುಷ್ಬೂ, ರಾಷನ್‌ಪ್ರೀತ್‌ ಕೌರ್‌ ಮತ್ತು ಎಫ್‌.ರಾಮೆಂಗ್‌ಮಾವಿ ಶಿಬಿರಕ್ಕೆ ಆಯ್ಕೆಯಾದವರು.

‘ನಮ್ಮ ಗೋಲ್‌ಕೀಪರ್‌ಗಳ ಕಲಿಕೆಗೆ ಇದು ಉತ್ತಮ ಅವಕಾಶ. ವಿಶ್ವಮಟ್ಟದ ಕೋಚಿಂಗ್‌ ಪಡೆಯಲು ಎಲ್ಲ ಆಟಗಾರ್ತಿಯರಿಗೆ ಇದು ಸಹಾಯವಾಗಲಿದೆ. ಗೋಲ್‌ಕೀಪಿಂಗ್‌ ಕೌಶಲ್ಯದಲ್ಲಿ ಪರಿಣಿತಿ ಸಾಧಿಸಲು ಅನುಕೂಲವಾಗಲಿದೆ’ ಎಂದು ತಂಡದ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್‌ ಜಾನ್‌ ಅಭಿಪ್ರಾಯಪಟ್ಟಿದ್ದಾರೆ.

ತಂಡಕ್ಕೆ ಉದಯೋನ್ಮುಖ ಆಟಗಾರ್ತಿಯರನ್ನೂ ಈ ಶಿಬಿರ ನೀಡಬಲ್ಲುದು. ಎಲ್ಲ ಗೋಲ್‌ಕೀಪರ್‌ಗಳು ಶಿಬಿರದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ರ‍್ಯಾಂಕಿಂಗ್‌ ಮೂಲಕ ಆಯ್ಕೆಯಾದ ಗೋಲ್‌ಕೀಪರ್‌ಗಳ ಪ್ರದರ್ಶನದತ್ತ ಗಮನಹರಿಸಲು ಹಿರಿಯ ಕೋಚ್‌ಗಳಿಗೂ ಇದೊಂದು ಉತ್ತಮ ಅವಕಾಶ. ಮಾರ್ಟಿಜನ್‌ರಂತಹ ಪರಿಣತ ಕೋಚ್‌ ಜೊತೆಗೆ ಅವರು ಕೆಲಸ ಮಾಡುವ ಅವಕಾಶ ಪಡೆದಿದ್ದು ಖುಷಿಯ ಸಂಗತಿ’ ಎಂದು ಡೇವಿಡ್‌ ತಿಳಿಸಿದರು.

ಮಾರ್ಟಿಜನ್‌ ಡ್ರಿವರ್‌ ಅವರು ಗೋಲ್‌ಕೀಪಿಂಗ್‌ ತರಬೇತಿಯಲ್ಲಿ 25 ವರ್ಷಗಳ ಅನುಭವ ಉಳ್ಳವರು. ನೆದರ್ಲೆಂಡ್ಸ್‌ನಲ್ಲಿ ‘ಡ್ರಿವರ್‌ ಗೋಲಿ ಅಕಾಡಮಿ’ಯನ್ನೂ ಅವರು ಸ್ಥಾಪಿಸಿದ್ದಾರೆ.

ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಉಪಯೋಗ: ಶ್ರೀಜೇಶ್‌
ಹಾಕಿ ಆಟಗಾರರಿಗಾಗಿ ಏಳು ದಿನಗಳ ಕಾಲ ನಡೆದ ಗೋಲ್‌ಕೀಪಿಂಗ್‌ ತರಬೇತಿಯು ಮಹತ್ವದ ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಅನುಕೂಲವಾಗುವ ದೃಷ್ಟಿಯಿಂದ ಒಂದು ಆದರ್ಶ ಹೆಜ್ಜೆ ಎಂದು ಭಾರತದ ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಹೇಳಿದ್ದಾರೆ.

ಶ್ರೀಜೇಶ್‌, ಕೃಷ್ಣ ಬಿ.ಪಾಠಕ್‌, ಸೂರಜ್‌ ಕರ್ಕೇರ, ಜುಗರಾಜ್‌ ಸಿಂಗ್‌, ಪಾರಸ್‌ ಮಲ್ಹೊತ್ರಾ, ಜಗದೀಪ್‌ ದಯಾಳ್‌, ಪವನ್‌, ಪ್ರಶಾಂತ್‌ ಕುಮಾರ್‌ ಚೌಹಾನ್‌ ಹಾಗೂ ಸಾಹಿಲ್‌ ಕುಮಾರ್‌ ಅವರು ಜುಲೈ 1ರಿಂದ ನಡೆದ ಗೋಲ್‌ಕೀಪರ್‌ ಶಿಬಿರದದ್ದರು. ಈ ಶಿಬಿರ ಸಾಯ್‌ನಲ್ಲಿ ನಡೆದಿತ್ತು. 

‘ಪೆನಾಲ್ಟಿ ಕಾರ್ನರ್‌ ಹಾಗೂ ಶೂಟೌಟ್‌ಗಳ ಬಗ್ಗೆ ಶಿಬಿರದಲ್ಲಿ ಹೆಚ್ಚು ಒತ್ತು ಕೊಡಲಾಗಿತ್ತು. ಇದೊಂದು  ಹಾಕಿ ಇಂಡಿಯಾದ ಉತ್ತಮ ಕ್ರಮ. ಒಲಿಂಪಿಕ್‌ ಅರ್ಹತಾ ಟೂರ್ನಿಗಳಿಗೆ ಸಿದ್ಧವಾಗಲು ಇದು ಅನುಕೂಲವಾಗಿದೆ. ನಾವು ಮಾಡುವ ಸಣ್ಣ ತಪ್ಪುಗಳನ್ನು ಅರಿಕೆ ಮಾಡುವಲ್ಲಿ ಕೋಚ್‌ ಡೆನ್ನಿಸ್‌ ವ್ಯಾನ್‌ ಡಿ ಪೊಲ್‌ ಯಶಸ್ವಿಯಾದರು’ ಎಂದು ಶ್ರೀಜೇಶ್‌ ಮೆಚ್ಚುಗೆ ವ್ಯಕ್ತಪಡಿಸಿದರು. ನೆದರ್ಲೆಂಡ್ಸ್‌ನ ಗೋಲ್‌ಕೀಪಿಂಗ್‌ ಪರಿಣತ ಕೋಚ್‌ ಡೆನ್ನಿಸ್‌ ಅವರನ್ನು ಹಾಕಿ ಇಂಡಿಯಾ  ಗೋಲ್‌ಕೀಪಿಂಗ್‌ ತರಬೇತಿಗೆ ಆಹ್ವಾನಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು