ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್: ಒಲಿಂಪಿಕ್‌ ಅರ್ಹತೆಗೆ ವಿಕಾಸ್‌ ಸ್ಪರ್ಧೆ

ಗೌರವ್‌, ನಮನ್‌ ತನ್ವರ್‌ಗೂ ಸ್ಥಾನ; ಭಾರತ ತಂಡದಲ್ಲಿ ಎಂಟು ಮಂದಿ
Last Updated 30 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಬಳ್ಳಾರಿ: ಅನುಭವಿ ಬಾಕ್ಸರ್‌ ವಿಕಾಸ್‌ ಕೃಷ್ಣ, ಗೌರವ್‌ ಸೋಲಂಕಿ ಹಾಗೂ ನಮನ್‌ ತನ್ವರ್‌ ಅವರು ಒಲಿಂಪಿಕ್‌ ಅರ್ಹತೆಗಾಗಿ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತ ಬಾಕ್ಸಿಂಗ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಸೋಮವಾರ ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ ಫೈನಲ್‌ಗಳಲ್ಲಿ ಅವರು ಜಯಭೇರಿ ಮೊಳಗಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಏಷ್ಯನ್ ಗೇಮ್ಸ್‌ ಪದಕ ವಿಜೇತ ವಿಕಾಸ್‌, 69 ಕೆಜಿ ತೂಕ ವಿಭಾಗದ ಫೈನಲ್‌ ಬೌಟ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ ದುರ್ಯೋಧನ್‌ ಸಿಂಗ್‌ ಅವರನ್ನು ಏಕಪಕ್ಷೀಯವಾಗಿ ಮಣಿಸಿದರು. ವಿಕಾಸ್‌ ಮೊದಲು ಮಿಡ್ಲ್‌ವೇಟ್‌ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು.

ಕಾಮನ್‌ವೆಲ್ತ್‌ ಪದಕ ವಿಜೇತ ಗೌರವ್‌ ಸೋಲಂಕಿ ಅವರು 57 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಹಸಮುದ್ದೀನ್‌ ಎದುರು ಗೆದ್ದರೆ, ತನ್ವರ್‌ ಅವರು 91 ಕೆಜಿ ವಿಭಾಗದಲ್ಲಿ ನವೀನ್ ಕುಮಾರ್‌ ಎದುರು ಜಯದ ನಗೆ ಬೀರಿದರು. ಇವೆರಡೂ ಫಲಿತಾಂಶಗಳ ಕುರಿತು ರೆಫರಿಗಳ ತೀರ್ಪಿನಲ್ಲಿ
ಒಮ್ಮತವಿರಲಿಲ್ಲ.

‘ಕಠಿಣ ಸ್ಪರ್ಧೆಯಲ್ಲಿ ಗೌರವ್‌ ಸೋಲಂಕಿ ಹಿನ್ನಡೆಯಿಂದ ಚೇತರಿಸಿ ಕೊಂಡು ಗೆದ್ದು ಹಸಮುದ್ದೀನ್‌ ಅವರನ್ನು ಮಣಿಸಿದ್ದು ಗಮನ ಸೆಳೆಯಿತು’ ಎಂದು ಭಾರತ ಬಾಕ್ಸಿಂಗ್‌ ಹೈ ಪರ್ಫಾರ್ಮನ್ಸ್‌ ನಿರ್ದೇಶಕ ಸ್ಯಾಂಟಿಯಾಗೊ ನೀವಾ ಹೇಳಿದರು.

‘ಆಕರ್ಷಕ ಆಟವಾಡಿರುವ ವಿಕಾಸ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ’ ಎಂದು ಅವರು ನುಡಿದರು.

ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಆಶಿಶ್‌ ಕುಮಾರ್ (75 ಕೆಜಿ), ಸತೀಶ್‌ ಕುಮಾರ್‌ (+91 ಕೆಜಿ) ಹಾಗೂ ಸಚಿನ್‌ ಕುಮಾರ್‌ (81 ಕೆಜಿ) ಭಾನುವಾರ ತಮ್ಮ ವಿಭಾಗದ ಫೈನಲ್‌ ಬೌಟ್‌ಗಳಲ್ಲಿ ಗೆದ್ದು ತಂಡದಲ್ಲಿ ಸ್ಥಾನ ಪಡೆದಿದ್ದರು.

ಅಮಿತ್‌ ಪಂಘಲ್‌ (52 ಕೆಜಿ) ಹಾಗೂ ಮನೀಷ್‌ ಕೌಶಿಕ್‌ (63 ಕೆಜಿ) ಅವರು ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ಈಗಾಗಲೇ ತಂಡದಲ್ಲಿ ಸ್ಥಾನ ಖಚಿತಪಡಿ ಸಿಕೊಂಡಿದ್ದಾರೆ.

‘ಎಲ್ಲ ವಿಭಾಗಗಳಲ್ಲೂ ಕಠಿಣ ಸ್ಪರ್ಧೆ ಕಂಡುಬಂತು. ಅಂತಿಮವಾಗಿ ಆಯ್ಕೆಯಾಗಿರುವ ತಂಡ ನಿಜವಾಗಿಯೂ ಬಲಿಷ್ಠವಾಗಿ ತೋರುತ್ತಿದೆ’ ಎಂದು ಸ್ಯಾಂಟಿಯಾಗೊ ಹೇಳಿದರು.

ಚೀನಾದ ವುಹಾನ್‌ನಲ್ಲಿ ಫೆಬ್ರುವರಿ ಮೂರನೇ ತಾರೀಕಿನಿಂದ 14ರವರೆಗೆ ಒಲಿಂಪಿಕ್‌ ಕ್ವಾಲಿಫೈಯರ್‌ ಸ್ಪರ್ಧೆಗಳು ನಡೆಯಲಿವೆ.

ಪುರುಷರ ತಂಡ
ಅಮಿತ್‌ ಪಂಘಲ್‌ (52 ಕೆಜಿ), ಗೌರವ್‌ ಸೋಲಂಕಿ (57 ಕೆಜಿ), ಮನೀಷ್‌ ಕೌಶಿಕ್‌ (63 ಕೆಜಿ), ವಿಕಾಸ್‌ ಕೃಷ್ಣ (69 ಕೆಜಿ), ಆಶಿಶ್‌ ಕುಮಾರ್‌ (75 ಕೆಜಿ), ಸಚಿನ್‌ ಕುಮಾರ್‌ (81 ಕೆಜಿ), ನಮನ್‌ ತನ್ವರ್‌ (91 ಕೆಜಿ), ಸತೀಶ್‌ ಕುಮಾರ್ (+91 ಕೆಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT