ಬುಧವಾರ, ಮಾರ್ಚ್ 29, 2023
27 °C

ಚೆಸ್‌: ಮಿತ್ರಾಭ ಗುಹಾ ಭಾರತದ 72ನೇ ಗ್ರ್ಯಾಂಡ್‌ಮಾಸ್ಟರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕೋಲ್ಕತ್ತದ ಮಿತ್ರಾಭ ಗುಹಾ ಅವರು ಭಾರತದ 72ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ. ಸರ್ಬಿಯಾದಲ್ಲಿ ನಡೆದ ಚೆಸ್‌ ಟೂರ್ನಿಯಲ್ಲಿ ಅಗತ್ಯವಿದ್ದ ಮೂರನೇ ಮತ್ತು ಅಂತಿಮ ನಾರ್ಮ್ಅನ್ನು ಅವರು ಪೂರ್ಣಗೊಳಿಸಿದರು.

ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ಸೋಮವಾರ ಅವರು ಸರ್ಬಿಯಾದ ಗ್ರ್ಯಾಂಡ್‌ಮಾಸ್ಟರ್‌ ನಿಕೋಲಾ ಸೆಡ್ಲಾಕ್ ಅವರನ್ನು ಭಾರತದ ಆಟಗಾರ ಸೋಲಿಸಿದರು. ಸದ್ಯ ಅವರು ಆರು ಗೆಲುವು, ಎರಡು ಡ್ರಾ ಮತ್ತು ಏಳನೇ ಸುತ್ತಿನಲ್ಲಿ ರಷ್ಯಾದ ವ್ಲಾಡಿಮಿರ್ ಜಖರ್ಟ್ಸೊವ್ ವಿರುದ್ಧ ಸೋಲಿನೊಂದಿಗೆ ಒಟ್ಟು ಏಳು ಪಾಯಿಂಟ್ಸ್ ಗಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹದಿನೈದು ದಿನಗಳ ಹಿಂದೆ ನಡೆದ ಶೇಖ್ ರಸೆಲ್ ಗ್ರ್ಯಾಂಡ್‌ಮಾಸ್ಟರ್‌ ಟೂರ್ನಿಯಲ್ಲಿ ಮಿತ್ರಾಭ ತಮ್ಮ ಎರಡನೇ ಜಿಎಂ ನಾರ್ಮ್ ಗಳಿಸಿದ್ದರು. ಅಲ್ಲದೆ ಎರಡನೇ ಸುತ್ತಿನಲ್ಲಿ 2500 ಎಲೋ ರೇಟಿಂಗ್‌ ತಡೆಗೋಡೆ ದಾಟಿದ್ದರು.

ಅಖಿಲ ಭಾರತ ಚೆಸ್ ಫೆಡರೇಷನ್, ಮಾಜಿ ವಿಶ್ವ ಚಾಂಪಿಯನ್ ಮತ್ತು ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರು  ಮಿತ್ರಾಭ ಅವರನ್ನು ಅಭಿನಂದಿಸಿದ್ದಾರೆ.

ಸಂಕಲ್ಪ್‌ ಗುಪ್ತಾ ಅವರು ಸರ್ಬಿಯಾದ ಅರಂಜೆಲೊವಾಕ್‌ನಲ್ಲಿ ನಡೆದ ಇನ್ನೊಂದು ಟೂರ್ನಿಯಲ್ಲಿ ಸೋಮವಾರ ಭಾರತದ 71ನೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದರು.  ನಡೆದ ಜಿಎಂ ಆಸ್ಕ್‌ 3 ರೌಂಡ್ ರಾಬಿನ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ಅವರು ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ ಸಂಪಾದಿಸಿಕೊಂಡಿದ್ದರು.

ಅರ್ಜುನ್‌ಗೆ ಮೂರನೇ ಸ್ಥಾನ: ಭಾರತದ ಗ್ರ್ಯಾಂಡ್‌ಮಾಸ್ಟರರ್‌ ಅರ್ಜುನ್ ಎರಿಗೈಸಿ ಅವರು ಲಾತ್ವಿಯಾದ ರಿಗಾದಲ್ಲಿ ನಡೆದ ಲಿಂಡೊರಸ್‌ ಅಬೆ ಬ್ಲಿಟ್ಜ್ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಿದರು.

18ರ ಹರೆಯದ ಅರ್ಜುನ್ ಟೂರ್ನಿಯಲ್ಲಿ ಅಮೋಘ ಆರಂಭ ಪಡೆದಿದ್ದರು. ಮೊದಲ ಒಂಬತ್ತು ಪಂದ್ಯಗಳನ್ನು ಗೆದ್ದುಕೊಂಡಿದ್ದರು.  ಒಟ್ಟು 13.5 ಪಾಯಿಂಟ್ಸ್ ಗಳಿಸಿದರು.

ಸದ್ಯ ಅರ್ಜುನ್ ಅವರ ಬಳಿ 107.2 ಬ್ಲಿಟ್ಜ್ ರೇಟಿಂಗ್ ಪಾಯಿಂಟ್ಸ್ ಇದ್ದು ವಿಶ್ವದ ಅಗ್ರ 30 ಆಟಗಾರರಲ್ಲಿ ಸ್ಥಾನ ಗಳಿಸಿದ್ದಾರೆ.

ಉಕ್ರೇನ್‌ನ ಕಿರಿಲ್ ಶೆವ್‌ಚೆಂಕೊ (14 ಪಾಯಿಂಟ್ಸ್) ಪ್ರಶಸ್ತಿ ಗೆದ್ದುಕೊಂಡರೆ, ಅಮೆರಿಕದ ಫ್ಯಾಬಿಯಾನೊ ಕ್ಯಾರುವಾನಾ ರನ್ನರ್ಸ್ ಅಪ್ ಆದರು. ಕ್ಯಾರುವಾನಾ ಕೂಡ 13.5 ಪಾಯಿಂಟ್ಸ್ ಗಳಿಸದರೂ ಟೈಬ್ರೇಕರ್‌ ಸ್ಕೋರ್‌ನ ಆಧಾರದಲ್ಲಿ ಅರ್ಜುನ್ ಅವರನ್ನು ಅಮೆರಿಕ ಆಟಗಾರ ಹಿಂದಿಕ್ಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು