ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೂಡಿಕೆ ಒತ್ತಾಯಕ್ಕೆ ಇನ್ನಷ್ಟು ಬಲ

ಒಲಿಂಪಿಕ್ಸ್‌: ವಿಳಂಬ ಮಾಡುವಂತೆ ಆಗ್ರಹಿಸಿದ ಸರ್ಬಿಯಾ, ಕ್ರೊವೇಷಿಯಾ
Last Updated 22 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಅಥೆನ್ಸ್‌ (ರಾಯಿಟರ್ಸ್‌): ಒಲಿಂಪಿಕ್ ಕ್ರೀಡೆಗಳನ್ನು ಮುಂದೂಡುವಂತೆ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮೇಲೆ ಒತ್ತಡ ಭಾನುವಾರ ಇನ್ನಷ್ಟು ಹೆಚ್ಚಿದೆ. ಕೊರೊನಾ ಸಾಂಕ್ರಾಮಿಕ ಪಿಡುಗು ಎಲ್ಲೆಡೆ ಹಬ್ಬುತ್ತಿರುವ ಕಾರಣ ಅಥ್ಲೀಟುಗಳು, ತಂಡಗಳು, ಕ್ರೀಡಾ ಫೆಡರೇಷನ್‌ಗಳಿಂದ ಟೋಕಿಯೊ ಕ್ರೀಡೆಗಳನ್ನು ಮುಂದೂಡಲು ಒತ್ತಾಯಿಸಿವೆ.

ಕ್ರೀಡೆ ನಿಗದಿಯಂತೆ ನಡೆಯುತ್ತದೆ ಎಂದು ಹೇಳುತ್ತ ಬಂದಿದ್ದ ಐಒಸಿ ಅಧ್ಯಕ್ಷ ಥಾಮಸ್‌ ಬ್ಯಾಚ್‌ ಕೂಡ ಭಾನುವಾರವೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಆದರೆ, ‘ಒಲಿಂಪಿಕ್‌ ಕ್ರೀಡೆಗಳ ಸಮಯ ಬದಲಾವಣೆ ಮಾಡುವುದು, ಬೇರೆ ಕ್ರೀಡೆಗಳನ್ನು ಮುಂದೂಡಿದಂತಲ್ಲ. ಇದಕ್ಕೆ ತುಂಬಾ ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕಾಗುತ್ತದೆ’ ಎಂದಿದ್ದಾರೆ.

‘ಫುಟ್‌ಬಾಲ್‌ ಪಂದ್ಯವೊಂದನ್ನು ಮುಂದಿನ ವಾರಕ್ಕೆ ಮುಂದೂಡುವ ರೀತಿ ಒಲಿಂಪಿಕ್ಸ್‌ ಮುಂದಕ್ಕೆ ಹಾಕಲು ಆಗುವುದಿಲ್ಲ’ ಎಂದು ಅವರು ಜರ್ಮನಿಯ ಬಾನುಲಿಯೊಂದಕ್ಕೆ ತಿಳಿಸಿದ್ದಾರೆ.

ಇದೇ ವೇಳೆ, ಕ್ರೀಡೆಗಳನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು. ‘ಕ್ರೀಡೆಗಳನ್ನು ರದ್ದು ಮಾಡುವುದರಿಂದ 206 ಒಲಿಂಪಿಕ್‌ ಸಂಸ್ಥೆಗಳ 11 ಸಾವಿರ ಅಥ್ಲೀಟುಗಳ ಕನಸನ್ನು ಚಿವುಟಿಹಾಕಿದಂತೆ ಆಗುತ್ತದೆ’ ಎಂದರು.

ಸದ್ಯ ಐಒಸಿ ಮತ್ತು ಟೋಕಿಯೊ ಕ್ರೀಡೆಗಳ ಸಂಘಟಕರು ಜುಲೈ 24 ರಿಂದ ಆಗಸ್ಟ್‌ 9ರವರೆಗೆ ನಿಗದಿಯಾಗಿರುವ ಸಮಯದಲ್ಲೇ ಒಲಿಂಪಿಕ್ಸ್‌ ನಡೆಸಲು ಮುಂದಾಗಿದ್ದಾರೆ. ಆದರೆ ಕೊರೊನಾ ಸೋಂಕು ವಿಶ್ವದೆಲ್ಲೆಡೆ ಹರಡುತ್ತಿದ್ದು, ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಗೆ ಕಾರಣವಾಗುತ್ತಿರುವುದರಿಂದ, ಕಡೇಪಕ್ಷ ಕ್ರೀಡೆಗಳನ್ನು ಮುಂದೂಡುವಂತೆ ಒತ್ತಡ ಏರುತ್ತಿದೆ.

ಸರ್ಬಿಯಾ, ಕ್ರೊವೇಷಿಯಾ ಒತ್ತಾಯ:

ಐಒಸಿ ನಿಲುವನ್ನು ವಿರೋಧಿಸಿ ಕ್ರೀಡೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿರುವ ಒಲಿಂಪಿಕ್‌ ಸಂಸ್ಥೆಗಳ ಸಾಲಿಗೆ ಸರ್ಬಿಯಾ ಮತ್ತು ಕ್ರೊವೇಷಿಯಾ ದೇಶಗಳು ಸೇರಿಕೊಂಡಿವೆ.

‘ಜಪಾನ್‌ ವಿಶ್ವದ ಅತಿ ದೊಡ್ಡ ಕ್ರೀಡಾ ಮೇಳಕ್ಕೆ ಸಾಕಷ್ಟು ಹಣ ತೊಡಗಿಸಿದೆ. ಹೀಗಾಗಿ ಕ್ರೀಡೆಗಳು ನಡೆಯಬೇಕೆಂದು ಪಟ್ಟು ಹಿಡಿದಿದೆ. ಆದರೆ ಇದು ತಿಳಿವಳಿಕೆಯಿಲ್ಲದ ನಡೆ. ನಾವು ಇದನ್ನು ಬೆಂಬಲಿಸುವುದಿಲ್ಲ. ಮನುಷ್ಯಜೀವಕ್ಕೆ ಮೊದಲು ಬೆಲೆ ಕೊಡಬೇಕು’ ಎಂದು ಸರ್ಬಿಯಾ ಒಲಿಂಪಿಕ್‌ ಸಮಿತಿ ಅಧ್ಯಕ್ಷ ವಂಜಾ ವುಡೊವಿಸಿಕ್‌ ಟೀಕಿಸಿದ್ದಾರೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಒಲಿಂಪಿಕ್ಸ್‌ ಸಮಯಕ್ಕೆ ನಡೆಸುವುದು ಅಸಾಧ್ಯ ಎಂದು ಕ್ರೊವೇಷಿಯಾ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಸ್ಲಾಟ್ಕೊ ಮೆಟೆಸಾ ಹೇಳಿದ್ದಾರೆ. ‘ಕ್ರೀಡೆಗಳನ್ನು ಮುಂದೂಡಬೇಕೆಂದು ಯಾರೂ ಬಯಸುವುದಿಲ್ಲ. ಆದರೆ ನಾವು ಆ ಪರಿಸ್ಥಿತಿಗೆ ಹತ್ತಿರವಿದ್ದೇವೆ. ಇಡಿ ಯುರೋಪ್‌ನಲ್ಲಿ ಕ್ರೀಡೆಗಳು ಮುಂದಕ್ಕೆ ಹೋಗಿದ್ದಾರೆ. ಮತ್ತೆ ಯಾವಾಗ ಆರಂಭವಾಗುವುದೊ ಯಾರಿಗೂ ಗೊತ್ತಿಲ್ಲ’ ಎಂದಿದ್ದಾರೆ ಮೆಟೆಸಾ.

ಅಮೆರಿಕದ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಸಂಸ್ಥೆ, ಬ್ರೆಜಿಲ್‌ ಒಲಿಂಪಿಕ್‌ ಸಮಿತಿ, ಇಂಗ್ಲೆಂಡ್‌ ಅಥ್ಲೆಟಿಕ್‌ ಸಂಸ್ಥೆ, ಫ್ರಾನ್ಸ್‌ನ ಈಜು ಸಂಸ್ಥೆ ಈಗಾಗಲೇ ಈ ಬಹುಕೋಟಿ ಮೌಲ್ಯದ ಕ್ರೀಡಾಮೇಳ ಮುಂದೂಡುವಂತೆ ಐಒಸಿಗೆ ಒತ್ತಾಯಿಸಿವೆ.

ಹೆಚ್ಚಿನ ಅಥ್ಲೀಟುಗಳಿಗೆ ತರಬೇತಿ ಪಡೆಯಲು ಆಗುತ್ತಿಲ್ಲ. ಕೆಲವು ಕ್ರೀಡೆಗಳಲ್ಲಿ ಒಲಿಂಪಿಕ್ಸ್‌ ಅರ್ಹತಾ ಕೂಟಗಳನ್ನು ರದ್ದುಗೊಳಿಸಲಾಗಿದೆ. ಕೆಲವನ್ನು ಮುಂದೂಡಲಾಗಿದೆ. ಲಾಕ್‌ಡೌನ್‌ ಇರುವ ಕಾರಣ, ತರಬೇತಿ, ಸೌಕರ್ಯಗಳ ಬಳಕೆಗೂ ಅಡ್ಡಿಯಾಗುತ್ತಿದೆ.

ಸೋಂಕು ಪಸರಿಸದಂತೆ ಮುಂಜಾಗರೂಕತಾ ಕ್ರಮವಾಗಿ ದೇಶಗಳ ಮಧ್ಯೆ ಗಡಿನಿರ್ಬಂಧ ವಿಧಿಸಲಾಗಿದೆ.ಸುಮಾರು ಮೂರೂವರೆ ತಿಂಗಳ ಅವಧಿಯಲ್ಲಿ 13 ಸಾವಿರ ಜನರು ಕೋವಿಡ್‌ –19 ಪರಿಣಾಮ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT