ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಎ | ಚುನಾವಣೆ ಸ್ಪರ್ಧೆಗೆ ಬಾತ್ರಾ ಅರ್ಹರಿರಲಿಲ್ಲ

ಅಧ್ಯಕ್ಷರ ಆಯ್ಕೆ ಪ್ರಶ್ನಿಸಿದ ಮಿತ್ತಲ್‌
Last Updated 9 ಜೂನ್ 2020, 16:56 IST
ಅಕ್ಷರ ಗಾತ್ರ

ನವದೆಹಲಿ: ನರಿಂದರ್ ಬಾತ್ರಾ ಅವರು ಭಾರತ ಒಲಿಂಪಿಕ್‌ ಅಸೋಸಿಯೇಷನ್‌ (ಐಒಎ) ಅಧ್ಯಕ್ಷರಾಗಿ ಈಗ ಎರಡೂವರೆ ವರ್ಷಗಳು ಕಳೆದಿವೆ. ಆದರೆ ಅಂದಿನ ನಿಯಮಗಳ ಪ್ರಕಾರ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೂ ಅರ್ಹರಾಗಿರಲಿಲ್ಲ ಎಂದು ಅಸೋಸಿಯೇಷನ್‌ನ ಉಪಾಧ್ಯಕ್ಷರೊಬ್ಬರು ಈಗ ಆಕ್ಷೇಪಣೆ ಎತ್ತಿದ್ದಾರೆ.

ಈ ಕುರಿತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್‌ಐಎಚ್‌) ಪತ್ರ ಬರೆದಿರುವ ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್‌, ‘ಪ್ರಮುಖ ಸಂಗತಿಯೊಂದನ್ನು ಮುಚ್ಚಿಟ್ಟ ಕಾರಣ ಬಾತ್ರಾ ಅವರು ದೇಶದ ಉನ್ನತ ಕ್ರೀಡಾ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಾಯಿತು’ ಎಂದು ಆರೋಪಿಸಿದ್ದಾರೆ.

‘ಬಾತ್ರಾ ಅವರಿಗೆ ಎರಡು ವಿಷಯಗಳಲ್ಲಿ ಅರ್ಹತೆ ಇರಲಿಲ್ಲ. ಅಲ್ಲದೆ 2017ರಲ್ಲಿ ಎಫ್‌ಐಎಚ್‌ ಅಧ್ಯಕ್ಷರಾಗಲೂ ಅವರು ಪ್ರಭಾವ ಬೀರಿದ್ದರು’ ಎಂದು ಮಿತ್ತಲ್‌ ಹೇಳಿದ್ದಾರೆ.

ಐಒಎಯ ಉನ್ನತ ಅಧಿಕಾರಿಗಳ ನಡುವೆ ನಡೆಯುತ್ತಿರುವ ಕಲಹದ ಮಧ್ಯೆಯೇ ಬಾತ್ರಾ ಅವರ ಚುನಾವಣೆಯ ‘ಅಕ್ರಮ’ ಕುರಿತು ಮಿತ್ತಲ್ ಅವರ ಆರೋಪಗಳು ಕೇಳಿಬಂದಿವೆ.

ಈ ಕುರಿತು ಮಾತನಾಡಿರುವ ಬಾತ್ರಾ ‘ಗೃಹಬಂಧನ’ (ಹೋಮ್‌ ಕ್ವಾರಂಟೈನ್‌) ಅವಧಿ ಮುಗಿದ ಬಳಿಕ ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ.

ಮಿತ್ತಲ್‌ ಅವರ ಪ್ರಮುಖ ಆರೋಪವೆಂದರೆ ‘ಐಒಎ ಕಾಯ್ದೆ 2013ರ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯು ಹಿಂದಿನ ಕಾರ್ಯಕಾರಿ ಸಮಿತಿಯ ಸದಸ್ಯನಾಗಿರಬೇಕಿತ್ತು. ಆದರೆ ಬಾತ್ರಾ ಅವರು ಸದಸ್ಯ ಆಗಿರಲಿಲ್ಲ.

‘ಚುನಾವಣಾ ಸ್ಪರ್ಧೆಗೆ ಕೊನೆಯ ಕೌನ್ಸಿಲ್‌ ಸದಸ್ಯ ಮಾತ್ರ ಆಗಿರಬೇಕೆಂಬ ಮೊದಲಿದ್ದ ನಿಯಮವನ್ನು, ನವೆಂಬರ್‌ 29, 2017ರಂದು ನಡೆದ ಕೊನೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಹಿಂದಿನ ಎರಡು ಕೌನ್ಸಿಲ್‌ಗಳ ಸದಸ್ಯ ಇದ್ದರೂ ಸ್ಪರ್ಧಿಸಬಹುದು ಎಂದು ಬದಲಾಯಿಸಲಾಯಿತು’ ಎಂಬುದು ಮಿತ್ತಲ್‌ ಅವರ ಆರೋಪವಾಗಿದೆ.

ಬಾತ್ರಾ ಅವರು 2017ರ ಡಿಸೆಂಬರ್‌ 14ರಂದು ಐಒಎ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT