ಶುಕ್ರವಾರ, ಆಗಸ್ಟ್ 6, 2021
21 °C

ಬೆಂಗಳೂರಿನಲ್ಲಿ ಹಾಕಿ ಶಿಬಿರ ಪುನರಾರಂಭ ಸದ್ಯಕ್ಕಿಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರಿನಲ್ಲಿ ಇದೇ 19ರಂದು ಪುನರಾರಂಭಗೊಳ್ಳಬೇಕಿದ್ದ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ತರಬೇತಿ ಶಿಬಿರವು ಮುಂದೂಡಿಕೆಯಾಗಲಿದೆ. ಬೆಂಗಳೂರು ನಗರದಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಶಿಬಿರ ಆರಂಭಗೊಳ್ಳುತ್ತಿಲ್ಲ. 

ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಈ ಶಿಬಿರವು ಆರಂಭವಾಗಬೇಕಿತ್ತು. ಆದರೆ ಸಿಲಿಕಾನ್‌ ಸಿಟಿಯಲ್ಲಿನ ಗಂಭೀರ ಪರಿಸ್ಥಿತಿಯ ಕಾರಣ ಶಿಬಿರವನ್ನು ಮುಂದೂಡದೇ ಸಾಯ್‌ಗೆ ಬೇರೆ ದಾರಿಯಿಲ್ಲ.

ಕೊರೊನಾ ಕಾರಣ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದ ಸಂದರ್ಭದಲ್ಲಿ ಆಟಗಾರರು ಸಾಯ್‌ನ ಕೇಂದ್ರದಲ್ಲಿ ಬಂದಿಯಾಗಿದ್ದರು. ಬಳಿಕ ಬಿಡುವು ಪಡೆದು ತಮ್ಮ ಮನೆಗಳಿಗೆ ತೆರಳಿದ್ದರು. ಇದೇ 19ಕ್ಕೆ ಸಾಯ್‌ ಕೇಂದ್ರಕ್ಕೆ ಮರಳುವ ನಿರೀಕ್ಷೆಯಿತ್ತು.

’ಹಾಕಿ ಶಿಬಿರ ಪುನರಾರಂಭಿಸುವ ಕುರಿತು ನಮಗೆ ಇದುವರೆಗೆ ಯಾವುದೇ ಸೂಚನೆಗಳು ಬಂದಿಲ್ಲ. ಜೂನ್‌ 18ರಂದು ಆಟಗಾರರನ್ನು ಅವರ ಮನೆಗೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ನಮಗೆ ಹೇಳಲಾಗಿತ್ತು. ಆದರೆ ಶಿಬಿರಗಳನ್ನು ಮರು ಆರಂಭಿಸುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಜುಲೈ 22ರವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದೆ. ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಈ ತಿಂಗಳ ಅಂತ್ಯದವರೆಗೆ ಲಾಕ್‌ಡೌನ್‌ ವಿಸ್ತರಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ಶಿಬಿರವನ್ನು ಆರಂಭಿಸಲು ಸದ್ಯಕ್ಕೆ ಸಾಧ್ಯವಿಲ್ಲ‘ ಎಂದು ಸಾಯ್‌ನ‌ ಮೂಲಗಳು ಸ್ಪಷ್ಟಪಡಿಸಿವೆ.

ಶಿಬಿರವನ್ನು ಪುನರಾರಂಭಿಸುವ ಕುರಿತು ಇಲ್ಲಿನ ಸಾಯ್‌ ಕಚೇರಿಯು ಇನ್ನಷ್ಟೇ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆದರೆ ಕ್ರೀಡಾ ಸಚಿವಾಲಯವು, ದೆಹಲಿ ಹೈಕೋರ್ಟ್‌ನ ಆದೇಶದಂತೆ ಹಾಕಿ ಇಂಡಿಯಾ ಸೇರಿದಂತೆ 54 ಕ್ರೀಡಾ ಫೆಡರೇಷನ್‌ಗಳ ಮಾನ್ಯತೆಯನ್ನು ಹಿಂಪಡೆದಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.

’ಸಚಿವಾಲಯವು ನಮ್ಮ ಫೆಡರೇಷನ್‌ನ ಮಾನ್ಯತೆಯನ್ನು ಹಿಂಪಡೆದಿರುವುದರಿಂದ ರಾಷ್ಟ್ರೀಯ ಶಿಬಿರಗಳ ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ‘ ಎಂದು ಹಾಕಿ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಟಗಾರರೊಬ್ಬರು ’ಶಿಬಿರ ಪುನರಾರಂಭದ ಕುರಿತು ನಮಗೆ ಯಾರಿಂದಲೂ ಮಾಹಿತಿ ಬಂದಿಲ್ಲ. ಶಿಬಿರ ಪುನರಾರಂಭ ಹಾಗೂ ಪ್ರಯಾಣದ ವ್ಯವಸ್ಥೆ ಕುರಿತು ಮಾಹಿತಿ ನೀಡಲಾಗುವುದು ಎಂದು ನಮಗೆ ಹೇಳಲಾಗಿತ್ತು. ಆದರೆ ಸದ್ಯ ಅಂತಹ ಯಾವುದೇ ಸೂಚನೆ ಬಂದಿಲ್ಲ‘ ಎಂದರು.

ಪುರುಷರ ಹಾಕಿ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹಾಗೂ ಎರಡೂ ತಂಡಗಳ ವೈಜ್ಞಾನಿಕ ಸಲಹೆಗಾರರಾದ ರಾಬಿನ್‌ ಅರ್ಕೆಲ್‌ ಮತ್ತು ವೇಯ್ನ್‌ ಲೊಂಬಾರ್ಡ್‌ ಸದ್ಯ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು