ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರೇಕ್ಷಕರಿಲ್ಲದೆಯೂ ಒಲಿಂಪಿಕ್ಸ್’ ಆಯ್ಕೆ ನಮ್ಮ ಮುಂದಿದೆ: ಹಶಿಮೋಟೊ

Last Updated 25 ಜೂನ್ 2021, 12:55 IST
ಅಕ್ಷರ ಗಾತ್ರ

ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ಅನ್ನು ಪ್ರೇಕ್ಷರಿಲ್ಲದೆಯೂ ನಡೆಸುವ ಆಯ್ಕೆ ನಮ್ಮ ಮುಂದಿದೆ ಎಂದು ಟೋಕಿಯೊ ಕೂಟದ ಆಯೋಜನಾ ಸಮಿತಿ ಶುಕ್ರವಾರ ತಿಳಿಸಿದೆ. ಕ್ರೀಡಾಕೂಟ ಆರಂಭಕ್ಕೆ ಕೇವಲ ನಾಲ್ಕು ವಾರಗಳು ಉಳಿದಿರುವಂತೆಯೇ ಸಮಿತಿ ಈ ಮಾತು ಹೇಳಿದೆ.

ಒಳಾಂಗಣ ಅಥವಾ ಹೊರಾಂಗಣಗಳಲ್ಲಿ ನಡೆಯುವ ಯಾವುದೇ ಸ್ಪರ್ಧೆಗಳಿಗೆ ಸ್ಥಳೀಯ 10 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದು ಎಂದು ಸೋಮವಾರ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಅಧ್ಯಕ್ಷೆ ಶೀಕೊ ಹಶಿಮೋಟೊ ಹೇಳಿದ್ದರು. ಈ ಸಂಖ್ಯೆ ಕ್ರೀಡಾಂಗಣ ಸಾಮರ್ಥ್ಯದ ಶೇಕಡಾ 50ರಷ್ಟು ಮೀರಬಾರದು ಎಂದು ನುಡಿದಿದ್ದರು.

ವಿದೇಶದಿಂದ ಬರುವ ಪ್ರೇಕ್ಷಕರ ಮೇಲೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಸ್ಥಳೀಯರಿಗೆ ಅನುಮತಿ ನೀಡಬೇಕೋ ಬೇಡವೊ ಎಂಬುದನ್ನು ನಿರ್ಧರಿಸಲು ಆಯೋಜಕರು ಹಲವು ತಿಂಗಳುಗಳಿಂದ ಮೀನಮೇಷ ಎಣಿಸುತ್ತಿದ್ದಾರೆ. ಕೋವಿಡ್‌ ಕಾರಣ, ಪ್ರೇಕ್ಷಕರಿಲ್ಲದೆ ಕೂಟ ನಡೆಸಬೇಕೆಂಬುದು ಹಲವು ವೈದ್ಯಕೀಯ ಪರಿಣತರ ವಾದವಾಗಿದೆ.

‘ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್ ನಡೆಸುವ ಆಯ್ಕೆ ನಮಗೆ ಇನ್ನೂ ಉಳಿದಿದೆ. ಆ ಕುರಿತು ಗಮನಹರಿಸಲಾಗುವುದು. ದಿನದಿಂದ ದಿನಕ್ಕೆ ಪರಿಸ್ಥಿತಿ ಬದಲಾಗುತ್ತಿದೆ. ಇದಕ್ಕೆ ನಾವು ಸ್ಪಂದಿಸಬೇಕಾಗುತ್ತದೆ. ಹೀಗಾಗಿ ಒಂದೇ ನಿರ್ಧಾರಕ್ಕೆ ಅಂಟಿಕೊಂಡು ಕೂರಲಾಗುವುದಿಲ್ಲ‘ ಎಂದು ಸುದ್ದಿಗೋಷ್ಠಿಯಲ್ಲಿ ಹಶಿಮೋಟೊ ಹೇಳಿದ್ದಾರೆ.

ಟೋಕಿಯೊದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುವ ಸೂಚನೆ ಕಾಣಿಸುತ್ತಿದೆ ಎಂದು ಟೋಕಿಯೊ ಮಹಾನಗರ ಆಡಳಿತದ ಕೋವಿಡ್ -19 ಸಮಿತಿಯು ಗುರುವಾರ ವರದಿ ಮಾಡಿದೆ. ಹೀಗಾಗಿ ಪ್ರೇಕ್ಷಕರಿಗೆ ಪ್ರವೇಶ ನೀಡುವ ಕುರಿತುಆಯೋಜಕರು ಸ್ವಲ್ಪ ಹಿಂದೆ ಸರಿದಂತೆ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT