ಗುರುವಾರ , ಏಪ್ರಿಲ್ 15, 2021
23 °C

ಮಹಾರಾಷ್ಟ್ರ ಅಥ್ಲೆಟಿಕ್ ಸಂಸ್ಥೆಯಲ್ಲಿ ಲಲಿತಾ ಬಾಬರ್, ಕವಿತಾ ರಾವತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಒಲಿಂಪಿಯನ್ ಮತ್ತು ದೀರ್ಘದೂರ ಓಟಗಾರ್ತಿಯರಾದ ಲಲಿತಾ ಬಾಬರ್ ಹಾಗೂ ಕವಿತಾ ರಾವತ್ ಅವರನ್ನು ಮಹಾರಾಷ್ಟ್ರ ಅಥ್ಲೆಟಿಕ್ ಸಂಸ್ಥೆಯ (ಎಂಎಎಚ್‌) ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ರಾವತ್ ಅವರನ್ನು ಅಥ್ಲೆಟಿಕ್ ಆಯೋಗದ ಮುಖ್ಯಸ್ಥರನ್ನಾಗಿಯೂ ಬಾಬರ್ ಅವರನ್ನು ಶಿಸ್ತು ಸಮಿತಿಯ ಮುಖ್ಯಸ್ಥರಾಗಿಯೂ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತೀಶ್ ಉಚ್ಚಿಲ ತಿಳಿಸಿದ್ದಾರೆ.

ಒಲಿಂಪಿಯನ್‌ ರಚಿತಾ ಮಿಸ್ತ್ರಿ ಮತ್ತು ಆನಂದ್ ಮೆನೆಜಸ್ ಅವರನ್ನೂ ಕಾರ್ಯಕಾರಿ ಸಮಿತಿಗೆ ನೇಮಕ ಮಾಡಲಾಗಿದೆ. ಮಿಸ್ತ್ರಿ ಮಹಿಳಾ ಸಮಿತಿಯ ಮುಖ್ಯಸ್ಥರಾಗಿಯೂ ಮೆನೆಜಸ್ ಅವರು ಮ್ಯಾರಥಾನ್ ಮತ್ತು ರೋಡ್ ರೇಸ್‌ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಅಂತರರಾಷ್ಟ್ರೀಯ ಅಥ್ಲೀಟ್‌ ಹೋಮಿಯರ್ ಮಿಸ್ತ್ರಿ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಸಂಸ್ಥೆಯ ಅಧ್ಯಕ್ಷರಾಗಿ ಆದಿಲೆ ಸುಮರಿವಾಲಾ ಪುನರಾಯ್ಕೆಯಾಗಿದ್ದು ಅಂತರರಾಷ್ಟ್ರೀಯ ಅಥ್ಲೀಟ್‌ ಶರದ್ ಸೂರ್ಯವಂಶಿ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಐವರು ಒಲಿಂಪಿಯನ್‌ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಥ್ಲೀಟ್‌ಗಳನ್ನು ವಿವಿಧ ಸಮಿತಿಗಳಿಗೆ ನೇಮಕ ಮಾಡಿರುವ ಈ ದಿನ ಭಾರತದ ಕ್ರೀಡೆಯಲ್ಲಿ ಐತಿಹಾಸಿಕವಾದದ್ದು ಎಂದು ಸುಮರಿವಾಲಾ ಅಭಿಪ್ರಾಯಪಟ್ಟಿದ್ದಾರೆ.

2010ರ ಏಷ್ಯನ್ ಗೇಮ್ಸ್‌ನ 10 ಸಾವಿರ ಮತ್ತು ಐದು ಸಾವಿರ ಮೀಟರ್ಸ್ ಓಟದಲ್ಲಿ ರಾವತ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿದ್ದರು. 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಅವರು ಕಂಚಿನ ಪದಕ ಗೆದ್ದಿದ್ದರು. ಬಾಬರ್‌, 2014ರ ಏಷ್ಯನ್ ಗೇಮ್ಸ್‌ನ ಮೂರು ಸಾವಿರ ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಇದೇ ವಿಭಾಗದಲ್ಲಿ 2016ರ ಒಲಿಂಪಿಕ್ಸ್ ಮತ್ತು 2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಫೈನಲ್ ಪ್ರವೇಶಿಸಿದ್ದರು. ಮೂರು ಸಾವಿರ ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ (9:19.76) ಅವರ ಹೆಸರಿನಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು