ಶುಕ್ರವಾರ, ಏಪ್ರಿಲ್ 3, 2020
19 °C
ಮುಂದೂಡಿಕೆ ಆನಿವಾರ್ಯ ಎಂದು ಒಪ್ಪಿದ ಜಪಾನ್‌ ಪ್ರಧಾನಿ

ಒಲಿಂಪಿಕ್ಸ್: ಹಿಂದೆ ಸರಿದ ನಾರ್ವೆ, ಕೆನಡಾ; ಐಒಸಿಗೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಎಎಫ್‌ಪಿ): ಒಲಿಂಪಿಕ್ಸ್‌ ಕ್ರೀಡೆಗಳನ್ನು ಮುಂದೂಡುವುದು ಸೋಮವಾರ ಖಚಿತವಾಯಿತು. ಜುಲೈ 24ರಿಂದ ಆಗಸ್ಟ್ 9ರವರೆಗೆ ಟೋಕಿಯೊದಲ್ಲಿ ನಿಗದಿಯಾಗಿರುವ ಕ್ರೀಡೆಗಳಿಂದ ಹಿಂದೆ ಸರಿಯುವುದಾಗಿ ಕೆನಡಾ ಹೇಳಿದೆ. ಜಪಾನ್‌ ಪ್ರಧಾನಿ ಶಿಂಜೊ ಅಬೆ ಕೂಡ ‘ಒಲಿಂಪಿಕ್ಸ್‌ ವಿಳಂಬ ಅನಿವಾರ್ಯ’ ಎಂದು ಒಪ್ಪಿಕೊಂಡಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಮುಖ್ಯಸ್ಥ ಸೆಬಾಸ್ಟಿಯನ್‌ ಕೊ ಕೂಡ ಕ್ರೀಡೆಗಳನ್ನು ಮುಂದೂಡುವಂತೆ ಕರೆ ನೀಡಿದ್ದಾರೆ. ಇನ್ನೊಂದು ಕಡೆ ಆಸ್ಟ್ರೇಲಿಯಾ ತನ್ನ ಆಥ್ಲೀಟುಗಳಿಗೆ ‘2021ರ ಒಲಿಂಪಿಕ್ಸ್‌’ಗೆ ಸಜ್ಜಾಗುವಂತೆ ಸೂಚನೆ ನೀಡಿದೆ. ಆ ಮೂಲಕ ಮುಂದೂಡಿಕೆಗೆ ಅಂತಿಮ ಘೋಷಣೆಯೊಂದೆ ಬಾಕಿ ಉಳಿದಿದೆ.

ಸೋಕು ಪಿಡುಗು ನಿಯಂತ್ರಣಕ್ಕೆ ಬರದ ಹೊರತು ಒಲಿಂಪಿಕ್ಸ್‌ಗೆ ಅಥ್ಲೀಟುಗಳನ್ನು ಕಳುಹಿಸುವುದಿಲ್ಲ ಎಂದು ನಾರ್ವೆ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಬೆರಿಟ್‌ ಕ್ಯೊಯೆಲ್‌ ತಿಳಿಸಿದ್ದಾರೆ.

ಇದುವರೆಗೆ ಜಪಾನ್‌ ಸರ್ಕಾರ ಮತ್ತು ಒಲಿಂಪಿಕ್‌ ಅಧಿಕಾರಿಗಳು, ಪೂರ್ವನಿರ್ಧರಿತ ಸಮಯದಲ್ಲೇ ಒಲಿಂಪಿಕ್ಸ್‌ ನಡೆಸುವುದಾಗಿ ಬಿಗಿಪಟ್ಟು ಹಿಡಿದಿದ್ದವು. ಆದರೆ ಕೊರೊನಾ ಸಾಂಕ್ರಾಮಿಕ ಪಿಡುಗು ಪೀಡೆ ದಿನದಿಂದ ದಿನಕ್ಕೆ ವ್ಯಾಪಿಸತೊಡಗಿದ್ದು, ಕೆಲವು ದಿನಗಳಿಂದ ಅಥ್ಲೀಟುಗಳಿಂದ ಮತ್ತು ಕ್ರೀಡಾ ಫೆಡರೇಷನ್‌ಗಳು ಮುಂದೂಡಿಕೆಗೆ ಒಕ್ಕೊರಲ ಒತ್ತಾಯ ಮಾಡತೊಡಗಿವೆ.

ಭಾನುವಾರ ಐಒಸಿ ಸಭೆಗೆ ಮೊದಲು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಕ್ ಅವರಿಗೆ ಬರೆದ ಪತ್ರದಲ್ಲಿ, ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್‌ ಕೊ ಅವರು ಕ್ರೀಡೆಗಳನ್ನು ಮುಂದೂಡುವಂತೆ ಆಗ್ರಹಿಸಿದ್ದಾರೆ.

ಕೊರೊನಾ ಸೋಂಕು ಪಿಡುಗು ವಿವಿಧ ಹಂತಗಳಲ್ಲಿದ್ದು, ಈ ಸಂದರ್ಭದಲ್ಲಿ ಒಲಿಂಪಿಕ್ಸ್‌ ನಡೆಸುವುದು ಕಾರ್ಯಸಾಧುವಲ್ಲ, ಸೂಕ್ತವೂ ಅಲ್ಲ ಎಂದು ಪತ್ರದಲ್ಲಿ ಕೊ ವಿವರಿಸಿದ್ದಾರೆ.

ಜಪಾನ್‌ ‘ಪೂರ್ಣ’ ಒಲಿಂಪಿಕ್ಸ್‌ ನಡೆಸಲು ಬಯಸಿದೆ ಎಂದು ಸೋಮವಾರ ಸಂಸತ್ತಿಗೆ ತಿಳಿಸಿರುವ ಪ್ರಧಾನಿ ಶಿಂಜೊ ಅಬೆ, ‘ಆದರೆ ಮುಂದೂಡಬೇಕಾದ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ಒಪ್ಪಿಕೊಂಡಿದ್ದಾರೆ.

‌ಈ ಹಿಂದೆ ಸಮಯಕ್ಕೆ ಸರಿಯಾಗಿ ಒಲಿಂಪಿಕ್ಸ್ ನಡೆಯುತ್ತದೆ ಎಂದು ಹೇಳಿದ್ದ ಐಒಸಿ ಕೂಡ ಬಿಗಿಪಟ್ಟು ಸಡಿಲಿಸಿದೆ. ‘ಒಲಿಂಪಿಕ್ಸ್‌ ನಡೆಸುವುದು ಸೇರಿದಂತೆ ಎಲ್ಲಕ್ಕಿಂತ ಮುಖ್ಯವಾಗುವುದು ಮನುಷ್ಯನ ಜೀವ’ ಎಂದು ತುರ್ತು ಮಾತುಕತೆಯ ನಂತರ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಆಥ್ಲೀಟುಗಳಿಗೆ ಬರೆದಿರುವ ಪತ್ರದಲ್ಲಿ  ತಿಳಿಸಿದ್ದಾರೆ.

‘ಕ್ರೀಡೆಗಳನ್ನು ರದ್ದು ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅದರಿಂದ ಯಾರಿಗೂ ಸಹಾಯವೂ ಆಗುವುದಿಲ್ಲ’ ಎಂದು ಹೇಳುವ ಮೂಲಕ ಕ್ರೀಡೆಗಳನ್ನು ರದ್ದು ಮಾಡುವುದಿಲ್ಲ ಎಂದು ಬಾಕ್‌ ಸ್ಪಷ್ಟಪಡಿಸಿದ್ದಾರೆ.

ಹಿಂದೆಸರಿದ ಕೆನಡಾ:

ಕೊರೊನಾ ಸೋಂಕಿನಿಂದ ಸಮುದಾಯಕ್ಕೆ ಒದಗುವ ಅಪಾಯ ಬೊಟ್ಟು ಮಾಡಿರುವ ಕೆನಡಾ ಒಲಿಂಪಿಕ್‌ ಸಂಸ್ಥೆಯು, ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ತಂಡ ಎನಿಸಿತು. ಕ್ರೀಡೆಗಳನ್ನು ಒಂದು ವರ್ಷ ಮುಂದೂಡುವಂತೆ ಸಂಸ್ಥೆ ಒತ್ತಾಯಿಸಿದೆ.

‘ಅಥ್ಲೀಟುಗಳ ಆರೋಗ್ಯ ಮಾತ್ರವಲ್ಲ. ಸಾರ್ವಜನಿಕ ಆರೋಗ್ಯವನ್ನೂ ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಕೆನಡಿಯನ್‌ ಒಲಿಂಪಿಕ್‌ ಸಮಿತಿ ಹೇಳಿದೆ.

ಐಒಸಿಯ ಮನೋಭಾವ ಹೊಣೆಗೇಡಿತನದಿಂದ ಕೂಡಿದೆ ಎಂದು 200 ಮೀ. ಓಟದ ವಿಶ್ವ ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌ನ ಓಟಗಾರ್ತಿ ಡೀನಾ ಆಷರ್‌ ಸ್ಮಿತ್ ಟೀಕಿಸಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‌‘ತರಬೇತಿಯನ್ನು ಹೇಗೆ ನಡೆಸಬೇಕೆಂಬ ಚಿಂತೆಯಲ್ಲಿರುವ ಅಥ್ಲೀಟುಗಳನ್ನು ಇನ್ನೂ ನಾಲ್ಕು ವಾರ ಕಾಯುವಂತೆ ಮಾಡಿದೆ’ ಎಂದಿದ್ದಾರೆ.

ಕೊರೊನಾ ಸೋಂಕಿನ ಪರಿಣಾಮ ವಿಶ್ವದಾದ್ಯಂತ 14,400 ಮಂದಿ ಮೃತಪಟ್ಟಿದ್ದಾರೆ.

‘ಟೋಕಿಯೊ ಕ್ರೀಡೆಗಳು ನಿಗದಿಯಂತೆ ನಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಹೇಳಿರುವ ಆಸ್ಟ್ರೇಲಿಯಾ ಒಲಿಂಪಿಕ್ ಸಮಿತಿ ಅಧಿಕಾರಿಗಳು, ಮುಂದಿನ ವರ್ಷಕ್ಕೆ ಸಜ್ಜಾಗಬೇಕೆಂದು ಅಥ್ಲೀಟುಗಳಿಗೆ ಸೂಚಿಸಿದ್ದಾರೆ.

ಅಮೆರಿಕದ ಅಥ್ಲೆಟಿಕ್‌ ದಂತಕಥೆ ಕಾರ್ಲ್‌ ಲೂಯಿಸ್‌ ಕೂಡ ಕ್ರೀಡೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದ ಖ್ಯಾತನಾಮರಲ್ಲಿ ಒಳಗೊಂಡಿದ್ದಾರೆ. ಫ್ರಾನ್ಸ್‌ ಮತ್ತು ಸ್ಪೇನ್‌ನ ಅಥ್ಲೆಟಿಕ್‌ ಸಂಸ್ಥೆಗಳೂ ಈ ನಿಲುವನ್ನು ಬೆಂಬಲಿಸಿವೆ.

ಈಗಾಗಲೇ ಕೋವಿಡ್‌ ಮಹಾಮಾರಿಯಿಂದಾಗಿ ಒಲಿಂಪಿಕ್‌ ಅರ್ತಹಾ ಕೂಟಗಳನ್ನು ರದ್ದುಮಾಡಲಾಗಿದೆ. ಕೆಲವು ಮುಂದೂಡಿಕೆಯಾಗಿವೆ. ಒಲಿಂಪಿಕ್‌ ಜ್ಯೋತಿಯಾತ್ರೆಯ ಮೇಲೂ ಇದರ ಪರಿಣಾಮವಾಗಿದೆ.

ಜ್ಯೋತಿ ಯಾತ್ರೆ ಮೊಟಕು ಸಾಧ್ಯತೆ

ಗುರುವಾರ ಆರಂಭವಾಗಬೇಕಿರುವ ಒಲಿಂಪಿಕ್‌ ಜ್ಯೋತಿ ಯಾತ್ರೆ (ಟಾರ್ಚ್‌ ರಿಲೆ) ನಿಗದಿಯಂತೆ ಆರಂಭವಾಗಲಿದೆ. ಆದರೆ ಕೊರೊನಾ ಸೋಂಕಿನಿಂದ ಪರಿಸ್ಥಿತಿ ಹದಗೆಟ್ಟರೆ ಮುಂದೆ, ಮರುವಿಮರ್ಶೆ ನಡೆಸುವುದಾಗಿ ಸಂಘಟಕರು ತಿಳಿಸಿದ್ದಾರೆ.

‘ಜ್ಯೋತಿ ಯಾತ್ರೆ ಇದೇ 26ರಂದು ಫುಕುಶಿಮಾದಿಂದ ಆರಂಭವಾಗಲಿದೆ. ಈ ಯೋಜನೆ ಬದಲಾಗಿಲ್ಲ’ ಎಂದು ಟೋಕಿಯೊ 2020 ಸಿಇಒ ತೊಶಿರೊ ಮುಟೊ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.  ‘ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ’ ಎಂದು ಮುಟೊ ಒಪ್ಪಿಕೊಂಡಿದ್ದಾರೆ.

ಜ್ಯೋತಿಯಾತ್ರೆಯ ಮೇಲೆ ಕೊರೊನಾ ಸೋಂಕು ಈಗಾಗಲೇ ಪರಿಣಾಮ ಬೀರಿದೆ. ಗ್ರೀಸ್‌ನಿಂದ ಒಲಿಂಪಿಕ್‌ ಜ್ಯೋತಿಯನ್ನು ವಿಶೇಷ ವಿಮಾನದಲ್ಲಿ ಶುಕ್ರವಾರ ಜಪಾನ್‌ಗೆ ತಂದಾಗ ಸಡಗರವಿರಲಿಲ್ಲ. 200 ಶಾಲಾ ಮಕ್ಕಳು ಭಾಗವಹಿಸಬೇಕಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಸಮಾರಂಭ ರದ್ದುಮಾಡಲಾಯಿತು. ಜ್ಯೋತಿ ಯಾತ್ರೆ ವೇಳೆ ಗುಂಪುಗೂಡದಂತೆಯೂ ಸೂಚಿಸಲಾಗಿತ್ತು.

ಕಳೆದ ವಾರಾಂತ್ಯ ಒಲಿಂಪಿಕ್‌ ಜ್ಯೋತಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಜನರು ಸೇರದಂತೆ ಮನವಿ ಮಾಡಿಕೊಂಡ ಸಂದರ್ಭದಲ್ಲೇ ಈ ರೀತಿ ಆಗಿರುವುದು ಸಂಘಟಕರನ್ನು ಚಿಂತೆಗೆ ದೂಡಿದೆ. ಜನ ಗುಂಪುಗೂಡದಂತೆ ಜಪಾನ್‌ ಒಲಿಂಪಿಕ್‌ ಸಮಿತಿ ಮನವಿ ಮಾಡಿತ್ತು. ಶನಿವಾರ ಮಿಯಾಗಿ ರೈಲು ನಿಲ್ದಾಣದಲ್ಲಿ ಒಲಿಂಪಿಕ್‌ ಜ್ಯೋತಿಯನ್ನು ಪ್ರದರ್ಶನಕ್ಕಿಟ್ಟ ವೇಳೆ 50 ಸಾವಿರಕ್ಕೂ ಹೆಚ್ಚು ಮಂದಿ ಗಂಟೆಗಟ್ಟಲೆ ಕಾಲ ಸಾಲಾಗಿ ನಿಂತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು