ಬುಧವಾರ, ಮೇ 18, 2022
23 °C
ಬೆಳ್ಳಿ ಪದಕ; 5 ಕೂಟ ದಾಖಲೆ

ಖೇಲೊ ಇಂಡಿಯಾ | ದ್ಯುತಿಗೆ ಸೋಲುಣಿಸಿದ ಪ್ರಿಯಾಗೆ ಡಬಲ್ ಚಿನ್ನ: ಮಂಗಳೂರು ಪಾರಮ್ಯ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾನುವಾರ ರಾತ್ರಿ ಮಳೆನಿಂತ ಮೇಲೆ ಟ್ರ್ಯಾಕ್‌ನಲ್ಲಿ ಮಿಂಚು ಮೂಡಿಸಿದ ಪ್ರಿಯಾ ಮೋಹನ್ ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಬೆಳಗಿದರು. ಒಲಿಂಪಿಯನ್ ದ್ಯುತಿ ಚಾಂದ್ ಅವರನ್ನು ಹಿಂದಿಕ್ಕಿ 200 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು. 14 ತಾಸುಗಳ ಒಳಗೆ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಕಳೆದ ಬಾರಿಯ ಚಾಂಪಿಯನ್ ದ್ಯುತಿ ಚಾಂದ್ ಮತ್ತು ಈ ಬಾರಿಯ ಅಂತರ ವಾರ್ಸಿಟಿ ಚಾಂಪಿಯನ್ ಪ್ರಿಯಾ ನಡುವಿನ 200 ಮೀಟರ್ಸ್ ಓಟದ ಸ್ಪರ್ಧೆ ಸ್ಪ್ರಿಂಟ್ ಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಮಳೆಯ ಸಾಧ್ಯತೆ ಇರುವುದರಿಂದ ಸಂಜೆಯ ಸ್ಪರ್ಧೆಗಳನ್ನು ಬೆಳಿಗ್ಗೆಯೇ ಆಯೋಜಿಸಲಾಗಿತ್ತು. ಶನಿವಾರ 100 ಮೀ ಓಟದಲ್ಲಿ ಚಿನ್ನ ಗೆದ್ದಿದ್ದ ದ್ಯುತಿ ಮತ್ತು ಭಾನುವಾರ 400 ಮೀ ಓಟದಲ್ಲಿ ಮೊದಲಿಗರಾಗಿದ್ದ ಪ್ರಿಯಾ ‘ಡಬಲ್‌’ ಸಾಧನೆಯ ಗುರಿಯೊಂದಿಗೆ ಟ್ರ್ಯಾಕ್‌ಗೆ ಇಳಿದಿದ್ದರು. 

6ನೇ ಲೇನ್‌ನಲ್ಲಿ ಓಡಿದ ಕಳಿಂಗ ವಿವಿಯ ದ್ಯುತಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ತವರಿನ ಅಂಗಣದ 5ನೇ ಲೇನ್‌ನಲ್ಲಿದ್ದ ಜೈನ್‌ ವಿವಿಯ ಪ್ರಿಯಾ ಅಂತಿಮ ಕ್ಷಣಗಳಲ್ಲಿ ಮುನ್ನುಗ್ಗಿ ಚಿನ್ನಕ್ಕೆ ಮುತ್ತಿಕ್ಕಿದರು. ತಮ್ಮದೇ ವಿವಿಯ ಮಧುಮಿತಾ ಮತ್ತು ರಾಂಚಿ ವಿವಿಯ ಫ್ಲಾಲೆನ್ಸ್ ಅವರಿಂದ ತೀವ್ರ ಪೈಪೋಟಿ ಎದುರಿಸಿದ ದ್ಯುತಿ ಅಂತಿಮ 50 ಮೀ ವರೆಗೂ ಭರವಸೆಯಲ್ಲೇ ಓಡಿದ್ದರು. ಆದರೆ ನಂತರ ಪ್ರಿಯಾ ಸ್ಪ್ರಿಂಟ್‌ ಹೆಚ್ಚಿಸಿಕೊಂಡು ದ್ಯುತಿಗೆ ನಿರಾಸೆ ಮೂಡಿಸಿದರು.

ಒಂದು ಸ್ಪರ್ಧೆ; ಎರಡು ದಾಖಲೆ; ಕರ್ನಾಟಕ ಪಾರಮ್ಯ
ಪುರುಷರ 200 ಮೀ ಓಟದ ಚಿನ್ನ ಮತ್ತು ಕಂಚು ಮಂಗಳೂರು ವಿವಿ ಪಾಲಾದರೆ ಬೆಂಗಳೂರು ವಿವಿ ಬೆಳ್ಳಿ ಗಳಿಸಿತು. 21.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆಯೊಂದಿಗೆ ವಿಘ್ನೇಶ್ ಮೊದಲಿಗರಾದರು. 21.39 ಸೆಕೆಂಡುಗಳೊಂದಿಗೆ ಶಶಿಕಾಂತ ಅಂಗಡಿ ಬೆಳ್ಳಿ ಗೆದ್ದರೆ ತೀರ್ಥೇಶ್ ಶೆಟ್ಟಿ ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. ಚಿನ್ನ ಮತ್ತು ಬೆಳ್ಳಿ ಗೆದ್ದ ಇಬ್ಬರೂ ದಾಖಲೆ ಮಾಡಿದರು. ವಿಘ್ನೇಶ್ 100 ಮೀ ಓಟದಲ್ಲೂ ಚಿನ್ನ ಗೆದ್ದಿದ್ದರು.

ಅಥ್ಲೆಟಿಕ್ಸ್‌ನ ಕೊನೆಯ ಸ್ಪರ್ಧೆಯಾದ ಮಹಿಳೆಯರ 4x400 ಮೀ ರಿಲೆಗೂ ಮೊದಲು ನಡೆದ ಪುರುಷರ 4x400 ಮೀ ರಿಲೆಯಲ್ಲಿ ಮಂಗಳೂರು ವಿವಿ ಅಮೋಘ ಓಟದೊಂದಿಗೆ ಕೂಟ ದಾಖಲೆ ನಿರ್ಮಿಸಿ ಚಿನ್ನ ಗಳಿಸಿತು. 4ನೇ ಲೇನ್‌ನಲ್ಲಿ ವಿವಿಯ ಪರ ಓಟ ಶುರು ಮಾಡಿದ ಮಹಾಂತೇಶ್ ಅವರು ಮದುರೈ, ಕ್ಯಾಲಿಕಟ್ ಮತ್ತು ಮಹರ್ಷಿ ದಯಾನಂದ ವಿವಿಯ ಸವಾಲು ಮೀರಿ ಮುನ್ನುಗ್ಗಿದರು. 2ನೇ ಲೆಗ್‌ನಲ್ಲಿ ದೇವಯ್ಯ ಕೂಡ ಮುನ್ನಡೆ ಗಳಿಸಿಕೊಟ್ಟರು. 3ನೇ ಲೆಗ್‌ನಲ್ಲಿ ಮಿಲನ್ ಅಪ್ರತಿಮ ಓಟದ ಮೂಲಕ ಭಾರಿ ಮುನ್ನಡೆ ಗಳಿಸಿದರು. ಹೀಗಾಗಿ ಕೊನೆಯ ಲೆಗ್‌ನಲ್ಲಿ ನಿಹಾಲ್ ನಿರಾಯಾಸವಾಗಿ ಓಡಿ ಚಿನ್ನ ಗೆದ್ದುಕೊಟ್ಟರು.

ಮಂಗಳೂರು ವಿವಿ ಚಾಂಪಿಯನ್‌
ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಇರುವ ಮಂಗಳೂರು ವಿವಿ ಅಥ್ಲೆಟಿಕ್ಸ್‌ನ ಚಾಂಪಿಯನ್‌ ಪಟ್ಟ ಉಳಿಸಿಕೊಂಡಿತು. ಕಳೆದ ಬಾರಿ 7 ಚಿನ್ನ, 6 ಬೆಳ್ಳಿ ಮತ್ತು 5 ಕಂಚು ಗಳಿಸಿದ್ದ ತಂಡ ಈ ಬಾರಿ ತಲಾ 6 ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿತು. ಲವ್ಲಿ ಪ್ರೊಫೆಷನಲ್ ವಿವಿ ಮತ್ತು ಮಹರ್ಷಿ ದಯಾನಂದ್ ವಿವಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದವು. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಕೋಟಯಂನ ಮಹಾತ್ಮ ಗಾಂಧಿ ವಿವಿ 10ನೇ ಸ್ಥಾನಕ್ಕೆ ಕುಸಿಯಿತು. 

ಫಲಿತಾಂಶಗಳು: ಪುರುಷರ 200 ಮೀ ಓಟ: ವಿಘ್ನೇಶ್‌ (ಮಂಗಳೂರು)–1. ಕಾಲ: 21.28 ಸೆ (ಕೂಟ ದಾಖಲೆ; ಹಳೆಯದು: 21.42, ರಾಹುಲ್‌), ಶಶಿಕಾಂತ್ ಅಂಗಡಿ (ಬೆಂಗಳೂರು; ಕೂಟ ದಾಖಲೆ: ಹಳೆಯದು: 21.42, ರಾಹುಲ್)–2, ತೀರ್ಥೇಶ್‌ ಶೆಟ್ಟಿ (ಮಂಗಳೂರು)–3; ಪುರುಷರ 800 ಮೀ ಓಟ: ಸತ್ಯದೇವ್‌ (ಮಹರ್ಷಿ ದಯಾನಂದ)–1. ಕಾಲ: 1 ನಿ 54.26 ಸೆ, ಟಿ.ಎಚ್‌. ದೇವಯ್ಯ (ಮಂಗಳೂರು)–2, ಅಖಿಲ್‌ (ಕ್ಯಾಲಿಕಟ್‌)–3; 5000 ಮೀ ಓಟ: ಲೋಕೇಶ್ ಚೌಧರಿ (ಮಹರ್ಷಿ ದಯಾನಂದ)–1. ಕಾಲ: 14 ನಿ 36.11 ಸೆ, ಅಜಯ್‌ (ಲವ್ಲಿ)–2, ರೋಹಿತ್ ಕುಮಾರ್ (ಗುರುನಾನಕ್‌)–3; ‌4x400 ಮೀ ರಿಲೆ: ಮಂಗಳೂರು (ಮಹಾಂತೇಶ್, ದೇವಯ್ಯ, ಮಿಲನ್, ನಿಹಾಲ್)–1. ಕಾಲ: 3 ನಿ, 13.44 ಸೆ (ಕೂಟ ದಾಖಲೆ; ಹಿಂದಿನದು:3 ನಿ 15.45, ಎಂ.ಜಿ ಕೋಟಯಂ), ಮಹಾತ್ಮ ಗಾಂಧಿ–2. ಕಾಲ: 3 ನಿ 14.79 ಸೆ (ಕೂಟ ದಾಖಲೆ; ಹಿಂದಿನದು: 3 ನಿ 15.45 ಸೆ), ಚೌಧರಿ ಚರಣ್‌ಸಿಂಗ್‌–3; ಪೋಲ್‌ವಾಲ್ಟ್‌: ಧೀರೇಂದ್ರ (ವೀರ ಬಹದ್ದೂರ್‌)–1. ಎತ್ತರ: 4.80 ಮೀ (ಕೂಟ ದಾಖಲೆ: 4.60), ಜ್ಞಾನಸೋನ್ (ಮದ್ರಾಸ್)–2; ಟ್ರಿಪಲ್‌ ಜಂಪ್‌: ಕೃಷ್ಣ ಸಿಂಗ್ (ಮುಂಬೈ)–1. ಅಂತರ: 16.10 ಮೀ (ಕೂಟ ದಾಖಲೆ; ಹಳೆಯದು: 15.27 ಮೀ, ಎಬಿ ಅರುಣ್), ಸೆಲ್ವ ಪ್ರಭು (ಭಾರತೀದಾಸನ್‌)–2. ಕಾಲ: 16.03 (ಕೂಟ ದಾಖಲೆ; ಹಳೆಯದು: 15.27 ಎಬಿ ಅರುಣ್‌), ರಾಬಿನ್ಸನ್ ಶೇಖರ್ (ಮದುರೈ ಕಾಮರಾಜ)–3. ಮಹಿಳೆಯರ 200 ಮೀ ಓಟ: ಪ್ರಿಯಾ ಮೋಹನ್ (ಜೈನ್‌)–1. ಕಾಲ: 23.90 ಸೆ, ದ್ಯುತಿ ಚಾಂದ್ (ಕಳಿಂಗ)–2, ಫ್ಲಾಲೆನ್ಸ್‌ ಬಾರ್ಲಾ (ರಾಂಚಿ)–3; 800 ಮೀ ಓಟ: ಪೂಜಾ (ಲವ್ಲಿ)–1. ಕಾಲ: 2 ನಿ 07.67 ಸೆ, ಅರ್ಪಿತಾ (ಬೆಂಗಳೂರು)–2, ಸುನಿತಾ (ಹಿಮಾಚಲ ಪ್ರದೇಶ)–3; 1500 ಮೀ: ರಾಧಾ ಸಿಂಗ್ (ಮಂಗಳೂರು)–1. ಕಾಲ: 4 ನಿ 34.43 ಸೆ, ಸುನಿತಾ (ಹಿಮಾಚಲ ಪ್ರದೇಶ)–2, ಹೈದ್ರೊಂ ದೇವಿ (ಮಣಿಪುರ)–3‍; ಶಾಟ್‌ಪಟ್: ಅಂಬಿಕಾ (ಮೈಸೂರು)–1. ದೂರ: 14.04 ಮೀ, ಜಾಸ್ಮಿನ್ (ಲವ್ಲಿ)–2, ರೇಖಾ (ಮಂಗಳೂರು)–3; 5000 ಮೀ. ಓಟ: ನಿಕಿತಾ ರಾವತ್ (ರಾಷ್ಟ್ರಸಂತ ತುಕಡೋಜಿ)–1. ಕಾಲ: 16 ನಿ 55.38 ಸೆ (ಕೂಟ ದಾಖಲೆ; ಹಳೆಯದು: 16:59.44), ಭಾರತಿ (ಮಹರ್ಷಿ ದಯಾನಂದ್‌)–2, ಪೂನಮ್ (ಪುಣೆ)–3; 4x400 ಮೀ ರಿಲೆ: ಪಂಜಾಬಿ–1. ಕಾಲ 3:43.83 (ಕೂಟ ದಾಖಲೆ; ಹಳೆಯದು: 3:48.12, ಎಂ.ಜಿ), ಕ್ಯಾಲಿಕಟ್‌–2, ಎಂ.ಜಿ–3; 20 ಕಿ.ಮೀ. ವೇಗ ನಡಿಗೆ: ರಾಖಿ ಸಿಂಗ್ (ರಾಜೇಂದ್ರ ವಿವಿ)–1. ಕಾಲ: 1 ತಾಸು 41.35 ನಿ, ಪಾಯಲ್‌ (ಪಂಜಾಬಿ–2, ಮಾನಸಿ ನೇಗಿ (ಲವ್ಲಿ)–3; ಹೈಜಂಪ್‌: ಗ್ರಾಸ್ನಾ (ಮನೋನ್ಮಣಿಯನ್)–1. ಎತ್ತರ: 1.76 ಮೀ, ರೇಖಾ (ಲವ್ಲಿ)–2, ಕೆವಿನಾ (ಭಾರತಿದಾಸನ್‌)–3.

ಕರಾಟೆ: ಪುರುಷ -50 ಕೆಜಿ: ದೀಪಕ್ ವರ್ಮಾ (ಮಹರ್ಷಿ ದಯಾನಂದ್)–1, ಕ್ಯಬೊ ಲಿಯಾಂಗ್ (ಹಿಮಾಲಯನ್‌)–2, ಎನ್‌.ಎಸ್‌ ಅರವಿಂದ್ (ಬೆಂಗಳೂರು), ಸಂಜಯ್‌ (ರಾಜೀವ್‌ಗಾಂಧಿ)–3; -60 ಕೆಜಿ: ಅಂಕುಶ್‌ (ರಣ್‌ಬೀರ್ ಸಿಂಗ್)–1, ಕೌಶಿಕ್ (ಅಣ್ಣಾ)–2, ಡಿ.ಎಸ್‌.ತೇಜಸ್‌ (ಮೈಸೂರು), ದಿನೇಶ್ ಚೌಧರಿ (ದೀನ್ ದಯಾಳ್)–3; ಮಹಿಳೆರಯ 45 ಕೆಜಿ: ಅಶ್ವಿನಿ (ಮೈಸೂರು)–1, ಅಕ್ಷತಾ  (ಕಾಶಿ ವಿದ್ಯಾಪೀಠ)–2 ಪ್ರೀತಿ (ಕುರುಕ್ಷೇತ್ರ), ಪ್ರತಿಷ್ಠಾ (ಚಂಡೀಗಢ)–3. ಕುಸ್ತಿ: 82 ಕೆಜಿ: ರೋಹಿತ್ ದಹಿಯಾ (ಲವ್ಲಿ)–1, ಅಮರಿಂದರ್ ಸಿಂಗ್ (ಗುರುನಾನಕ್)–2, ಆದಿತ್ಯ ಬೆಡಕಿಹಾಳ (ಕರ್ನಾಟಕ ವಿವಿ), ಆಯುಷ್‌ (ಕುರುಕ್ಷೇತ್ರ)–3.

ಅಗ್ರ ಸ್ಥಾನದತ್ತ ಆತಿಥೇಯರು
ಆತಿಥೇಯ ಜೈನ್ ವಿವಿ, ಕ್ರೀಡಾಕೂಟದ ಸಮಗ್ರ ಚಾಂಪಿಯನ್ ಪಟ್ಟ ಗಳಿಸುವತ್ತ ಹೆಜ್ಜೆ ಹಾಕಿದೆ. ಆರಂಭದಲ್ಲಿ ನಾಲ್ಕು ದಿನ ಈಜುಕೊಳದಲ್ಲಿ ಪದಕಗಳನ್ನು ಹೆಕ್ಕಿದ ಕ್ರೀಡಾಪಟುಗಳು ಸತತ ಮುನ್ನಡೆ ಗಳಿಸಿಕೊಟ್ಟಿದ್ದರು. ನಂತರವೂ ಜೈನ್‌ ವಿವಿಯ ಪಾರಮ್ಯ ಮುಂದುವರಿಯಿತು. 20 ಸ್ಪರ್ಧೆಗಳ ಪೈಕಿ 18 ಸ್ಪರ್ಧೆಗಳು ಸೋಮವಾರ ಸಂಜೆ ವೇಳೆಗೆ ಮುಕ್ತಾಯಗೊಂಡಿವೆ. ಕಬಡ್ಡಿ ಮತ್ತು ಫುಟ್‌ಬಾಲ್ ಮಾತ್ರ ಉಳಿದುಕೊಂಡಿವೆ. 20 ಚಿನ್ನದೊಂದಿಗೆ 32 ಪದಕ ಗೆದ್ದಿರುವ ಜೈನ್ ವಿವಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಕಳೆದ ಬಾರಿ ಚಾಂಪಿಯನ್‌ ಆಗಿದ್ದ ಪಂಜಾಬ್‌ ವಿವಿ ಮೂರನೇ ಸ್ಥಾನದಲ್ಲಿದ್ದು ಲವ್ಲಿ ಪ್ರೊಫೆಷನಲ್ ವಿವಿ ಎರಡನೇ ಸ್ಥಾನದಲ್ಲಿದೆ. ಈ ವಿವಿ ಕಳೆದ ಬಾರಿ 6ನೇ ಸ್ಥಾನದಲ್ಲಿತ್ತು. ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಮಂಗಳೂರು ವಿವಿ ಈ ಸಲ 12ನೇ ಸ್ಥಾನಕ್ಕೆ ಕುಸಿದಿದೆ.

ಗಿಡ ನೆಡಲಿರುವ ಕ್ರೀಡಾಪಟುಗಳು
ಕಸರಹಿತ ಮತ್ತು ಪ್ಲಾಸ್ಟಿಕ್‌ ಬಳಸದೇ ನಡೆದ ‘ಹಸಿರು’ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅಥ್ಲೀಟ್‌ಗಳು ಕನಿಷ್ಠ ಒಂದು ಗಿಡ ನೆಡಲಿದ್ದಾರೆ ಎಂದು ರಾಜ್ಯದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು. 

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾಕೂಟದಲ್ಲಿ 209 ವಿಶ್ವವಿದ್ಯಾನಿಲಯಗಳಿಂದ 3886 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಗಿಡ ನೆಡುವಂತೆ ಸೂಚಿಸಲಾಗಿದೆ. ಈ ಅಭಿಯಾನಕ್ಕೆ ಜೈನ್ ವಿವಿ ಆವರಣದಲ್ಲಿ ರಾಜ್ಯಪಾಲರು ಈಚೆಗೆ ಚಾಲನೆ ನೀಡಿದ್ದಾರೆ ಎಂದರು. 

ಸಮಾರೋಪ ಸಮಾರಂಭದಲ್ಲಿ ಯೋಗ ಪ್ರದರ್ಶನ
ಮಂಗಳವಾರ ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ 96 ಯೋಗಪಟುಗಳು ಸೇರಿದಂತೆ 500 ಮಂದಿಯ ಯೋಗ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸಮಾರಂಭ ನಡೆಸಲು ನಿರ್ಧರಿಸಲಾಗಿತ್ತು. ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಮಾರಂಭವನ್ನು ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಕಬಡ್ಡಿ ಫೈನಲ್ ಪಂದ್ಯವನ್ನು ಕಂಠೀರವಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಇದೀಗ ಜೈನ್ ವಿವಿ ಆವರಣದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ನಟ ಸುದೀಪ್ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಗುರುತು ಚೀಟಿಯೊಂದಿಗೆ ಸಂಜೆ 4.30ರ ಒಳಗೆ ಬಂದವರಿಗೆ ಅವಕಾಶವಿದೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭ ಆರಂಭ: ಸಂಜೆ 5.30

ಸ್ಥಳ: ಕಂಠೀರವ ಒಳಾಂಗಣ ಕ್ರೀಡಾಂಗಣ

ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್‌, ಸೋನಿ ಲೈವ್‌, ಆಕಾಶವಾಣಿ, ರೇಡಿಯೊ ಸಿಟಿ, ಡಿಡಿ ಸ್ಪೋರ್ಟ್ಸ್‌ ಯುಟ್ಯೂಬ್ ಚಾನಲ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು