ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಬೇಗೆಯಲ್ಲಿ ಬೆಳೆದ ಹಾಕಿ ಅಂಗಣದ ‘ರಾಣಿ’

Last Updated 24 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ವಿಶ್ವದ ಅತಿ ಸಮರ್ಥ ಮಹಿಳಾ ಹಾಕಿಪಟುಗಳಲ್ಲಿ ಒಬ್ಬರು ಭಾರದ ರಾಣಿ ರಾಂಪಾಲ್. ಸಣ್ಣ ವಯಸ್ಸಿನಲ್ಲೇ ಹಾಕಿ ಅಂಗಣಕ್ಕೆ ಧುಮುಕಿ ಭಾರತ ತಂಡದ ನಾಯಕಿಯಾಗುವ ವರೆಗಿನ ಅವರ ವೃತ್ತಿಜೀವನದ ಕಥೆ ರೋಮಾಂಚಕ. ಅವರ ಪ್ರತಿಭೆ, ಪರಿಶ್ರಮ, ಬದ್ಧತೆ ಮತ್ತು ಸಾಧನೆಗೆ ಸಂದಿರುವ ಗೌರವ ಖೇಲ್ ರತ್ನ ಪುರಸ್ಕಾರ.

ಹಾಕಿ ಅಂಗಣದಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಬಲ್ಲ ರಾಣಿ ರಾಂಪಾಲ್ ಬಾಲ್ಯದ ಬದುಕು ಕಷ್ಟಗಳಿಂದ ಕೂಡಿತ್ತು. ಹರಿಯಾಣದ ಈ ಆಟಗಾರ್ತಿಯ ತಂದೆ ಕೂಲಿಕಾರ್ಮಿಕರಾಗಿದ್ದರು. ಎರಡು ಹೊತ್ತಿನ ಊಟಕ್ಕೇ ಪರದಾಡುತ್ತಿದ್ದ ಕುಟುಂಬಕ್ಕೆ, ಹಾಕಿ ಆಟಗಾರ್ತಿ ಆಗಬೇಕೆಂಬ ಮಗಳ ಬಯಕೆಯನ್ನು ಈಡೇರಿಸುವುದು ದೊಡ್ಡ ಸವಾಲೇ ಆಗಿತ್ತು.

ಖೇಲ್ ರತ್ನಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಮಾತನಾಡಿಸಿದಾಗ ಬಾಲ್ಯದ ಕಷ್ಟದ ದಿನಗಳ ಬಗ್ಗೆ ವಿವರಿಸಲು ರಾಣಿ ಮರೆಯಲಿಲ್ಲ. ‘ಬದುಕಿನ ಹಾದಿ ತುಂಬ ಕಠಿಣವಾಗಿತ್ತು. ನಮ್ಮದು ದೊಡ್ಡ ಕುಟುಂಬ. ಪ್ರತಿದಿನವೂ ಎರಡು ಹೊತ್ತಿನ ಊಟದ್ದೇ ಚಿಂತೆ. ಇಂಥ ಪರಿಸ್ಥಿತಿಯಲ್ಲೂ ನಾನು ಬದುಕಿಗೊಂದು ಗುರಿ ಇರಿಸಿಕೊಂಡಿದ್ದೆ. ಅದನ್ನು ಸಾಧಿಸುವುದು ಕಿಠಿಣ ಎಂದು ತಿಳಿದೇ ಇತ್ತು. ಆದರೆ ಛಲ ಬಿಡಲಲಿಲ್ಲ. ಹಾಕಿ ಬಗ್ಗೆ ಅತಿಯಾದ ಮಮತೆ ಇತ್ತು. ಈ ಕ್ರೀಡೆಯಲ್ಲಿ ಸಾಧನೆ ಮಾಡಿದರೆ ದೇಶವನ್ನು ಪ್ರತಿನಿಧಿಸಬಹುದು ಮತ್ತು ಬದುಕಿಗೆ ಆಸರೆಯೂ ಆಗಬಹುದು ಎಂಬ ಲೆಕ್ಕಾಚಾರದೊಂದಿಗೆ ಮುಂದಡಿ ಇರಿಸಿದೆ’ ಎಂದು ಅವರು ಹೇಳಿದರು.

‘ನನ್ನ ಆಸೆಗೆ ತಂದೆಯಿಂದ ಉತ್ತಮ ಬೆಂಬಲ ಸಿಕ್ಕಿತು. ಕಷ್ಟಗಳ ನಡುವೆ, ಸಮಾಜದ ಕೊಂಕು ನುಡಿಯನ್ನು ಕೇಳುತ್ತಲೇ ತಂದೆ ನನ್ನನ್ನು ತರಬೇತಿಗೆ ಸೇರಿಸಿದರು. ಹಾಕಿ ಇಂಡಿಯಾದವರ ಕಣ್ಣಿಗೆ ಬಿದ್ದದ್ದೇ ತಡ, ನನಗೆ ಉತ್ತಮ ಅವಕಾಶ ಲಭಿಸಿತು. ಹೀಗಾಗಿ ಬೇಗನೇ ಬೆಳೆದೆ’ ಎಂದು ರಾಣಿ ವಿವರಿಸಿದರು.

2009ರಲ್ಲಿ, 14ರ ಹರಯದಲ್ಲೇ ಭಾರತ ತಂಡದಲ್ಲಿ ಸ್ಥಾನ ಪಡೆದ ರಾಣಿ ದೇಶದ ಪರವಾಗಿ ಆಡಿದ ಅತಿ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. 2010ರಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಏಳು ಗೋಲು ಹೊಡೆದು ಹಾಕಿ ಪ್ರಪಂಚದ ಗಮನ ಸೆಳೆದ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ‘ವರ್ಷದ ತಂಡ’ದಲ್ಲಿ ಸ್ಥಾನ ಗಳಿಸಿದ್ದರು.

ಸೌಲಭ್ಯಗಳು ಬಂದಾಗ ಮತ್ತು ಖ್ಯಾತಿ ಗಳಿಸಿದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಅಂದು ಅನುಭವಿಸಿದ ಬಡತನ, ಕಷ್ಟ ಎಲ್ಲವೂ ಕಣ್ಣಮುಂದೆ ಬಂದು ನಿಲ್ಲುತ್ತದೆ. ಇದು, ಬದುಕಿನಲ್ಲೂ ವೃತ್ತಿ ಜೀವನದಲ್ಲೂ ಹೊಸ ಉತ್ಸಾಹದೊಂದಿಗೆ ಆಡಲು ಪ್ರೇರಣೆಯಾಗುತ್ತದೆ. ಬದುಕಿನಲ್ಲಿ ಅರ್ಧ ಹಾದಿ ಸವೆದಿದ್ದೇನಷ್ಟೇ; ಸಾಧಿಸಬೇಕಾದದ್ದು ಇನ್ನೂ ಸಾಕಷ್ಟಿದೆ’ ಎಂದು ಅವರು ಭಾವುಕರಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT