ಮಂಗಳವಾರ, ಜೂನ್ 28, 2022
25 °C
ಪೋಲೆಂಡ್‌ ಓಪನ್ ಕುಸ್ತಿ ಟೂರ್ನಿ

ಕುಸ್ತಿ: ಚಿನ್ನದ ಪದಕಕ್ಕಾಗಿ ದಹಿಯಾ ರವಿ ಹೋರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾರ್ಸಾ: ಅಮೋಘ ಸಾಮರ್ಥ್ಯ ತೋರಿದ ಭಾರತದ ರವಿ ದಹಿಯಾ ಅವರು ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯಲ್ಲಿ ಬುಧವಾರ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಈ ಋತುವಿನಲ್ಲಿ ಎರಡನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಇದು ಟೋಕಿಯೊ ಒಲಿಂಪಿಕ್ಸ್‌ಗೂ ಮೊದಲು  ನಡೆಯುತ್ತಿರುವ ಕೊನೆಯ ರ‍್ಯಾಂಕಿಂಗ್ ಸಿರೀಸ್‌ ಟೂರ್ನಿಯಾಗಿದೆ.

61 ಕೆಜಿ ವಿಭಾಗದಲ್ಲಿ ಎದುರಾಳಿಗಳಿಗೆ ಸೋಲುಣಿಸಿದ ರವಿ ಅರ್ಹವಾಗಿಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

ಹಾಲಿ ಏಷ್ಯನ್‌ ಚಾಂಪಿಯನ್‌ ಹಾಗೂ 2019ರ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ, ಭಾರತದ ಕುಸ್ತಿಪಟುವನ್ನು ಎದುರಾಳಿಗಳು ಎಡಗಾಲಿನ ಮೇಲೆ ಗುರಿಯಿಟ್ಟು ಚಿತ್ ಮಾಡಲು ಪ್ರಯತ್ನಿಸಿದರು. ಆದರೆ ಎಲ್ಲ ಸವಾಲುಗಳನ್ನು ಅವರು ಯಶಸ್ವಿಯಾಗಿ ಮೆಟ್ಟಿ ನಿಂತರು.

ಮೊದಲ ಬೌಟ್‌ನಲ್ಲಿ 10–1ರಿಂದ ಉಜ್ಬೆಕಿಸ್ತಾನದ ಗುಲೊಮಜೋನ್‌ ಅಬ್ದುಲ್ಲಾಯೆವ್‌ ಅವರನ್ನು ಪರಾಭವಗೊಳಿಸಿದ ರವಿ, ಬಳಿಕ ಕಜಕಸ್ತಾನದ ಅದ್ಲಾನ್‌ ಆಸ್ಕರೊವ್ ಎದುರು ನಡೆದ ಪ್ರಬಲ ಹೋರಾಟದಲ್ಲಿ 13–8ರಿಂದ ಜಯದ ನಗೆ ಬೀರಿದರು.

ಅಮೆರಿಕದ ನೇಥನ್‌ ಖಾಲಿದ್‌ ತೊಮಸೆಲ್ಲೊ ಅವರನ್ನು 9–5ರಿಂದ ಮಣಿಸುವ ಮೂಲಕ ಸೆಮಿಫೈನಲ್‌ಗೆ ಕಾಲಿಟ್ಟರು. ಬಳಿಕ 7–4ರಿಂದ ಇರಾನ್‌ನ ರೆಜಾ ಅಹಮದಲಿ ಅತ್ರಿನಗರ್ಚಿ ಅವರನ್ನು ಮಣಿಸಿ ಚಿನ್ನದ ಪದಕದ ಸುತ್ತು ಪ್ರವೇಶಿಸಿದರು.

ಫೈನಲ್ ಬೌಟ್‌ನಲ್ಲಿ, ಮೊದಲ ಸುತ್ತಿನಲ್ಲಿ ಮಣಿಸಿದ್ದ ಅಬ್ದುಲ್ಲಾಯೆವ್ ವಿರುದ್ಧವೇ ರವಿ ಸೆಣಸುವರು.

ಆಸ್ಕರೊವ್ ಎದುರಿನ ಎರಡನೇ ಸುತ್ತಿನ ಬೌಟ್‌ನಲ್ಲಿ ರವಿ 0–8ರ ಹಿನ್ನಡೆಯಿಂದ ಪುಟಿದೆದ್ದು ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು