ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸರ್‌ಗಳ ತರಬೇತಿ ವಿಳಂಬ: ಇನ್ನೂ ಸಿಗದ ಆಡಳಿತಾತ್ಮಕ ಅನುಮೋದನೆ

Last Updated 7 ಜೂನ್ 2020, 16:53 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಬಾಕ್ಸರ್‌ಗಳು ಹೊರಾಂಗಣ ತರಬೇತಿಗಾಗಿ ಇನ್ನೊಂದು ವಾರ ಕಾಯಬೇಕಿದೆ. ಪಟಿಯಾಲದಲ್ಲಿ ಜೂನ್‌ 10ರಂದು ತರಬೇತಿಗೆ ಚಾಲನೆ ನೀಡಲು ರಾಷ್ಟ್ರೀಯ ಫೆಡರೇಷನ್‌ ಚಿಂತನೆ ನಡೆಸಿತ್ತು. ಆದರೆ ಕೆಲವು ಆಡಳಿತಾತ್ಮಕ ಸಮಸ್ಯೆಗಳು ಇದಕ್ಕೆ ತೊಡಕಾಗಿವೆ.

‘ನಾವು ಸಲ್ಲಿಸಿದ ಪ್ರಸ್ತಾವಕ್ಕೆ ಭಾರತ ಕ್ರೀಡಾ ಪ್ರಾಧಿಕಾರದಿಂದ (ಸಾಯ್‌) ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ಪ್ರಾಧಿಕಾರದವರು ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ. ಈ ಕುರಿತು ಒಂದು ಅಥವಾ ಎರಡು ದಿನಗಳಲ್ಲಿ ಅನುಮತಿ ದೊರೆಯಬಹುದು. ಆದರೆ ನಾವು ತರಬೇತಿಗೆ ವ್ಯವಸ್ಥೆ ಮಾಡಿಕೊಳ್ಳಲು ಒಂದು ವಾರ ಹಿಡಿಯಬಹುದು’ ಎಂದು ಭಾರತ ಬಾಕ್ಸಿಂಗ್‌ ಫಡೆರೇಷನ್‌ನ (ಬಿಎಫ್‌ಐ) ಕಾರ್ಯಕಾರಿ ನಿರ್ದೇಶಕ ಆರ್‌.ಕೆ.ಸಚೇತಿ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್‌ ಕೂಟಕ್ಕೆ ಭಾರತದ ಒಂಬತ್ತು ಬಾಕ್ಸರ್‌ಗಳು ಅರ್ಹತೆ ಗಿಟ್ಟಿಸಿದ್ದಾರೆ. ಅವರೆಂದರೆ ಅಮಿತ್ ಪಂಗಲ್‌ (52 ಕೆಜಿ ವಿಭಾಗ), ಮನೀಷ್‌ ಕೌಶಿಕ್‌ (63 ಕೆಜಿ), ವಿಕಾಸ್‌ ಕೃಷ್ಣ (69 ಕೆಜಿ), ಆಶಿಶ್‌ ಕುಮಾರ್‌ (75 ಕೆಜಿ), ಸತೀಶ್‌ ಕುಮಾರ್‌ (+91 ಕೆಜಿ), ಎಂ.ಸಿ.ಮೇರಿ ಕೋಮ್‌ (51 ಕೆಜಿ), ಸಿಮ್ರನ್‌ಜೀತ್‌ ಕೌರ್‌ (60 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಹಾಗೂ ಪೂಜಾ ರಾಣಿ (75 ಕೆಜಿ).

ಸದ್ಯ ಪುರುಷ ಬಾಕ್ಸರ್‌ಗಳು ಪಟಿಯಾಲದಲ್ಲಿದ್ದರೆ, ಮಹಿಳಾ ಬಾಕ್ಸರ್‌ಗಳು ದೆಹಲಿಯಲ್ಲಿದ್ದಾರೆ. ಬಿಎಫ್‌ಐ ಅಧಿಕಾರಿಗಳು, ಬಾಕ್ಸರ್‌ಗಳು ಹಾಗೂ ರಾಷ್ಟ್ರೀಯ ಕೋಚ್‌ಗಳು ಮೇ 23ರಂದು ನಡೆಸಿದ ವಿಡಿಯೊ ಕಾನ್ಫ್‌ರೆನ್ಸ್‌ನಲ್ಲಿ ಎರಡೂ ತಂಡಗಳನ್ನು ಪಟಿಯಾಲದಲ್ಲಿ ಸೇರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು.

ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳು ಮಾರ್ಚ್‌ನಿಂದ ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT