ಶನಿವಾರ, ಮಾರ್ಚ್ 25, 2023
23 °C
ಕುದುರೆಮುಖ ಟ್ರೋಫಿ ಅಖಿಲ ಭಾರತ ಫಿಡೆ ರೇಟೆಡ್‌ ಚೆಸ್ ಟೂರ್ನಿ: ಕರ್ನಾಟಕದ ಧನುಷ್‌ ರಾಮ್‌ಗೆ ಜಂಟಿ ಎರಡನೇ ಸ್ಥಾನ

ಕುದುರೆಮುಖ ಚೆಸ್ ಟೂರ್ನಿ: ಪ್ರಶಸ್ತಿ ಮುಡಿಗೇರಿಸಿಕೊಂಡ ಋತ್ವಿಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೊದಲ ಸುತ್ತಿನಿಂದಲೇ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಫಿಡೆ ಮಾಸ್ಟರ್‌, ಗೋವಾದ ಋತ್ವಿಜ್ ಪರಬ್ ಅವರು ಕೆಐಒಸಿಎಲ್ ಆಯೋಜಿಸಿದ್ದ ಕುದುರೆಮುಖ ಟ್ರೋಫಿ ಫಿಡೆ ರೇಟೆಡ್‌ ಅಖಿಲ ಭಾರತ ಚೆಸ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು. 

ನಗರದ ಕಾವೂರಿನ ಕೆಐಒಸಿಎಲ್ ಟೌನ್‌ಷಿಪ್‌ನ ನೆಹರು ಭವನದಲ್ಲಿ ನಡೆದ ಟೂರ್ನಿಯ ಒಂಬತ್ತು ಸುತ್ತುಗಳ ಸ್ಪರ್ಧೆಯಲ್ಲಿ ಒಟ್ಟು 8.5 ಪಾಯಿಂಟ್ ಕಲೆ ಹಾಕಿದ ಅವರು ಟ್ರೋಫಿ ಮತ್ತು ₹ 30 ಸಾವಿರ ಮೊತ್ತವನ್ನು ತಮ್ಮದಾಗಿಸಿಕೊಂಡರು. ಕೊನೆಯ ಸುತ್ತಿನಲ್ಲಿ ಅವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಹಿಳಾ ಇಂಟರ್‌ನ್ಯಾಷನಲ್ ಮಾಸ್ಟರ್‌ ಇಶಾ ಶರ್ಮಾ (ಒಟ್ಟು 7.5 ಪಾಯಿಂಟ್‌) ಅವರೊಂದಿಗೆ ಡ್ರಾ ಮಾಡಿಕೊಂಡರು.

ತಮಿಳುನಾಡಿನ ಮಣಿಕಂಠನ್, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಧನುಷ್ ರಾಮ್ ಎಂ ಮತ್ತು ಗೋವಾದ ಮಂದಾರ್ ಪ್ರದೀಪ್ ಲಾಡ್ ತಲಾ 8 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಅವರಿಗೆ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನ ನೀಡಲಾಯಿತು. ಈ ಮೂವರು ಕ್ರಮವಾಗಿ ₹ 20 ಸಾವಿರ, ₹ 10 ಸಾವಿರ ಮತ್ತು ₹ 8 ಸಾವಿರ ಮೊತ್ತ ಗಳಿಸಿದರು.

ಅಂತಿಮ ಸುತ್ತಿನಲ್ಲಿ ಮಣಿಕಂಠನ್ ವಿರುದ್ಧ ಕರ್ನಾಟಕದ ರಾಮಚಂದ್ರ ಭಟ್‌ (7 ಪಾಯಿಂಟ್‌), ಧನುಷ್ ರಾಮ್ ವಿರುದ್ಧ ಕರ್ನಾಟಕದ ಕಾರ್ತಿಕ್‌ (7 ಪಾಯಿಂಟ್‌) ಮತ್ತು ಮಂದಾರ್ ಪ್ರದೀಪ್ ವಿರುದ್ಧ ಗೋವಾದ ಸಾಯಿರಾಜ್ ದಿಲೀಪ್ ವರ್ಣೇಕರ್ (7 ಪಾಯಿಂಟ್) ಸೋಲನುಭವಿಸಿದರು. ಇಂಟರ್‌ನ್ಯಾಷನಲ್ ಮಾಸ್ಟರ್‌, ರೈಲ್ವೇಸ್‌ನ ರತ್ನಾಕರನ್ ಕೆ, ಫಿಡೆ ಮಾಸ್ಟರ್‌ ಮಂಗಳೂರಿನ ಶರಣ್ ರಾವ್‌ ಹಾಗೂ ಗೋವಾದ ದೇವೇಶ್ ಆನಂದ್ ತಲಾ 7.5 ಪಾಯಿಂಟ್ ಗಳಿಸಿದರು.

ಇತರ ‍ಪ್ರಶಸ್ತಿಗಳು: 19 ವರ್ಷದೊಳಗಿನವರ ವಿಭಾಗದಲ್ಲಿ ದಾಸರಿ ದತ್ತಾತ್ರೇಯ ರಾವ್‌ (ಕರ್ನಾಟಕ), 18 ವರ್ಷದೊಳಗಿನವರ ವಿಭಾಗದಲ್ಲಿ ಲಕ್ಷಿತ್ ಸಾಲಿಯಾನ್ (ದಕ್ಷಿಣ ಕನ್ನಡ), 17 ವರ್ಷದೊಳಗಿನವರ ವಿಭಾಗದಲ್ಲಿ ಸಾಯಿರಾಜ್ ದಿಲೀಪ್ ವೆರ್ಣೇಕರ್ (ಗೋವಾ), 16 ವರ್ಷದೊಳಗಿನವರ ವಿಭಾಗದಲ್ಲಿ ರಾಮಚಂದ್ರ ಭಟ್‌ (ಕರ್ನಾಟಕ), 15 ವರ್ಷದೊಳಗಿನವರ ವಿಭಾಗದಲ್ಲಿ ಸ್ವರ ಲಕ್ಷ್ಮಿ ನಾಯರ್ (ಕರ್ನಾಟಕ), 14 ವರ್ಷದೊಳಗಿನವರ ವಿಭಾಗದಲ್ಲಿ ಕಾರ್ತಿಕ್ ಎಸ್‌ (ಕರ್ನಾಟಕ), 13 ವರ್ಷದೊಳಗಿನವರ ವಿಭಾಗದಲ್ಲಿ ಅಶ್ವತ್ಥ್‌ ನಾರಾಯಣ್ (ತಮಿಳುನಾಡು), 12 ವರ್ಷದೊಳಗಿನವರ ವಿಭಾಗದಲ್ಲಿ ಅಮೋಘ್ ಶೆಟ್ಟಿ (ಕರ್ನಾಟಕ), 11 ವರ್ಷದೊಳಗಿನವರ ವಿಭಾಗದಲ್ಲಿ ಶ್ಲೋಕ್ ವಿನಯ್ ಕುಲಕರ್ಣಿ (ಕರ್ನಾಟಕ) ಮೊದಲ ಸ್ಥಾನ ಗಳಿಸಿದರು. ಎಲ್ಲರೂ ತಲಾ 7 ಪಾಯಿಂಟ್ ಕಲೆ ಹಾಕಿದರು.

ಉತ್ತಮ ಅನ್‌ರೇಟೆಡ್ ಆಟಗಾರನಾಗಿ ಕರ್ನಾಟಕದ ಶಿವಕುಮಾರ್‌ ಅರಳಿಕಟ್ಟಿ, ಉತ್ತಮ ಹಿರಿಯ ಆಟಗಾರನಾಗಿ ಕರ್ನಾಟಕದ ಶಾಂತಾರಾಮ್ ಕೆ, ಉತ್ತಮ ಮಹಿಳಾ ಆಟಗಾರ್ತಿಯಾಗಿ ಕರ್ನಾಟಕದ ಪ್ರಸಿದ್ಧಿ ಭಟ್‌, ಉತ್ತಮ ಕೆಐಒಸಿಎಲ್ ಆಟಗಾರನಾಗಿ ದಕ್ಷಿಣ ಕನ್ನಡದ ಹನುಮಂತ ಸಿಂಗ್ ರಾವತ್‌, ಉತ್ತಮ ಅಂಗವಿಕಲ ಆಟಗಾರನಾಗಿ ಕೇರಳದ ಸುಧೀರ್ ಎಂ ಆಯ್ಕೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು