ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಭಾರತದ ಅವಿನಾಶ್‌ ಸಬ್ಳೆಗೆ 11ನೇ ಸ್ಥಾನ

ಸೊಫಿಯಾನ್‌ಗೆ ಸ್ಟೀಪಲ್‌ ಚೇಸ್‌ ಚಿನ್ನ
Last Updated 19 ಜುಲೈ 2022, 13:44 IST
ಅಕ್ಷರ ಗಾತ್ರ

ಯೂಜೀನ್‌, ಅಮೆರಿಕ: ಭಾರತದ ಸ್ಟೀಪಲ್‌ ಚೇಸ್‌ ಸ್ಪರ್ಧಿ ಅವಿನಾಶ್‌ ಸಬ್ಳೆ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನಿರಾಸೆ ಅನುಭವಿಸಿದರು. 15 ಅಥ್ಲೀಟ್‌ಗಳು ಪಾಲ್ಗೊಂಡಿದ್ದ ಫೈನಲ್‌ನಲ್ಲಿ ಅವರಿಗೆ 11ನೇ ಸ್ಥಾನ ಲಭಿಸಿತು.

ಸೋಮವಾರ ನಡೆದ 3,000 ಮೀ. ಸ್ಪರ್ಧೆಯನ್ನು ಪೂರೈಸಲು ಸಬ್ಳೆ 8 ನಿ.31.75 ಸೆ.ಗಳನ್ನು ತೆಗೆದುಕೊಂಡರು. ಮಹಾರಾಷ್ಟ್ರದ 27 ವರ್ಷದ ಅಥ್ಲೀಟ್‌ಗೆ ವೈಯಕ್ತಿಕ ಶ್ರೇಷ್ಠ ಸಮಯ (8:12.48) ಕಂಡುಕೊಳ್ಳಲೂ ಆಗಲಿಲ್ಲ.

ಸಬ್ಳೆ ಅವರು ಅರ್ಹತಾ ಸುತ್ತಿನಲ್ಲಿ 8 ನಿ.18.75 ಸೆ.ಗಳಲ್ಲಿ ಗುರಿ ತಲುಪಿ ಒಟ್ಟಾರೆ ಏಳನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆಯಿಟ್ಟಿದ್ದರು. 2019 ರಲ್ಲಿ ದೋಹಾದಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಅವರಿಗೆ 13ನೇ ಸ್ಥಾನ ಲಭಿಸಿತ್ತು.

ಭಾರತದ ಅಥ್ಲೀಟ್‌ 2,000 ಮೀ. ದೂರದವರೆಗೂ 14ನೇ ಸ್ಥಾನದಲ್ಲಿದ್ದರು. ಕೊನೆಯ ಲ್ಯಾಪ್‌ನಲ್ಲಿ ವೇಗ ಹೆಚ್ಚಿಸಿ 12ನೇ ಸ್ಥಾನಕ್ಕೆ ಬಂದರೆ, ಗುರಿ ತಲುಪಲು 100 ಮೀ. ಇರುವಾಗ ಇನ್ನೊಬ್ಬ ಸ್ಪರ್ಧಿಯನ್ನು ಹಿಂದಿಕ್ಕಿ 11ನೆಯವರಾದರು.

ನಿಧಾನಗತಿ ಓಟ: ಈ ಬಾರಿಯ ಸ್ಟೀಪಲ್‌ ಚೇಸ್‌ ಸ್ಪರ್ಧೆ ವಿಶ್ವ ಅಥ್ಲೆಟಿಕ್ಸ್‌ನ ಇತಿಹಾಸದಲ್ಲೇ ಅತ್ಯಂತ ‘ನಿಧಾನಗತಿ’ಯ ಸ್ಪರ್ಧೆ ಎನಿಸಿಕೊಂಡಿತು. ಪದಕ ಜಯಿಸಿದ ಮೂವರು ಅಥ್ಲೀಟ್‌ಗಳು ಕೂಡಾ ತಮ್ಮ ವೈಯಕ್ತಿಕ ಶ್ರೇಷ್ಠ ಸಮಯಕ್ಕಿಂತ ತುಂಬಾ ಹಿಂದೆ ಬಿದ್ದರು.

ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಮೊರೊಕ್ಕೊದ ಸೊಫಿಯಾನ್ ಎಲ್ ಬಕಲಿ 8 ನಿ. 25.13 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆದ್ದರು. ಅವರ ವೈಯಕ್ತಿಕ ಶ್ರೇಷ್ಠ ಸಮಯ 7 ನಿ.58.28 ಸೆ. ಆಗಿದೆ. ಇಥಿಯೋಪಿಯದ ಲಮೇಚಾ ಗಿರ್ಮಾ (8:26.01) ಬೆಳ್ಳಿ ಗೆದ್ದರೆ, ಕೆನ್ಯಾದ ಕಾನ್ಸಸ್ಲಸ್ ಕಿಪ್ರುಟೊ (8:27.92) ಕಂಚು ಪಡೆದರು.

ಅಡ್ಡಬಂದ ಕ್ಯಾಮರಾಮನ್: ಪುರುಷರ ಸ್ಟೀಪಲ್‌ಚೇಸ್‌ ಸ್ಪರ್ಧೆಯ ವೇಳೆ ಕ್ಯಾಮರಾಮನ್‌ ಒಬ್ಬ ಟ್ರ್ಯಾಕ್‌ನಲ್ಲಿ ಅಚಾನಕ್‌ ಆಗಿ ಸ್ಪರ್ಧಿಗಳಿಗೆ ಅಡ್ಡಬಂದ ಘಟನೆ ನಡೆಯಿತು. ಸಮೀಪದಲ್ಲಿ ನಡೆಯುತ್ತಿದ್ದ ಮಹಿಳೆಯರ ಟ್ರಿಪಲ್‌ ಜಂಪ್‌ ಸ್ಪರ್ಧೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಕ್ಯಾಮರಾಮನ್ ತನಗೆ ಅರಿವಿಲ್ಲದೆಯೇ ಓಟದ ಟ್ರ್ಯಾಕ್‌ಗೆ ಕಾಲಿಟ್ಟಿದ್ದ.

ಕಿಪ್ಯೆಗನ್‌ ಮಿಂಚು: ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಕೆನ್ಯಾದ ಫೈತ್‌ ಕಿಪ್ಯೆಗನ್, ಮಹಿಳೆಯರ 1,500 ಮೀ. ಓಟದ ಚಿನ್ನ ಗೆದ್ದರು. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಅವರು 3 ನಿ. 52.96 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಇಥಿಯೋಪಿಯದ ಗಡಾಫ್ ತ್ಸೆಗಾಯ್ (3 ನಿ. 54.52 ಸೆ.) ಬೆಳ್ಳಿ ಗೆದ್ದರೆ, ಬ್ರಿಟನ್‌ನ ಲಾರಾ ಮುಯಿರ್ (3 ನಿ. 55.28 ಸೆ.) ಕಂಚು ಜಯಿಸಿದರು.

2017ರ ವಿಶ್ವ ಅಥ್ಲೆಟಿಕ್ಸ್‌ನಲ್ಲೂ ಚಿನ್ನ ಜಯಿಸಿದ್ದ ಕಿಪ್ಯೆಗನ್‌, 2019 ರಲ್ಲಿ ನಡೆದಿದ್ದ ಕೂಟದಲ್ಲಿ ಬೆಳ್ಳಿ ಪಡೆದಿದ್ದರು.

ರೋಜಸ್‌ಗೆ ಸತತ ಮೂರನೇ ಚಿನ್ನ: ‘ಟ್ರಿಪಲ್‌ ಜಂಪ್‌ ಕ್ವೀನ್‌’ ಎಂದೇ ಖ್ಯಾತಿ ಹೊಂದಿರುವ ವೆನಿಜುವೆಲದ ಯೂಲಿಮರ್‌ ರೋಜಸ್‌ ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಚಿನ್ನ ಗೆದ್ದರು. ಒಲಿಂಪಿಕ್‌ ಚಾಂಪಿಯನ್‌ ಕೂಡಾ ಆಗಿರುವ ಅವರು 15.47 ಮೀ. ಸಾಧನೆ ಮಾಡಿದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಅವರಿಗೆ ದೊರೆತ ಸತತ ಮೂರನೇ ಚಿನ್ನ ಇದಾಗಿದೆ.

ಜಮೈಕಾದ ಶನೀಕಾ ರಿಕೆಟ್ಸ್ (14.89 ಮೀ.) ಬೆಳ್ಳಿ ಹಾಗೂ ಅಮೆರಿಕದ ಟೋರಿ ಫ್ರಾಂಕ್ಲಿನ್‌ ಕಂಚು ಪಡೆದುಕೊಂಡರು.

ಹೈಜಂಪ್‌ನಲ್ಲಿ ತನಗೆ ಯಾರೂ ಸರಿಸಾಟಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಕತಾರ್‌ನ ಮುತಜ್‌ ಬಾರ್ಶಿಮ್ 2.37 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದರು. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರನೇ ಚಿನ್ನ ಗೆದ್ದ ಸಾಧನೆ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT