ಶುಕ್ರವಾರ, ಜೂನ್ 5, 2020
27 °C
ಮಾರ್ಗಸೂಚಿ ವರದಿ ಸಲ್ಲಿಸಿದ ರೋಹಿತ್‌ ಭಾರದ್ವಾಜ್‌ ನೇತೃತ್ವದ ಸಾಯ್‌ ಸಮಿತಿ

ಅಥ್ಲೀಟ್‌ಗಳಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತರಬೇತಿಯ ಗುಣಮಟ್ಟದ ಮೇಲೆ ನಿಗಾ ಇಡಲು (ಎಸ್‌ಒಪಿ) ನೇಮಕಗೊಂಡಿದ್ದ ಆರು ಮಂದಿಯನ್ನೊಳಗೊಂಡ ತಜ್ಞರ ಸಮಿತಿಯು ಶುಕ್ರವಾರ ಭಾರತೀಯ ಕ್ರೀಡಾ ‍‍ಪ್ರಾಧಿಕಾರಕ್ಕೆ (ಸಾಯ್‌) 33 ಪುಟಗಳ ಮಾರ್ಗಸೂಚಿ ವರದಿ ಸಲ್ಲಿಸಿದೆ.

ಲಾಕ್‌ಡೌನ್ ತೆರವುಗೊಂಡ ನಂತರ ಎಲ್ಲಾ ಕೇಂದ್ರಗಳಲ್ಲೂ ತರಬೇತಿ ಪುನರಾರಂಭಿಸಲು ಸಾಯ್‌ ಚಿಂತನೆ ನಡೆಸಿದೆ. ಹೀಗಾಗಿ ಪ್ರಾಧಿಕಾರದ ಕಾರ್ಯದರ್ಶಿ ರೋಹಿತ್ ಭಾರದ್ವಾಜ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ವರದಿಗೆ ಕ್ರೀಡಾ ಮತ್ತು ಆರೋಗ್ಯ ಸಚಿವಾಲಯಗಳು ಅನುಮೋದನೆ ನೀಡಬೇಕಿದೆ.

‘ಸಮಿತಿಯು ಸವಿಸ್ತಾರವಾದ ಮಾರ್ಗಸೂಚಿ ಸೂತ್ರಗಳನ್ನೊಳಗೊಂಡ ವರದಿ ಸಲ್ಲಿದೆ. ಆದರೆ ಇದು ಅಂತಿಮವಲ್ಲ. ಕ್ರೀಡಾ ಹಾಗೂ ಆರೋಗ್ಯ ಸಚಿವಾಲಯದ ಅನುಮೋದನೆ ಸಿಗದ ಹೊರತು ಇದನ್ನು ಜಾರಿಗೊಳಿಸಲಾಗದು’ ಎಂದು ಸಾಯ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವು ಇದೇ 18ರಿಂದ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿಗೊಳಿಸಲಿದೆ. ಆಗ ಗೃಹ ಸಚಿವಾಲಯವು ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಿಸಿದರೆ ಮಾತ್ರ ತಿಂಗಳಾಂತ್ಯದಲ್ಲಿ ತರಬೇತಿ ಶಿಬಿರಗಳನ್ನು ಪುನರಾರಂಭಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ರೋಹಿತ್ ಭಾರದ್ವಾಜ್ ನೇತೃತ್ವದ ಸಮಿತಿ ನೀಡಿರುವ ವರದಿಯ ಕುರಿತು ಅಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಿರುವ ಸಾಯ್‌, ದೇಶದ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೂ (ಎನ್‌ಎಸ್‌ಎಫ್‌) ವರದಿಯ ಪ್ರತಿಗಳನ್ನು ಕಳುಹಿಸಿದೆ.

ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಭಜಿಸಿ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳ ಸದಸ್ಯರು ಗುರುವಾರ ನಡೆದಿದ್ದ ಆನ್‌ಲೈನ್‌ ಸಂವಾದದ ವೇಳೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಮಾಡಿದ್ದರು. ಹಾಕಿಪಟುಗಳ ಈ ಸಲಹೆಯನ್ನೂ ಸಮಿತಿ ಪರಿಗಣಿಸಿದ್ದು, ಈ ಅಂಶವನ್ನೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘ಗಾಳಿ ಬೆಳಕು ಇರುವ ಸ್ವಚ್ಛ ಹಾಗೂ ವಿಶಾಲವಾದ ಕೊಠಡಿಗಳಲ್ಲಿ ಅಥ್ಲೀಟ್‌ಗಳ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದರೆ ಇನ್ನಷ್ಟು ಕೊಠಡಿಗಳನ್ನು ತೆರೆಯಬೇಕು. ಅಥ್ಲೀಟ್‌ಗಳು ಹಾಗೂ ಸಿಬ್ಬಂದಿಯ ಹಿತ ದೃಷ್ಟಿಯಿಂದ ಎಲ್ಲಾ ಕ್ರೀಡಾ ಫೆಡರೇಷನ್‌ಗಳೂ ನೈರ್ಮಲ್ಯ ಅಧಿಕಾರಿಗಳನ್ನು ನೇಮಿಸಬೇಕು. ಒಂದು ತಂಡ ಜಿಮ್‌ ತೊರೆದ ಕೂಡಲೇ ಸೋಂಕು ನಿವಾರಕಗಳನ್ನು ಸಿಂಪಡಿಸಬೇಕು. ನಂತರವಷ್ಟೇ ಮತ್ತೊಂದು ತಂಡದ ತಾಲೀಮಿಗೆ ಅವಕಾಶ ನೀಡಬೇಕು. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು’ ಎಂದು ಸಮಿತಿಯು ಸಲಹೆ ನೀಡಿದೆ.

‘ಅಥ್ಲೀಟ್‌ಗಳು ಒಂದೇ ದ್ವಾರದ ಮೂಲಕ ತರಬೇತಿ ಕೇಂದ್ರ ಪ್ರವೇಶಿಸುವ ಮತ್ತು ಹೊರ ಬರುವ ವ್ಯವಸ್ಥೆ ಮಾಡಬೇಕು. ಕೇಂದ್ರ ಸರ್ಕಾರವು ಪರಿಸ್ಥಿತಿಯ ಅವಲೋಕನ ನಡೆಸಿ ಆಯಾ ಪ್ರದೇಶಗಳ ಮೇಲಿನ ನಿರ್ಬಂಧ ತೆರವುಗೊಳಿಸುವವರೆಗೂ ಹೊರಗಿನವರ‍್ಯಾರೂ ಸಾಯ್‌ ಕೇಂದ್ರ ಪ್ರವೇಶಿಸದಂತೆ ಕಟ್ಟೆಚ್ಚರವಹಿಸಬೇಕು’ ಎಂದೂ ಸೂಚಿಸಿದೆ.

‘ಫುಟ್‌ಬಾಲ್‌, ರಗ್ಬಿ, ಕಬಡ್ಡಿಯಂತಹ ಕ್ರೀಡೆಗಳ (ಕಾಂಟ್ಯಾಕ್ಟ್‌ ಸ್ಪೋರ್ಟ್ಸ್‌) ಮೇಲೆ ಹೆಚ್ಚಿನ ನಿರ್ಬಂಧ ಹೇರಬೇಕು. ತರಬೇತಿಯ ವೇಳೆ ಒಬ್ಬರಾದ ನಂತರ ಮತ್ತೊಬ್ಬರು ಪಂಚಿಂಗ್‌/ಕಿಕ್‌ ಬ್ಯಾಗ್‌, ಸ್ಲಾಮ್‌ ಬಾಲ್‌ ಹಾಗೂ ಸ್ಕಿಪ್ಪಿಂಗ್‌ ರೋಪ್‌ಗಳನ್ನು ಬಳಸುತ್ತಾರೆ. ಇವುಗಳನ್ನು ಬಳಸಿದ ಕೈಯಿಂದಲೇ ಮುಖ ಸ್ಪರ್ಶಿಸುವುದು, ಬೆವರು ಒರೆಸಿಕೊಳ್ಳುವುದನ್ನು ಮಾಡಬಾರದು’ ಎಂದೂ ತಿಳಿಸಿದೆ.

ಸಚಿವಾಲಯಗಳ ಅನುಮೋದನೆ ದೊರೆತ ಬಳಿಕ, ಬೆಂಗಳೂರಿನಲ್ಲಿರುವ ಪಡುಕೋಣೆ ಮತ್ತು ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರ ಹಾಗೂ ಹೈದರಾಬಾದ್‌ನಲ್ಲಿರುವ ಪುಲ್ಲೇಲಾ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ ಸೇರಿದಂತೆ ಇನ್ನಿತರ ಪ್ರಮುಖ ಖಾಸಗಿ ಕ್ರೀಡಾ ಕೇಂದ್ರಗಳೂ ಈ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ.

ಸಮಿತಿಯ ಪ್ರಮುಖ ಸಲಹೆಗಳು

*ಎಲ್ಲಾ ಕ್ರೀಡಾಪಟುಗಳು ಹಾಗೂ ಸಿಬ್ಬಂದಿ ಆರೋಗ್ಯ ಸೇತು ಆ್ಯಪ್‌ ಬಳಸುವುದು ಕಡ್ಡಾಯ.

*ಕ್ರೀಡಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಬಳಸಬೇಕು.

*ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾಗಿ ಕೋವಿಡ್‌–19 ಪರೀಕ್ಷೆಗೆ ಒಳಪಡಬೇಕು.

*ಪರೀಕ್ಷಾ ವರದಿ ಬರುವವರೆಗೂ ಎಲ್ಲರೂ ಪ್ರತ್ಯೇಕವಾಸದಲ್ಲಿರಬೇಕು.

*ಅಥ್ಲೀಟ್‌ಗಳಿಗೆ ಸೋಂಕು ತಗುಲಿಲ್ಲ ಎಂಬುದನ್ನು ಸಂಬಂಧಪಟ್ಟ ಸಾಯ್‌ ಕೇಂದ್ರಗಳ ವೈದ್ಯರು ದೃಢೀಕರಿಸಬೇಕು.

*ಒಮ್ಮೆಗೆ ಗರಿಷ್ಠ ಐದು ಮಂದಿ ಜಿಮ್‌ನಲ್ಲಿ ಕರಸತ್ತು ನಡೆಸಬಹುದು. ಈ ವೇಳೆ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

*ಕೈಗವಸು ಧರಿಸದೇ ಫಿಟ್‌ನೆಸ್‌ ಉಪಕರಣಗಳನ್ನು ಮುಟ್ಟುವಂತಿಲ್ಲ. ಮುಖ ಗವಸು ಧರಿಸದಿದ್ದರೆ ಫಿಟ್‌ನೆಸ್‌ ಕೇಂದ್ರಕ್ಕೆ ಪ್ರವೇಶವಿಲ್ಲ.

*ತೀರಾ ಅಗತ್ಯವಿದ್ದರೆ ಮಾತ್ರ ಫಿಸಿಯೊಥೆರ‍ಪಿ ಹಾಗೂ ಮಸಾಜ್‌ಗೆ ಅವಕಾಶ ನೀಡಬೇಕು. ಈ ವೇಳೆ ನೈರ್ಮಲ್ಯ ಕಾಪಾಡುವುದು ಅತ್ಯಗತ್ಯ.

*ಎಲ್ಲಾ ಕೇಂದ್ರಗಳಲ್ಲೂ ಕೋವಿಡ್‌ ಟಾಸ್ಕ್‌ ಫೋರ್ಸ್‌‌ ಆರಂಭಿಸಬೇಕು. ಆಯಾ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುವವರು ಇದರ ಮುಖ್ಯಸ್ಥರಾಗಿರಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು