ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಪ್ಸ್‌ ಶೂಟರ್‌ಗಳ ತರಬೇತಿಗೆ ಅವಕಾಶ

Last Updated 30 ಆಗಸ್ಟ್ 2020, 11:09 IST
ಅಕ್ಷರ ಗಾತ್ರ

ನವದೆಹಲಿ: ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ (ಟಾಪ್ಸ್‌) ಆಯ್ಕೆಯಾಗಿರುವ ಶೂಟರ್‌ಗಳಿಗೆ ಸೆಪ್ಟೆಂಬರ್‌ನಿಂದ ತರಬೇತಿಗೆ ಅವಕಾಶ ಕಲ್ಪಿಸುವುದಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಭಾನುವಾರ ಹೇಳಿದೆ. ಕೋವಿಡ್‌–19 ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್‌ಡೌನ್‌ನ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಇನ್ನಷ್ಟು ಸಡಿಲಗೊಳಿಸಿರುವದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಟಾಪ್ಸ್‌ ಶೂಟರ್‌ಗಳು ಹಾಗೂ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿರುವ (ಎನ್‌ಸಿಒಇ) ಶೂಟರ್‌ಗಳು ಸೆಪ್ಟೆಂಬರ್‌ 2ರಿಂದ ಸಾಯ್‌ ಕೇಂದ್ರಗಳಲ್ಲಿ ತರಬೇತಿ ನಡೆಸಬಹುದು ಎಂದು ಸಾಯ್‌ ತಿಳಿಸಿದೆ.

ಉತ್ತಮ ಸಾಧನೆ ತೋರಿರುವ ಅಥ್ಲೀಟ್‌ಗಳು ತರಬೇತಿ ನಡೆಸಬಹುದಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ತಾನು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು (ಎಸ್‌ಒಪಿ) ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಾಯ್‌ ಹೇಳಿದೆ.

‘ಮೊದಲ ಹಂತದಲ್ಲಿ ಟಾಪ್‌ ಯೋಜನೆಯಲ್ಲಿ ಆಯ್ಕೆಯಾಗಿರುವ ಶೂಟರ್‌ಗಳು ಹಾಗೂ ಎನ್‌ಸಿಒಇನಲ್ಲಿರುವ, ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿರುವ (ಕೆಎಸ್‌ಎಸ್‌ಆರ್‌)ಅಥ್ಲೀಟ್‌ಗಳು ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ‘ ಎಂದು ಸಾಯ್ ಹೇಳಿದೆ.

‘ಸುರಕ್ಷಿತ ವಾತಾವರಣದಲ್ಲಿ ನಿರಂತರ ತರಬೇತಿಯನ್ನು ಖಚಿತಪಡಿಸಿಕೊಳ್ಳಲು, ಒಲಿಂಪಿಕ್ಸ್‌ ಅರ್ಹತೆಯ ವಿಶ್ವಾಸ ಮೂಡಿಸಿರುವ ಎಲೀಟ್‌ ಶೂಟರ್‌ಗಳ ಗುಂಪಿಗೆ ಪ್ರತ್ಯೇಕ ತರಬೇತಿ ತಾಣಗಳನ್ನು ಕಾಯ್ದಿರಿಸಲಾಗಿದೆ‘ ಎಂದು ಸಾಯ್‌ ತಿಳಿಸಿದೆ.

ಕೆಲವು ಎಲೀಟ್‌ ಶೂಟರ್‌ಗಳು ಮಾರ್ಚ್‌ ತಿಂಗಳಿನಿಂದ ಕರ್ಣಿ ಸಿಂಗ್‌ ಶೂಟಿಂಗ್ ರೇಂಜ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಸೆಪ್ಟೆಂಬರ್‌ 21ರಿಂದ ಕ್ರೀಡಾ ಕಾರ್ಯಕ್ರಮಗಳನ್ನು ಆರಂಭಿಸಲುಶನಿವಾರ ಅನುಮತಿ ನೀಡಿದೆ. ಟೂರ್ನಿಗಳ ಸ್ಥಳದಲ್ಲಿ 100 ಮಂದಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಟೂರ್ನಿಗಳಿಗೆ ಸೇರುವ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಹಾಗೂ ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT