ಮಂಗಳವಾರ, ಮೇ 18, 2021
30 °C
ಅಶ್ವಿನಿ–ಸಿಕ್ಕಿರೆಡ್ಡಿಗೆ ಜಯ

ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್‌ಗೆ ಸೈನಾ ನೆಹ್ವಾಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಭಾರತದ ಸೈನಾ ನೆಹ್ವಾಲ್ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ  ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು 21-19, 17-21, 21-19ರಿಂದ ಅಮೆರಿಕದ ಐರಿಸ್ ವಾಂಗ್ ಅವರನ್ನು ಮಣಿಸಿದರು. ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿರೆಡ್ಡಿ ಜೋಡಿಯೂ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಸೈನಾ, ಎರಡು ವರ್ಷಗಳ ಬಳಿಕ ಟೂರ್ನಿಯೊಂದರ ಸೆಮಿಫೈನಲ್ ಪ್ರವೇಶಿಸಿದರು. 2019ರ ಜನವರಿಯಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು.

ಸೈನಾ ಮುಂದಿನ ಪಂದ್ಯದಲ್ಲಿ, ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೊಪರ್ಸನ್ ಹಾಗೂ ಭಾರತದ ಇರಾ ಶರ್ಮಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ, ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ಸಿಕ್ಕಿರೆಡ್ಡಿ ಅವರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21–14, 21–18ರಿಂದ ಮೂರನೇ ಶ್ರೇಯಾಂಕದ, ಇಂಗ್ಲೆಂಡ್‌ನ ಕ್ಲೋ ಬಿರ್ಚ್‌ ಹಾಗೂ ಲಾರೆನ್ ಸ್ಮಿತ್ ಅವರನ್ನು ಪರಾಭವಗೊಳಿಸಿದರು. ಭಾರತದ ಜೋಡಿ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದೆ. ಅಶ್ವಿನಿ ಹಾಗೂ ಸಿಕ್ಕಿ ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಥಾಯ್ಲೆಂಡ್‌ನ ಜಾಂಗ್‌ಕೊಲ್ಪನ್‌ ಕಿತಿಥಾರಕುಲ್‌– ರವಿಂದಾ ಪ್ರಜೊಂಗ್ಜಾಯ್ ಅವರನ್ನು ಎದುರಿಸುವರು.

ನಾಲ್ಕರ ಘಟ್ಟಕ್ಕೆ ಕೃಷ್ಣ–ವಿಷ್ಣು: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಕೃಷ್ಣ ಪ್ರಸಾದ್ ಗರ್ಗ್‌ ಹಾಗೂ ವಿಷ್ಣುವರ್ಧನ್ ಗೌಡ ಪಂಜಾಲ ಅವರೂ ಸೆಮಿಫೈನಲ್‌ಗೆ ಕಾಲಿಟ್ಟರು. ಎಂಟರಘಟ್ಟದ ಪಂದ್ಯದಲ್ಲಿ ಈ ಜೋಡಿಯು 21-17, 10-21, 22-20ರಿಂದ ಫ್ರಾನ್ಸ್‌ನ ಕ್ರಿಸ್ಟೊ ಪೊಪೊಯ್–ಟೋಮಾ ಜೂನಿಯರ್ ಪೊಪೊಯ್ ಎದುರು ಗೆದ್ದರು.

ಕ್ವಾರ್ಟರ್‌ಫೈನಲ್‌ನ ಮತ್ತೊಂದು ಹಣಾಹಣಿಯಲ್ಲಿ ಎಂ.ಆರ್.ಅರ್ಜುನ್‌–ಧೃವ ಕಪಿಲ ಅವರು 19–21, 21–18, 21–23ರಿಂದ ಇಂಗ್ಲೆಂಡ್‌ನ ಕಾಲಮ್ ಹೆಮಿಂಗ್– ಸ್ಟೀವನ್ ಸ್ಟಾಲ್‌ವುಡ್‌ ಅವರಿಗೆ ಸೋತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು