ಶನಿವಾರ, ಫೆಬ್ರವರಿ 4, 2023
17 °C

ಇಂಥದ್ದನ್ನು ನಿರೀಕ್ಷಿಸಿರಲಿಲ್ಲ: ಸಿದ್ಧಾರ್ಥ್ ಟ್ವೀಟ್‌ಗೆ ಸೈನಾ ನೆಹ್ವಾಲ್ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಟ ಸಿದ್ಧಾರ್ಥ್ ಅವರು ಟ್ವೀಟ್ ಮೂಲಕ ನೀಡಿರುವ ಪ್ರತಿಕ್ರಿಯೆಗೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಿರುವ ಭದ್ರತಾ ಲೋಪವನ್ನು ಖಂಡಿಸಿ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಇದಕ್ಕೆ ಸಿದ್ಧಾರ್ಥ್ ಮಾಡಿರುವ ಪ್ರತಿಕ್ರಿಯೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

‘ನಟನಾಗಿ ಸಿದ್ಧಾರ್ಥ್ ಅವರನ್ನು ಇಷ್ಟಪಟ್ಟಿದ್ದೆ. ಆದರೆ ಇಂಥದ್ದನ್ನು (ಪ್ರತಿಕ್ರಿಯೆ ಬಗ್ಗೆ) ನಿರೀಕ್ಷಿಸಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ಉತ್ತಮವಾದ ಪದಗಳನ್ನು ಬಳಸಬಹುದಿತ್ತು’ ಎಂದು ಸೈನಾ ಹೇಳಿದ್ದಾರೆ.

‘ಅವರು ಯಾವ ಅರ್ಥದಲ್ಲಿ ಹಾಗೆ ಪ್ರತಿಕ್ರಿಯಿಸಿದ್ದಾರೋ ನನಗೆ ತಿಳಿದಿಲ್ಲ. ನಾನವರನ್ನು ನಟನಾಗಿ ಮಾತ್ರ ಇಷ್ಟಪಟ್ಟಿದ್ದೆ. ಆದರೆ ಇದು ಸರಿಯಲ್ಲ. ಇನ್ನಷ್ಟು ಉತ್ತಮ ಪದಗಳೊಂದಿಗೆ ಅವರು ಪ್ರತಿಕ್ರಿಯಿಸಬಹುದಾಗಿತ್ತು. ಉಳಿದದ್ದನ್ನು ಟ್ವಿಟರ್ ಮತ್ತು ನೀವೆಲ್ಲ ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ’ ಎಂದು ಪ್ರಕಟಣೆಯಲ್ಲಿ ಸೈನಾ ಹೇಳಿದ್ದಾರೆ.

ಪ್ರಧಾನಿಯವರ ಭದ್ರತೆಯೇ ಒಂದು ಸಮಸ್ಯೆಯಾಗಿದ್ದರೆ ಮತ್ತೆ ಈ ದೇಶದಲ್ಲಿ ಯಾವುದು ಸುರಕ್ಷಿತವಾಗಿದೆ ಎಂಬುದು ನನಗೆ ತಿಳಿದಿಲ್ಲ ಎಂದೂ ಅವರು ಹೇಳಿದ್ದಾರೆ.

ಸೈನಾ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಲು ಸಿದ್ಧಾರ್ಥ್ ಬಳಸಿದ ಪದಗಳ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಅವರ ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡುವಂತೆ ರಾಷ್ಟ್ರೀಯ ಮಹಿಳಾ ಆಯೋಗ ‘ಟ್ವಿಟರ್‌ ಇಂಡಿಯಾ’ಗೆ ಆಗ್ರಹಿಸಿತ್ತು.

‘ಪ್ರಧಾನ ಮಂತ್ರಿಗಳ ಭದ್ರತೆ ವಿಚಾರದಲ್ಲೇ ರಾಜಿ ಮಾಡಿಕೊಂಡರೆ ಯಾವ ದೇಶವೂ ತಾನು ಸುರಕ್ಷಿತವೆಂದು ಭಾವಿಸಲಾರದು. ನಾನಿದನ್ನು ಕಟುವಾಗಿ ಖಂಡಿಸುತ್ತೇನೆ. ಇದು ಪ್ರಧಾನಿ ಮೋದಿಯವರ ಮೇಲೆ ಅರಾಜಕತಾವಾದಿಗಳ ಹೇಡಿತನದ ದಾಳಿ’ ಎಂದು ನೆಹ್ವಾಲ್ ಟ್ವೀಟ್ ಮಾಡಿದ್ದರು. ಸೈನಾ ನೆಹ್ವಾಲ್ ಬಿಜೆಪಿ ಸದಸ್ಯೆಯೂ ಆಗಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ಧಾರ್ಥ್, ‘ವಿಶ್ವದ ಸಬ್ಟಲ್ ಕಾಕ್ ಚಾಂಪಿಯನ್... ಧನ್ಯವಾದಗಳು ದೇವರೇ, ನಮ್ಮಲ್ಲೂ ಭಾರತದ ರಕ್ಷಕರಿದ್ದಾರೆ’ ಎಂದು ಕೈಮುಗಿಯುತ್ತಿರುವ ಚಿಹ್ನೆಯೊಂದಿಗೆ ಟ್ವೀಟ್ ಮಾಡಿದ್ದರು.

ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಮಜಾಯಿಷಿ ನೀಡಿರುವ ಸಿದ್ಧಾರ್ಥ್, ‘ಕಾಕ್ ಮತ್ತು ಬುಲ್, ಕೇವಲ ಉಲ್ಲೇಖವಷ್ಟೇ. ಬೇರೆ ರೀತಿ ಓದಿಕೊಳ್ಳುವುದು ಸರಿಯಲ್ಲ. ಅಗೌರವ ಸೂಚಿಸುವ ಯಾವ ಉದ್ದೇಶವೂ ಇಲ್ಲ, ಅಂಥ ಯಾವುದನ್ನೂ ಸೂಚಿಸಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು