ಶನಿವಾರ, ಜೂಲೈ 11, 2020
21 °C
ಐಬಿಪಿಎ ವೆಬಿನಾರ್‌ನಲ್ಲಿ ದಿಗ್ಗಜ ಆಟಗಾರ ಸರಬ್ಜಿತ್ ಸಿಂಗ್‌ಗೆ ಸ್ಮರಣೆ

ಭಾರತದ ಶ್ರೇಷ್ಠ ಬ್ಯಾಸ್ಕೆಟ್‌ಬಾಲ್ ಆಟಗಾರ ಸರಬ್ಜಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬ್ಯಾಸ್ಕೆಟ್‌ಬಾಲ್ ದಿಗ್ಗಜ ಸರಬ್ಜಿತ್ ಸಿಂಗ್ ಅವರ ಎದುರು ಆಡಿದ ಅನುಭವ ನನಗಿದೆ. ನಮ್ಮ ಕಾಲದಲ್ಲಿ ಅವರು  ಸೆಂಟರ್‌ ಪರಿಣತರಾಗಿದ್ದರು. ಅವರು ಸ್ಕೋರ್ ಮಾಡದಂತೆ ನಿಯಂತ್ರಿಸುವುದೇ ನಮ್ಮ ತಂತ್ರಗಾರಿಕೆಯ ಪ್ರಮುಖ ಭಾಗವಾಗಿತ್ತು’–

ಭಾರತ ಬ್ಯಾಸ್ಕೆಟ್‌ಬಾಲ್ ತಂಡದ ಮಾಜಿ ಆಟಗಾರ, ಬೆಂಗಳೂರಿನ ರಾಜಗೋಪಾಲ್ ಕಡಂಬಿ ಅವರ ಮಾತುಗಳಿವು.

ಸಂಯೋಜಿತ ಬ್ಯಾಸ್ಟೆಟ್‌ಬಾಲ್ ಆಟಗಾರರ ಸಂಸ್ಥೆ (ಐಬಿಪಿಎ) ಯು ಭಾನುವಾರ, ಬ್ಯಾಸ್ಕೆಟ್‌ಬಾಲ್ ದಿಗ್ಗಜ,  ಪ್ರಥಮ ಅರ್ಜುನ ಪ್ರಶಸ್ತಿ ಪುರಸ್ಕೃತ ಸರಬ್ಜಿತ್ ಸಿಂಗ್ ಸ್ಮರಣಾರ್ಥ ಆಯೋಜಿಸಿದ್ದ ಇ–ಸಮಾವೇಶ (ವೆಬಿನಾರ್) ದಲ್ಲಿ ರಾಜಗೋಪಾಲ್ ಮಾತನಾಡಿದರು.

’1964ರಲ್ಲಿ ರಾಷ್ಟ್ರೀಯ ಬ್ಯಾಸ್ಟೆಟ್‌ಬಾಲ್ ಟೂರ್ನಿಯಲ್ಲಿ ನಮ್ಮ ತಂಡ ಮತ್ತು ಸಿಂಗ್ ಅವರ ತಂಡ ಮುಖಾಮುಖಿಯಾಗಿದ್ವವು. ಅವರು ಶೂಟಿಂಗ್ ಏರಿಯಾದಲ್ಲಿ ಬಂದರೆ ಸ್ಕೋರ್ ಗಳಿಸುವುದು ಖಚಿತ. ಆದ್ದರಿಂದ ನಮ್ಮ ಗಮನವೆಲ್ಲ ಅವರ ಮೇಲೆಯೇ ಇತ್ತು. ಅವರನ್ನು ತಡೆಯುವುದೇ ನಮ್ಮ ಮೂಲ ಗುರಿಯಾಗಿತ್ತು. ಎತ್ತರದ ನಿಲುವು, ಚುರುಕಾದ ಆಟಗಾರರಾಗಿದ್ದರು. ಅವರ ಆಟವನ್ನು ನೋಡುವುದೇ ಚೆಂದ‘‘ ಎಂದು ಸ್ಮರಿಸಿದರು.

ವೆಬಿನಾರ್‌ನಲ್ಲಿ ಭಾಗವಹಿಸಿದ್ದ ಐಬಿಪಿಎ ಮುಖ್ಯಸ್ಥ ಅಬ್ಬಾಸ್ ಮುಂತಾಸಿರ್, ’ಸರಬ್ಜಿತ್ ಬಹಳ ಆತ್ಮವಿಶ್ವಾಸಭರಿತ ಆಟಗಾರ. ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿಯೂ ಅವರು ಭಾಂಗ್ರಾ ನೃತ್ಯದ ಹೆಜ್ಜೆಗಳನ್ನು ಹಾಕುತ್ತಲೇ ಚೆಂಡನ್ನು ಶೂಟ್ ಮಾಡುತ್ತಿದ್ದ ರೀತಿ ಅಮೋಘವಾಗಿತ್ತು. ಅದು ಅವರ ಆತ್ಮವಿಶ್ವಾಸದ ಪ್ರತೀಕವಾಗಿತ್ತು. ಅಂತಹ ಮತ್ತೊಬ್ಬ ಆಟಗಾರನನ್ನು ನಾನು ನೋಡಲಿಲ್ಲ. ಭಾರತದ ಪ್ರಪ್ರಥಮ ಸೆಂಟರ್ ಪೊಸಿಷನ್ ಆಟಗಾರ ಅವರು‘ ಎಂದರು. 

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಅಂತರರಾಷ್ಟ್ರೀಯ  ಆಟಗಾರ ಓಂಪ್ರಕಾಶ್ ಜೂನಿಯರ್, ’ಸರಬ್ಜಿತ್ ಬಲಿಷ್ಠ ಆಟಗಾರನಾಗಿದ್ದರು. ಎತ್ತರವಾಗಿ್ದ್ದ ಅವರಿಗೆ ಬ್ಯಾಸ್ಕೆಟ್‌ಬಾಲ್‌ ಕೌಶಲಗಳು ಚೆನ್ನಾಗಿ ಒಲಿದಿದ್ದವು. ಕೋರ್ಟ್‌ನಲ್ಲಿ ಅವರಿದ್ದರೆ ಮಿಂಚಿನ ಸಂಚಲನವಾಗುತ್ತಿತ್ತು‘ ಎಂದರು.  

‘ಸರಬ್ಜೀತ್ ಕೈಯಲ್ಲಿ ಚೆಂಡು ತುಂಬಾ ಚಿಕ್ಕದಾಗಿ ಕಾಣುತ್ತಿತ್ತು. ಏಕೆಂದರೆ ಅವರು ಅಜಾನುಬಾಹುವಾಗಿದ್ದರು. ಸಹ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರೊಂದಿಗೆ ಆಡುವ ಅವಕಾಶ ನನಗೆ ಸಿಕ್ಕಿತ್ತು‘ ಎಂದು  ಸರ್ವಿಸಸ್‌ ಮಾಜಿ ಆಟಗಾರ ಜೆ.ಸಿ. ನಾಯರ್ ಹಳೆಯ ನೆನಪುಗಳಲ್ಲಿ ತೇಲಿದರು.

ವೆಬಿನಾರ್‌ನಲ್ಲಿ ಆಟಗಾರರ ಫಿಟ್‌ನೆಸ್‌ ಮತ್ತು ಕಂಡಿಷನಿಂಗ್ ಕುರಿತ ಮಾತುಕತೆಗೆ ಚಾಲನೆ ನೀಡಿದವರು ಅಮೆರಿಕದ ವೆಂಡರ್‌ಬಿಲ್ಟ್‌ ವಿಶ್ವವಿದ್ಯಾಲಯದ ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ಕೋಚ್ ಡಾ. ಅಲಿಸನ್ ರ್ಯಾಂಡಲ್.

’ಟ್ರ್ಯಾಕ್ ಮತ್ತು ಫೀಲ್ಡ್‌ ಕ್ರೀಡೆಗಳು ಯಾವುದೇ ಕ್ರೀಡಾಪಟುವಿಗೆ ಮೂಲಪಾಠವಾಗುತ್ತವೆ. ಅಥ್ಲೆಟಿಕ್ಸ್‌ನ ನನ್ನ ಅನುಭವ ಹಲವು ರೀತಿಯಲ್ಲಿ ನೆರವಾಯಿತು. ಯಾವುದೇ ಕ್ರೀಡೆಗೂ ಮೊದಲ ಪಾಠ ಇಲ್ಲಿಯೇ ಆರಂಭವಾಗಬೇಕು‘ ಎಂದು ರ್ಯಾಂಡಲ್ ಹೇಳಿದರು. ಫಿಟ್‌ನೆಸ್ ಟ್ರೇನಿಂಗ್, ಪೌಷ್ಟಿಕ ಆಹಾರದ ಮಹತ್ವವನ್ನೂ ಅವರು ಹೇಳಿದರು.

 ಅಥ್ಲೆಟಿಕ್ ಕೋಚ್ ಮೈಕ್ ರಸೆಲ್, ಕ್ರೀಡಾ ವೈದ್ಯಕೀಯ ತಜ್ಞ ಕಣ್ಣನ್ ಪುಗಝೇಂದಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು