ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಕಪ್ಪುಚಿನ್ನ ಸೆಮೆನ್ಯಾಇದ್ಯಾವ ನ್ಯಾಯ?

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಆಫ್ರಿಕಾದ ಕ್ಯಾಸ್ಟರ್‌ ಸೆಮೆನ್ಯಾ ಈಗ ಕ್ರೀಡಾಲೋಕದಲ್ಲಿ ಸುದ್ದಿಯ ಕೇಂದ್ರಬಿಂದು. 800 ಮೀಟರ್‌ ಮಹಿಳಾ ಓಟದಲ್ಲಿ ಈಕೆಯ ಕಣ್ಣು ಸದಾ ಚಿನ್ನದ ಪದಕದ ಮೇಲೆ! ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿರುವ ಹೆಗ್ಗಳಿಕೆ ಈ ಅಂತರಲಿಂಗಿ ಅಥ್ಲೀಟ್‌ಳದ್ದು. (ಅಂತರಲಿಂಗಿ – intersex- ಹೆಣ್ಣು ಮತ್ತು ಗಂಡಿನ ಲೈಂಗಿಕ ಅವಯವಗಳ ಅಂಗಾಂಶ ಹೊಂದಿದಾಕೆ) 800 ಮೀಟರ್‌ ಮಹಿಳಾ ಓಟದಲ್ಲಿ ಕೆಲವು ವರ್ಷಗಳಿಂದ ಈಕೆಯೇ ವಿಶ್ವಚಾಂಪಿಯನ್‌. 

‘ಈಕೆ ಇನ್ನು ಮುಂದೆ 800 ಮೀಟರ್‌ ಓಟದಲ್ಲಿ ಭಾಗವಹಿಸುವಂತಿಲ್ಲ, ಭಾಗವಹಿಸಿದರೆ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ನ ನಿಯಮ ಉಲ್ಲಂಘನೆಯಾಗುತ್ತದೆ’ ಎಂಬ ತೀರ್ಪು ಬಂದಿದೆ. ಐಎಎಎಫ್‌ ತನ್ನನ್ನು 800 ಮೀಟರ್‌ ಓಟದಲ್ಲಿ ಸ್ಪರ್ಧಿಸದಂತೆ ತಡೆದದ್ದನ್ನು ಪ್ರಶ್ನಿಸಿ ಈಕೆ ಸಲ್ಲಿಸಿದ ಮೇಲ್ಮನವಿಯನ್ನು ಸ್ವಿಟ್ಜರ್‌ಲೆಂಡ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾ ವ್ಯಾಜ್ಯ ಮಂಡಳಿ (The Court of Arbitration for Sport) ತಿರಸ್ಕರಿಸಿದೆ. ಮಂಡಳಿಯ ಮೂವರು ಪಂಚಾಯ್ತಿದಾರರು 2 ತಿಂಗಳ ಕಾಲ ಈ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಐಎಎಎಫ್‌ ನಿಯಮಗಳ ಪ್ರಕಾರ, ‘ಅಂತರಲಿಂಗಿಗಳ ದೇಹದಲ್ಲಿ ಟೆಸ್ಟೋಸ್ಟೆರೈನ್‌ ಮಟ್ಟ ಇತರ ಮಹಿಳೆಯರಿಗಿಂತ ಸಹಜವಾಗಿಯೇ ಹೆಚ್ಚಿರುತ್ತದೆ. ಇದರಿಂದ ಅವರ ಮಾಂಸಖಂಡ ಮತ್ತು ಶಕ್ತಿ ಹೆಚ್ಚಳವಾಗುತ್ತದೆ. ದೇಹದಲ್ಲಿ ಅತ್ಯಧಿಕ ಮಟ್ಟದ ಟೆಸ್ಟೊಸ್ಟರೈನ್‌ ಇರುವವರು, ಇತರ ಮಹಿಳೆಯರ ಜೊತೆಗೆ ಸ್ಪರ್ಧಿಸಿದಾಗ ಸಹಜಸ್ಪರ್ಧೆಯ ನ್ಯಾಯ ಪಾಲನೆಯಾಗುವುದಿಲ್ಲ.’

ಈ ತೀರ್ಪಿನ ಕುರಿತು ಪರ– ವಿರೋಧ ವಾದ ಭುಗಿಲೆದ್ದಿದೆ. ಐಎಎಎಫ್‌ನ ಈ ನಿಯಮ ಅಂತರಲಿಂಗಿ ಕ್ರೀಡಾಪಟುಗಳ ವಿರುದ್ಧ ನಡೆಸುತ್ತಿರುವ ತಾರತಮ್ಯ ಎನ್ನುವುದು ಸೆಮೆನ್ಯಾ ಪರವಾಗಿ ನಿಂತಿರುವವರ ವಾದ. ಇದೇ ವಾದವನ್ನು ಸೆಮೆನ್ಯಾ ಪಂಚಾಯ್ತಿದಾರರ ಮುಂದೆ ಮಂಡಿಸಿದ್ದಳು. ವಿಪರ್ಯಾಸದ ಸಂಗತಿಯೆಂದರೆ, ಅಂತರರಾಷ್ಟ್ರೀಯ ಕ್ರೀಡಾ ವ್ಯಾಜ್ಯ ಮಂಡಳಿಯ ತೀರ್ಪುಗಾರರು ಕೂಡಾ ‘ಹೌದು, ಇದು ಉಭಯಲಿಂಗಿಗಳ ವಿರುದ್ಧ ತಾರತಮ್ಯದ ನೀತಿ’ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಓಟದ ಸ್ಪರ್ಧೆಯಲ್ಲಿ ಸಹಜನ್ಯಾಯ ಪಾಲಿಸಬೇಕಾದರೆ ಈ ನಿಯಮವನ್ನು ಪಾಲಿಸುವುದು ಅನಿವಾರ್ಯ ಎಂದೂ ತೀರ್ಪು ನೀಡಿದ್ದಾರೆ.

ಈ ಹೊಸ ಪಂಚಾಯ್ತಿಯಿಂದಾಗಿ ಸೆಮೆನ್ಯಾ 800 ಮೀಟರ್‌ ಓಟದ ಕಣದಿಂದ ನಿರ್ಗಮಿಸಬೇಕಾಗುತ್ತದೆ. ಮೇ 8ರಿಂದ ಅನ್ವಯವಾಗಿರುವ ಐಎಎಎಫ್‌ನ ಈ ನಿಯಮದ ಪ್ರಕಾರ, ದೇಹದಲ್ಲಿ ಟೆಸ್ಟೊಸ್ಟೆರೈನ್‌ ಅತ್ಯಧಿಕ  ಮಟ್ಟದಲ್ಲಿರುವ ಮಹಿಳೆ 400 ಮೀಟರ್‌ನಿಂದ ಒಂದು ಮೈಲಿ ದೂರದವರೆಗಿನ ಓಟದಲ್ಲಿ ಭಾಗವಹಿಸುವಂತಿಲ್ಲ. ಆಕೆ ಉಭಯಲಿಂಗಿಯಾಗಿರಲಿ ಅಥವಾ ಲಿಂಗಾಂತರಿ  (ಗಂಡಾಗಿ ಹುಟ್ಟಿ ಬಳಿಕ ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಕೊಂಡವರು ಅಥವಾ ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ ಆದವರು) ಆಗಿರಲಿ, ಈ ನಿಯಮ ಅನ್ವಯವಾಗುತ್ತದೆ ಎನ್ನುವುದು ತೀರ್ಪಿನ ಸಾರಾಂಶ.

28ರ ಹರೆಯದ ಸೆಮೆನ್ಯಾ, ಸದ್ಯಕ್ಕೆ ವಿಶ್ವದ ಎರಡನೇ ಅತ್ಯಂತ ವೇಗದ ಓಟಗಾರ್ತಿ. 2009ರಲ್ಲಿ 800 ಮೀಟರ್‌ ಓಟದಲ್ಲಿ (ಐಎಎಎಫ್‌) ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ ಬಳಿಕ ವಿವಾದ ಈಕೆಯ ಬೆನ್ನುಹತ್ತಿಕೊಂಡೇ ಬಂದಿದೆ. ಟೀಕೆ, ತನಿಖೆಗಳ ಮಧ್ಯೆ ಈಕೆಯ ಪದಕಗಳ ಬೇಟೆಯೂ ಮುಂದುವರಿದಿತ್ತು. 2012ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ 800 ಮೀಟರ್‌ ಓಟದಲ್ಲಿ ಚಿನ್ನ ಗೆದ್ದ ಸೆಮೆನ್ಯಾ, 2016ರ ಬೇಸಿಗೆ ಓಟದಲ್ಲೂ ಚಿನ್ನಕ್ಕೆ ಮುತ್ತಿಟ್ಟಳು. ಎಲ್ಲಕ್ಕಿಂತ ದೊಡ್ಡ ಯಶಸ್ಸು 2016ರ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದದ್ದು. 2017ರಲ್ಲಿ ಲಂಡನ್‌ನಲ್ಲಿ ನಡೆದ ಐಎಎಎಫ್‌ ವಿಶ್ವ ಕ್ರೀಡಾಕೂಟದಲ್ಲೂ 800 ಮೀಟರ್‌ ಕಣದಲ್ಲಿ ಈಕೆಯ ಪಾರಮ್ಯವನ್ನು ಮುರಿಯಲು ಯಾರಿಗೂ ಸಾಧ್ಯವಾಗಲಿಲ್ಲ.

ಇದೀಗ ಬಂದಿರುವ ಹೊಸ ತೀರ್ಪಿನ ಪ್ರಕಾರ, ಈಕೆಗೆ ಎರಡು ದಾರಿಗಳು ಉಳಿದಿವೆ. ಮೊದಲನೆಯದ್ದು ದೇಹದಲ್ಲಿ ಟೆಸ್ಟೊಸ್ಟೆರೈನ್‌ ಪ್ರಮಾಣವನ್ನು ಕಡಿಮೆ ಮಾಡಲು ಔಷಧಿ ತೆಗೆದುಕೊಳ್ಳುವುದು. (ಐಎಎಎಫ್‌ ನಿಯಮದ ಪ್ರಕಾರ, ಅಂತರಲಿಂಗಿಗಳು 400 ಮೀಟರ್‌ನಿಂದ ಒಂದು ಮೈಲಿ ದೂರದವರೆಗಿನ ಮಹಿಳಾ ಓಟದಲ್ಲಿ ಸ್ಪರ್ಧಿಸಬೇಕಿದ್ದರೆ ಅವರ ದೇಹದಲ್ಲಿ ಟೆಸ್ಟೋಸ್ಟೆರೈನ್‌ನ ಪ್ರಮಾಣ ಲೀಟರ್‌ಗೆ 5 ನ್ಯಾನೊಮೋಲ್‌ಗಿಂತ ಕಡಿಮೆ ಇರಬೇಕು) ಎರಡನೆಯದ್ದು ಭಾಗವಹಿಸುವ ಟ್ರ್ಯಾಕ್‌ ಇವೆಂಟನ್ನು 800 ಮೀಟರ್‌ನಿಂದ ಬದಲಾಯಿಸುವುದು.

ಟೆಸ್ಟೋಸ್ಟೆರೈನ್‌ ಪ್ರಮಾಣ ಕಡಿತಕ್ಕೆ ಔಷಧಿ ತೆಗೆದುಕೊಂಡರೆ ಅದರ ಅಡ್ಡಪರಿಣಾಮಗಳಿಂದ ಓಟದ ಕ್ಷಮತೆ ಕುಂಠಿತಗೊಳ್ಳಬಹುದು.

ಟ್ರ್ಯಾಕ್ ಇವೆಂಟ್‌ ಬದಲಾಯಿಸಿದರೆ ಪದಕ ಗೆಲ್ಲುವುದು ಕಷ್ಟ. ಏಕೆಂದರೆ ಈ ಹಿಂದೆ ವಿಶ್ವ ಕ್ರೀಡಾಕೂಟದ 1500 ಮೀಟರ್‌ ಮಹಿಳೆಯರ ಓಟದಲ್ಲೂ ಸೆಮೆನ್ಯಾ ಭಾಗವಹಿಸಿದ್ದಳು. ಆ ಇವೆಂಟ್‌ನಲ್ಲಿ ಈಕೆಯ ಅತ್ಯುತ್ತಮ ಸಾಧನೆ ಎಂದರೆ 9ನೇ ಸ್ಥಾನ. ಈ ವರ್ಷ 1500 ಮೀಟರ್‌ ಓಟದಲ್ಲಿ ಈಕೆಯ ವಿಶ್ವ ರಾಂಕಿಂಗ್‌ 22ನೆಯದ್ದು. ಹಾಗಾಗಿ ಟ್ರ್ಯಾಕ್‌ ಇವೆಂಟ್‌ ಬದಲಾಯಿಸುವುದೂ ನಿಷ್ಪ್ರಯೋಜಕ.

800 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದಾಗ ಈಕೆ ಓಟವನ್ನು ಕ್ರಮಿಸಲು ತೆಗೆದುಕೊಂಡದ್ದು 1:55.45 ನಿಮಿಷ. ಅದಕ್ಕೂ ಹಿಂದೊಮ್ಮೆ ಇದೇ ದೂರವನ್ನು ಈಕೆ 1:55.16 ನಿಮಿಷಗಳಲ್ಲಿ ಕ್ರಮಿಸಿದ್ದೂ ಇದೆ. ಈಗ ಐಎಎಎಫ್‌ನ ನಿಯಮ ಈಕೆಯ ಕ್ರೀಡಾಬದುಕನ್ನು ಭಗ್ನಗೊಳಿಸಿದಂತಾಗಿದೆ.

ಈ ತೀರ್ಪು ಕ್ರೀಡಾಸಕ್ತರಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಅಂತರಲಿಂಗಿಯಾದವರು ಪುರುಷರೋ ಮಹಿಳೆಯೋ ಎನ್ನುವ ಕುರಿತು ನಿರ್ದಿಷ್ಟ ವ್ಯಾಖ್ಯೆಯೂ ವೈದ್ಯಲೋಕದಲ್ಲಿ ಇಲ್ಲ. ಕ್ರೀಡಾಸ್ಪರ್ಧೆಯಲ್ಲಿ ಸ್ಪರ್ಧಿಗಳ ಮಧ್ಯೆ ಸಹಜನ್ಯಾಯ ಇರಬೇಕು ನಿಜ. ಆದರೆ ಅಂತರಲಿಂಗಿಯ ದೇಹದಲ್ಲಿ ಪುರುಷ ಹಾರ್ಮೋನುಗಳ ಸಂಖ್ಯೆ ಸಹಜವಾಗಿಯೇ ಜಾಸ್ತಿಯಾಗಿದ್ದರೆ ಅದರಲ್ಲಿ  ಆಕೆಯದ್ದೇನು ತಪ್ಪು? ತಜ್ಞರ ಪ್ರಕಾರ, ಅಂತರಲಿಂಗಿಗಳಲ್ಲಿ ಟೆಸ್ಟೋಸ್ಟೆರೈನ್‌ಗಳ ಏರಿಳಿತ ಸ್ವಾಭಾವಿಕ. ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ, ಅಂತರಲಿಂಗಿಯೊಬ್ಬರು ತಮ್ಮನ್ನು ಹೆಣ್ಣು ಅಥವಾ ಗಂಡು ಗುರುತಿಸಿಕೊಳ್ಳುವ ಸ್ವಾತಂತ್ರ್ಯ ಪೂರ್ತಿಯಾಗಿ ಆಕೆಯದ್ದು. ಹೀಗಿರುವಾಗ 400 ಮೀಟರ್‌ನಿಂದ ಹಿಡಿದು ಒಂದು ಮೈಲಿವರೆಗಿನ ಓಟದಲ್ಲಿ ಆಕೆ ಇತರ ಮಹಿಳೆಯರ ಜೊತೆ ಓಡುವಂತಿಲ್ಲ ಎಂದರೆ, ಅದೂ ಸಹಜನ್ಯಾಯದ ಉಲ್ಲಂಘನೆಯಲ್ಲವೆ?

ದಕ್ಷಿಣ ಆಫ್ರಿಕಾ ಸರ್ಕಾರವೂ ಈ ತೀರ್ಪಿನ ವಿರುದ್ಧ ‘ಗರಂ’ ಆಗಿದೆ. ‘ಐಎಎಎಫ್‌ನ ಈ ನಿಯಮದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನಮ್ಮ ಕ್ರೀಡಾಳುವಿನ ಘನತೆಗೂ ಕುಂದುಂಟಾಗಿದೆ. ಅಥ್ಲೆಟಿಕ್ಸ್‌ ಇಡೀ ಜಗತ್ತನ್ನು ಒಂದು ಮಾಡಬೇಕು. ಅದರ ಬದಲು ನಿಯಮದ ಹೆಸರಿನಲ್ಲಿ ಕ್ರೀಡಾಳುಗಳ ಮಧ್ಯೆ ಒಡಕು ಉಂಟುಮಾಡಲಾಗುತ್ತಿದೆ’ ಎನ್ನುವ ತೀವ್ರ ಟೀಕೆ ಅಲ್ಲಿನ ಕ್ರೀಡಾಸಚಿವಾಲಯದಿಂದ ಬಂದಿದೆ.

ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ತೀರ್ಪಿನ ಸುದ್ದಿಯನ್ನು ಪ್ರಕಟಿಸುವಾಗ, ಕ್ಯಾಸ್ಟರ್‌ ಸೆಮೆನ್ಯಾಳನ್ನು ಟ್ರಾನ್ಸ್‌ಜೆಂಡರ್‌ (ಲಿಂಗಾಂತರಿ) ಅಥ್ಲೀಟ್‌ ಎಂದು ಸೂಚಿಸಿರುವುದು ಕೂಡಾ ನಮ್ಮಲ್ಲಿ  ಅಂತರಲಿಂಗಿ ಅಥ್ಲೀಟ್‌ಗಳ ಕುರಿತು ಇರುವ ಅರೆಜ್ಞಾನವನ್ನು ಎತ್ತಿತೋರಿಸಿದೆ. ಅಂತರರಾಷ್ಟ್ರೀಯ ಕ್ರೀಡಾ ವ್ಯಾಜ್ಯ ಮಂಡಳಿಯ ಈ ತೀರ್ಪಿನಿಂದ ಈ ವಿವಾದ ಇಲ್ಲಿಗೇ ಸುಖಾಂತ್ಯವಾಗಿದೆ ಎನ್ನುವಂತಿಲ್ಲ. ಈ ತೀರ್ಪೇ ಹೊಸ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಯೂ ಇದೆ. ಆಫ್ರಿಕಾದ ಕ್ರೀಡಾಸಚಿವಾಲಯ ನೀಡಿರುವ ಪ್ರತಿಕ್ರಿಯೆ ಇದರ ಮುನ್ಸೂಚನೆಯೋ ಎಂಬಂತಿದೆ. ಈ ತೀರ್ಪಿನ ಕುರಿತು ಕ್ರೀಡಾ ಟ್ರಿಬ್ಯೂನಲ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಆಫ್ರಿಕಾದ ಕ್ರೀಡಾ ಮಂಡಳಿ ಸೂಚನೆ ನೀಡಿದೆ.

ಬಡತನದ ಬೇಗೆಯಲ್ಲಿ ಬಳಲುತ್ತಿರುವ ಆಫ್ರಿಕಾದ ಸಣ್ಣ ಪ್ರಾಂತ್ಯವೊಂದರಿಂದ ಉದಿಸಿಬಂದ ಚಿನ್ನದ ಹುಡುಗಿ ಸೆಮೆನ್ಯಾ, ವಿಶ್ವವಿದ್ಯಾಲಯದಲ್ಲಿ ಕ್ರೀಡಾ ವಿಜ್ಞಾನವನ್ನು ಅಧ್ಯಯನ ಮಾಡಿದಾಕೆ. ಬಾಲ್ಯದಲ್ಲಿ ಫುಟ್‌ಬಾಲ್‌ ಆಟದ ತರಬೇತಿಗಾಗಿ ಓಟದ ಅಭ್ಯಾಸ ನಡೆಸುತ್ತಿದ್ದ ಆಕೆಯ ಪ್ರತಿಭೆ ತರಬೇತುದಾರರ ಕಣ್ಣಿಗೆ ಬಿದ್ದಾಗ ಅಥ್ಲೀಟ್‌ ಆದವಳು. ಸಾಧನೆಯಿಂದ ಮೇಲೆಬಂದು ಪದಕಗಳ ಬೇಟೆ ನಡೆಸಿದ ಆಕೆಗೆ 2012ರ ಒಲಿಂಪಿಕ್ಸ್‌ನಲ್ಲಿ ದೇಶದ ಧ್ವಜ ಹಿಡಿದು ತಂಡದ ಪಥಸಂಚಲನ ಮುನ್ನಡೆಸುವ ಗೌರವ ಸಿಕ್ಕಿತು. ಈಕೆ ಆಫ್ರಿಕಾದ ಸಾವಿರಾರು ಕ್ರೀಡಾಪಟುಗಳ ಸ್ಪೂರ್ತಿಯ ಸೆಲೆಯೂ ಹೌದು. ಈ ಅಗ್ನಿದಿವ್ಯದಿಂದ ಸೆಮೆನ್ಯಾ ಮೇಲೆದ್ದು ಬರಬಹುದೆ? ಟ್ರ್ಯಾಕ್‌ ಇವೆಂಟ್‌ ಬದಲಿಸಿಕೊಂಡು ಮತ್ತೆ ಚಿನ್ನದ ಬೇಟೆಯಾಡಬಹುದೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು