ಮಂಗಳವಾರ, ಜೂಲೈ 7, 2020
28 °C

ಆಗಸ್ಟ್‌ನಲ್ಲಿ ಶೂಟಿಂಗ್‌ ಶಿಬಿರ ಆರಂಭ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಆಗಸ್ಟ್‌ ತಿಂಗಳ ಮಧ್ಯಂತರದಲ್ಲಿ ಶೂಟಿಂಗ್‌ ಶಿಬಿರಗಳನ್ನು ಪುನರಾರಂಭಿಸಲು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ಚಿಂತಿಸಿದೆ.

ಜುಲೈ 15ರಂದು ನಡೆಯುವ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಮುಂದಿನ ವರ್ಷ ನಿಗದಿಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ 34 ಶೂಟರ್‌ಗಳ ಪಟ್ಟಿಯನ್ನು ಎನ್‌ಆರ್‌ಎಐ ಇತ್ತೀಚೆಗೆ ಬಿಡುಗಡೆ ಮಾಡಿತ್ತು. 

‘ಜುಲೈ 15ರಂದು ನಿಗದಿಯಾಗಿರುವ ಸಭೆಯಲ್ಲಿ ಶಿಬಿರ ಪುನರಾರಂಭಿಸಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಲಾಗುತ್ತದೆ’ ಎಂದು ಎನ್‌ಆರ್‌ಎಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜುಲೈ ಮಧ್ಯಂತರದಿಂದಲೇ ಶಿಬಿರಗಳನ್ನು ಆರಂಭಿಸಲು ಚಿಂತಿಸಲಾಗಿತ್ತು. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆ ಯೋಜನೆಯನ್ನು ಕೈಬಿಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್‌ 15) ಬಳಿಕ ಶಿಬಿರಗಳನ್ನು ನಡೆಸುವ ಆಲೋಚನೆ ಇದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ತೀರ್ಮಾನವೇ ಅಂತಿಮವಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಶೂಟರ್‌ಗಳನ್ನು ಗಮನದಲ್ಲಿಟ್ಟುಕೊಂಡು ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ. ಶೂಟರ್‌ಗಳು, ಕೋಚ್‌ಗಳು ಹಾಗೂ ಇತರ ಅಧಿಕಾರಿಗಳ ಸುರಕ್ಷತೆಯೂ ನಮ್ಮ ಆದ್ಯತೆಯಾಗಿದೆ’ ಎಂದಿದ್ದಾರೆ.

‘ನವದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಡಾ.ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಶಿಬಿರ ನಡೆಸುವುದು ತುಂಬಾ ಕಷ್ಟ’ ಎಂದು ಅನುಭವಿ ಶೂಟರ್‌ ಅಭಿಷೇಕ್‌ ವರ್ಮಾ ಸೋಮವಾರ ಹೇಳಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು