ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ಶುಭಾರಂಭ; ಸೈನಾ ಪರಾಭವ

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲೀಗೆ ಆಘಾತ ನೀಡಿದ ಸಮೀರ್‌
Last Updated 19 ಜನವರಿ 2021, 14:13 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಸದೆಬಡಿದ ಭಾರತದ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಅವರು ಟೊಯೊಟಾ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ಶುಭಾರಂಭ ಮಾಡಿದರು. ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಲೀ ಜೀ ಜಿಯಾ ಅವರಿಗೆ ಆಘಾತ ನೀಡಿದ ಸಮೀರ್ ವರ್ಮಾ ಕೂಡ ಎರಡನೇ ಸುತ್ತಿಗೆ ಲಗ್ಗೆಯಿಟ್ಟರು. ಸೈನಾ ನೆಹ್ವಾಲ್ ಸೋತು ಟೂರ್ನಿಯಿಂದ ಹೊರಬಿದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಸಿಂಧು, 21–17, 21–13ರಿಂದ ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ, ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್ಪನ್‌ ಎದುರು ಗೆದ್ದು ಬೀಗಿದರು. ಸಿಂಧು ಮುಂದಿನ ಪಂದ್ಯದಲ್ಲಿ ಕೊರಿಯಾದ ಸಂಗ್‌ ಜಿ ಹ್ಯುನ್ –ಸೋನಿಯಾ ಚಿಯಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್ 21–11, 21–11ರಿಂದ ಥಾಯ್ಲೆಂಡ್‌ನ ಸಿತ್ತಿಕೋಮ್‌ ಥಮ್ಮಾಸಿನ್ ಅವರ ಸವಾಲು ಮೀರಿದರು.

ಟೂರ್ನಿಯ ಮೊದಲ ದಿಟ್ಟ ಆಟ ಮೂಡಿಬಂದಿದ್ದು ಸಮೀರ್ ವರ್ಮಾ ಅವರಿಂದ. ವಿಶ್ವ ‍ರ‍್ಯಾಂಕಿಂಗ್‌ನಲ್ಲಿ 31ನೇ ಸ್ಥಾನದಲ್ಲಿರುವ ಅವರು 18–21, 27–25, 21–19ರಿಂದ ಎಂಟನೇ ಶ್ರೇಯಾಂಕದ ಆಟಗಾರ ಮಲೇಷ್ಯಾದ ಲೀ ಅವರ ಎದುರು ಜಯಿಸಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಅಭಿಯಾನ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಅವರು 17–21, 8–21ರಿಂದ ಸ್ಥಳೀಯ ಆಟಗಾರ್ತಿ ರಚನೊಕ್ ಇಂತನಾನ್‌ ಎದುರು ಎಡವಿದರು.

ಸಮೀರ್ ಅವರ ಸಹೋದರ ಸೌರಭ್ ಕೂಡ ಟೂರ್ನಿಯಿಂದ ಹೊರಬಿದ್ದರು. ಮೊದಲ ಪಂದ್ಯದಲ್ಲಿ ಅವರಿಗೆ 16–21, 11–21ರಿಂದ ಐದನೇ ಶ್ರೇಯಾಂಕದ ಆಟಗಾರ ಇಂಡೊನೇಷ್ಯಾದ ಅಂಥೋನಿ ಗಿಂಟಿಂಗ್ ಸಿನಿಸುಕ್‌ ಎದುರು ಸೋಲಾಯಿತು. ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಎದುರು ಕಣಕ್ಕಿಳಿದಿದ್ದ ಪರುಪಳ್ಳಿ ಕಶ್ಯಪ್‌ ಪಂದ್ಯದಿಂದ ನಿವೃತ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT