ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಕ್ರೀಡಾ ಪ್ರಶಸ್ತಿಗಳಿಗೆ ಇ–ಮೇಲ್‌ ಮೂಲಕ ನಾಮನಿರ್ದೇಶನ

ಲಾಕ್‌ಡೌನ್‌ ಕಾರಣ ಹೊಸ ಪದ್ಧತಿಯ ಮೊರೆ ಹೋದ ಕ್ರೀಡಾ ಸಚಿವಾಲಯ
Last Updated 5 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ ರತ್ನ ಸೇರಿದಂತೆ ಇತರ ಕ್ರೀಡಾ ಪ್ರಶಸ್ತಿಗಳಿಗೆ ಇ-ಮೇಲ್‌ ಮೂಲಕ ಅರ್ಹರನ್ನು ನಾಮನಿರ್ದೇಶನ ಮಾಡುವಂತೆ ಕೇಂದ್ರ ಕ್ರೀಡಾ ಸಚಿವಾಲಯವು ಮಂಗಳವಾರ ಎಲ್ಲಾ ಕ್ರೀಡಾ ಫೆಡರೇಷನ್‌ಗಳಿಗೆ ಸೂಚಿಸಿದೆ.

ಕೋವಿಡ್‌–19 ಪಿಡುಗಿನಿಂದಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಈ ವರ್ಷದ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯು ಏಪ್ರಿಲ್‌ನಲ್ಲೇ ಆರಂಭವಾಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ಈ ಪ್ರಕ್ರಿಯೆಯನ್ನು ಮೇ ತಿಂಗಳಿಗೆ ಮುಂದೂಡಲಾಗಿತ್ತು.

ಅರ್ಹ ಕ್ರೀಡಾಪಟುಗಳ ಪಟ್ಟಿಯನ್ನು ಸಲ್ಲಿಸಲು ಜೂನ್‌ 3 ಕೊನೆಯ ದಿನವಾಗಿದೆ.

‘ಲಾಕ್‌ಡೌನ್‌ ಜಾರಿಯಿರುವ ಕಾರಣ ಮೂಲ ಪ್ರತಿಗಳನ್ನು ಪೋಸ್ಟ್‌ ಮಾಡುವ ಅಗತ್ಯವಿಲ್ಲ. ಇದರ ಬದಲು ಸ್ಕ್ಯಾನಿಂಗ್‌‌ ಪ್ರತಿಗಳನ್ನು ಇ ಮೇಲ್‌ ಮೂಲಕ ಕಳುಹಿಸಬೇಕು. ಇದರಲ್ಲಿ ಸಂಬಂಧಪಟ್ಟ ಕ್ರೀಡಾಪಟು/ಕೋಚ್‌ ಹಾಗೂ ಫೆಡರೇಷನ್‌ನ ಅಧಿಕಾರಿಯ ಸಹಿ ಕಡ್ಡಾಯವಾಗಿ ಇರಲೇಬೇಕು. ಜೂನ್‌ 3ರ ನಂತರ ಬಂದ ಪ್ರತಿಗಳನ್ನು ಸ್ವೀಕರಿಸುವುದಿಲ್ಲ.ನಿಗದಿತ ದಿನಾಂಕದೊಳಗೆ ನಾಮನಿರ್ದೇಶನಗಳ ಪ್ರತಿ ತಲುಪದೇ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ’ ಎಂದು ಕ್ರೀಡಾ ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಜನವರಿ‌ 2016ರಿಂದ ಡಿಸೆಂಬರ್‌ 2019ರ ಅವಧಿಯಲ್ಲಿ ಅಥ್ಲೀಟ್‌ಗಳಿಂದ ಮೂಡಿಬಂದಿರುವ ಸಾಧನೆಯ ಆಧಾರದಲ್ಲಿ ಖೇಲ್‌ ರತ್ನ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಶ್ರೇಷ್ಠ ಕೋಚ್‌ಗಳಿಗೆ ‘ದ್ರೋಣಾಚಾರ್ಯ’ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ‘ಧ್ಯಾನ್‌ ಚಂದ್‌’ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗಳು ಕ್ರಮವಾಗಿ₹7.5 ಲಕ್ಷ ಹಾಗೂ ₹5 ಲಕ್ಷ ಬಹುಮಾನ, ಪ್ರಮಾಣ ಪತ್ರ ಹಾಗೂ ಪಾರಿತೋಷಕಗಳನ್ನು ಒಳಗೊಂಡಿರುತ್ತವೆ.

ಹೋದ ವರ್ಷ ಪ್ಯಾರಾಲಿಂಪಿಯನ್‌ ದೀಪಾ ಮಲಿಕ್‌ ಹಾಗೂ ಕುಸ್ತಿಪಟು ಬಜರಂಗ್‌ ಪುನಿಯಾ ಅವರಿಗೆ ‘ಖೇಲ್‌ ರತ್ನ’ ಗೌರವ ಸಂದಿತ್ತು.

‘ಉದ್ದೀಪನಾ ಮದ್ದು ಸೇವನೆ ಸಾಬೀತಾದ ಕಾರಣ ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ಅಥವಾ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದಿಂದ (ನಾಡಾ) ನಿಷೇಧ ಶಿಕ್ಷೆಗೆ ಗುರಿಯಾಗಿರುವವರು, ವಿಚಾರಣೆ ಎದುರಿಸುತ್ತಿರುವವರು ಹಾಗೂ ವಿಚಾರಣೆ ಬಾಕಿ ಇರುವವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ’ ಎಂದೂ ಕ್ರೀಡಾ ಸಚಿವಾಲಯವು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT