ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ | ಕೋಚ್‌ಗಳ ಗರಿಷ್ಠ ವೇತನ ಮಿತಿ ತೆಗೆದುಹಾಕಿದ ಸಚಿವಾಲಯ

ಕೋಚ್‌ಗಳ ಒಪ್ಪಂದ ಅವಧಿ ನಾಲ್ಕು ವರ್ಷ: ಕ್ರೀಡಾ ಸಚಿವ ಕಿರಣ್‌ ರಿಜಿಜು
Last Updated 4 ಜುಲೈ 2020, 10:20 IST
ಅಕ್ಷರ ಗಾತ್ರ

ನವದೆಹಲಿ: ಎಲೀಟ್‌ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿರುವ ಭಾರತದ ಕೋಚ್‌ಗಳಿಗೆ ಸದ್ಯ ಇರುವ ₹ 2 ಲಕ್ಷ ಗರಿಷ್ಠ ವೇತನ ಮಿತಿಯನ್ನು ತೆಗೆದುಹಾಕುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ಶನಿವಾರ ತಿಳಿಸಿದೆ. ಉತ್ತಮ ಫಲಿತಾಂಶವನ್ನು ಹೊರಹೊಮ್ಮಿಸಲು ಕೋಚ್‌ಗಳನ್ನು ಪ್ರೋತ್ಸಾಹಿಸುವಹಾಗೂ ಹಿರಿಯ ಅಥ್ಲೀಟ್‌ಗಳನ್ನು ತರಬೇತುದಾರರ ವೃತ್ತಿಗೆ ಆಕರ್ಷಿಸುವ ಉದ್ದೇಶದಿಂದ ಸಚಿವಾಲಯ ಈ ನಿರ್ಧಾರ ತಳೆದಿದೆ.

ಎಲ್ಲ ವಿದೇಶಿ ಕೋಚ್‌ಗಳ ಒಪ್ಪಂದದ ಅವಧಿಯನ್ನು ಮುಂದಿನ ವರ್ಷದ ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲು ಸಚಿವಾಲಯವು ಗುರುವಾರ ನಿರ್ಧರಿಸಿತ್ತು. ಒಲಿಂಪಿಕ್‌ ಕ್ರೀಡೆಗಳ ದೃಷ್ಟಿಯಿಂದ, ದೇಶದ ಹಾಗೂ ವಿದೇಶಿ ಕೋಚ್‌ಗಳನ್ನು ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳುವುದಾಗಿಯೂ ಹೇಳಿದೆ.

‘ಭಾರತದ ಹಲವು ಕೋಚ್‌ಗಳು ಉತ್ತಮ ಫಲಿತಾಂಶ ನೀಡುತ್ತಿದ್ದಾರೆ. ಅವರ ಪರಿಶ್ರಮವನ್ನು ಗೌರವಿಸುವ ಅಗತ್ಯವಿದೆ. ಎಲೀಟ್‌ ಅಥ್ಲೀಟ್‌ಗಳಿಗೆ ತರಬೇತಿ ನೀಡುವ ಪ್ರತಿಭಾನ್ವಿತ ಕೋಚ್‌ಗಳ ಹುಡುಕಾಟದಲ್ಲಿ ಸಚಿವಾಲಯ ನಿರತವಾಗಿದೆ. ಉತ್ತಮ ಕೋಚ್‌ಗಳ ನೇಮಕಕ್ಕೆ ವೇತನ ಮಿತಿ ಅಡ್ಡಿಯಾಗಬಾರದು’ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹೆಚ್ಚಿನ ಸಂಭಾವನೆ ಹಾಗೂ ದೀರ್ಘ ಕಾಲದ ಒಪ್ಪಂದದ ಅವಧಿಯೂ ಹಿರಿಯ ಅಥ್ಲೀಟ್‌ಗಳನ್ನು ಉನ್ನತ ಮಟ್ಟದ ಕೋಚಿಂಗ್‌ಗೆ ಆಕರ್ಷಿಸುತ್ತದೆ. ಅವರ ಅನುಭವ ಹಾಗೂ ಕೌಶಲವನ್ನು ಬಳಸಿಕೊಂಡು ಒಲಿಂಪಿಕ್ಸ್‌ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸಬಹುದು’ ಎಂದು ರಿಜಿಜು ವಿವರಿಸಿದರು.

ಪ್ರಮುಖ ಕೋಚ್‌ಗಳು ಈಗಾಗಲೇ ವಿವಿಧ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನೂ ನಿಯೋಜನೆ ಆಧಾರದಲ್ಲಿ ಸೇರಿಸಿಕೊಳ್ಳಲಾಗುವುದು. ಅವರೂ ನಾಲ್ಕು ವರ್ಷಗಳ ಒಪ್ಪಂದ ಹಾಗೂ ಹೆಚ್ಚಿನ ಸಂಬಳ ಪಡೆಯಲು ಅರ್ಹರಾಗಿರುತ್ತಾರೆ. ಹಿರಿಯ ಅಥ್ಲೀಟ್‌ಗಳು ಕೋಚ್‌ ಆಗಿ ಸಾಧಿಸುವ ಯಶಸ್ಸಿನ ಮೇಲೆ ಅವರ ಸಂಭಾವನೆಯನ್ನು ನಿರ್ಧರಿಸಲಾಗುತ್ತದೆ.

‘ಸದ್ಯದ ಒಪ್ಪಂದದ ಪ್ರಕಾರ ಹೊಸದಾಗಿ ನೇಮಕವಾಗುವ ಮತ್ತು ಸದ್ಯ ಇರುವ ತರಬೇತುದಾರರು, ರಾಷ್ಟ್ರೀಯ ಶಿಬಿರಗಳು ಮತ್ತು ಸಾಯ್‌ನ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳಲ್ಲಿ (ಎನ್‌ಸಿಒಇ) ತರಬೇತಿ ನೀಡಲಿದ್ದಾರೆ. ಕ್ರೀಡಾ ಸಚಿವಾಲಯ ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಜಂಟಿಯಾಗಿಅವರನ್ನು ಆಯ್ಕೆ ಮಾಡುತ್ತವೆ’ ಎಂದು ಪ್ರಕಟಣೆ ತಿಳಿಸಿದೆ.

ಕ್ರೀಡಾ ಸಚಿವಾಲಯದ ನಿರ್ಧಾರವನ್ನು ರಾಷ್ಟ್ರೀಯ ಬ್ಯಾಡ್ಮಿಂಟನ್‌ ಕೋಚ್‌ ಪುಲ್ಲೇಲ ಗೋಪಿಚಂದ್‌ ಸ್ವಾಗತಿಸಿದ್ದಾರೆ.

‘ಇದು ಕ್ರೀಡಾ ವಲಯದ ಬಹುದಿನಗಳ ಬೇಡಿಕೆಯಾಗಿತ್ತು. ಈ ನಿರ್ಧಾರದಿಂದ ತುಂಬಾ ಸಂತಸವಾಗಿದೆ. ಏಕೆಂದರೆ ಇದರಿಂದ ಪ್ರತಿಭಾವಂತ ಕೋಚ್‌ಗಳು ಹಾಗೂ ಪ್ರಮುಖ ಹಿರಿಯ ಅಥ್ಲೀಟ್‌ಗಳು ಕೋಚ್‌ ಆಗಿ ಕ್ರೀಡಾ ಪರಿಸರಕ್ಕೆ ಮರಳಲು ಅನುಕೂಲವಾಗುತ್ತದೆ’ ಎಂದು ಗೋಪಿಚಂದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT