ಗುರುವಾರ , ಮೇ 26, 2022
23 °C
ಧ್ರುವ್ ಕಪಿಲಾ–ಸಿಕ್ಕಿ ರೆಡ್ಡಿ ಜೋಡಿಗೆ ಗೆಲುವು; ಅಶ್ವಿನಿ ಪೊನ್ನಪ್ಪ–ಸುಮಿತ್‌ಗೆ ನಿರಾಸೆ

ಇಂಡೊನೇಷ್ಯಾ ಮಾಸ್ಟರ್ಸ್‌: ಶ್ರೀಕಾಂತ್, ಪ್ರಣಯ್ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಾಲಿ: ಭಾರತದ ಕಿದಂಬಿ ಶ್ರೀಕಾಂತ್ ಮತ್ತು ಎಚ್‌.ಎಸ್‌.ಪ್ರಣಯ್ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಧ್ರುವ್ ಕಪಿಲಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಜಯ ಗಳಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 71ನೇ ಸ್ಥಾನದಲ್ಲಿರುವ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಅವರ ಕಠಿಣ ಸವಾಲನ್ನು ಮೆಟ್ಟಿ ನಿಂತ ಶ್ರೀಕಾಂತ್ 21-18, 15-21, 21-16ರಲ್ಲಿ ಜಯ ಗಳಿಸಿದರು. ಒಂದು ತಾಸು ಮತ್ತು 15 ನಿಮಿಷಗಳ ಕಾಲ ಹಣಾಹಣಿ ನಡೆಯಿತು. 

2017ರಲ್ಲಿ ಇಂಡೊನೇಷ್ಯಾ ಓಪನ್‌ನ ಚಾಂಪಿಯನ್ ಆಗಿದ್ದ ಶ್ರೀಕಾಂತ್ ಮುಂದಿನ ಹಂತದಲ್ಲಿ ಸ್ಥಳೀಯ ಆಟಗಾರ ಆರನೇ ಶ್ರೇಯಾಂಕಿತ ಜೊನೊಥನ್ ಕ್ರಿಸ್ಟಿ ಅವರನ್ನು ಎದುರಿಸುವರು.

ಪ್ರಣಯ್, ಮಲೇಷ್ಯಾದ ಲ್ಯೂ ಡ್ಯಾರೆನ್ ಎದುರು 22-20, 21-19ರಲ್ಲಿ ಗೆದ್ದು ಎರಡನೇ ಸುತ್ತು‍ ಪ್ರವೇಶಿಸಿದರು. ಎರಡನೇ ಶ್ರೇಯಾಂಕಿತ ಆಟಗಾರ, ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಎರಡನೇ ಸುತ್ತಿನಲ್ಲಿ ಪ್ರಣಯ್‌ಗೆ ಎದುರಾಳಿ.  

ಧ್ರುವ ಕಪಿಲಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಅಮೋಘ ಆಟದ ಮೂಲಕ ಮಿಂಚಿದರು. ಮಿಶ್ರ ಡಬಲ್ಸ್‌ನಲ್ಲಿ ಅವರು ಎರಡನೇ ಶ್ರೇಯಾಂಕದ ಮತ್ತು ವಿಶ್ವದ ಐದನೇ ಕ್ರಮಾಂಕದ ಇಂಡೊನೇಷ್ಯಾ ಜೋಡಿ ಪ್ರವೀಣ್ ಜೋರ್ಡಾನ್‌ ಹಾಗೂ ಮೇಲಾತಿ ದೇವ ಒಕ್ತವ್ಯಂತಿ ಎದುರು 21-11, 22-20ರಲ್ಲಿ ಗೆದ್ದರು. 

ಬಿ.ಸಾಯಿ ಪ್ರಣೀತ್‌ ಮತ್ತು ಪರುಪ್ಪಳ್ಳಿ ಕಶ್ಯಪ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪ್ರಣೀತ್‌ 21-16, 14-21, 20-22ರಲ್ಲಿ ಇಂಡೊನೇಷ್ಯಾದ ಶೇಸರ್‌ ಹಿರೇನ್ ರುಸ್ತವಿಟೊ ಎದುರು ಸೋತರೆ ಕಶ್ಯಪ್ ಡೆನ್ಮಾರ್ಕ್‌ನ ಹನ್ಸ್‌ ಕ್ರಿಸ್ಟಿಯನ್ ಸೋಲ್ಬರ್ಗ್‌ಗೆ 10-21, 19-21ರಲ್ಲಿ ಮಣಿದರು. 

ವೆಂಕಟ್ ಗೌರವ್ ಪ್ರಸಾದ್ ಮತ್ತು ಜೂಹಿ ದೇವಾಂಗಣ್‌ 15-21, 12-21ರಲ್ಲಿ ಹಾಂಕಾಂಗ್‌ನ ಚಾಂಗ್ ತಕ್‌ ಚಿಂಗ್‌ ಮತ್ತು ನಂಗ್‌ ವಿಂಗ್ ಯಂಗ್ ಎದುರು ಸೋತರು. ಬಿ.ಸುಮಿತ್‌ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ 15-21, 16-21ರಲ್ಲಿ ಇಂಡೊನೇಷ್ಯಾದ ಹಫೀಜ್ ಫೈಜಲ್ ಮತ್ತು ಗ್ಲೋರಿಯಾ ಇಮಾನ್ಯುಯೆಲ್ ಎದುರು ಸೋತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು