ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಫೈನಲ್‌ನಲ್ಲಿ ಮುಗ್ಗರಿಸಿದ ಸೌರಭ್‌

ಚೀನಾ ತೈಪೆಯ ವಾಂಗ್ ಸೂ ವೀಗೆ ಪ್ರಶಸ್ತಿ
Last Updated 1 ಡಿಸೆಂಬರ್ 2019, 16:34 IST
ಅಕ್ಷರ ಗಾತ್ರ

ಲಖನೌ: ಭರವಸೆ ಮೂಡಿಸಿದ್ದ ಭಾರತದ ಸೌರಭ್ ವರ್ಮಾ ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಚೀನಾ ತೈಪೆಯ ವಾಂಗ್ ಸೂ ವೀ ಎದುರಿನ ಪಂದ್ಯದಲ್ಲಿ 15–21, 17–21ಲ್ಲಿ ಸೋತು ರನ್ನರ್ ಅಪ್ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡರು.

26 ವರ್ಷದ ಸೌರಭ್ ಹೈದರಾಬಾದ್‌ ಮತ್ತು ವಿಯೆಟ್ನಾಂನಲ್ಲಿ ನಡೆದಿದ್ದ ಬಿಡಬ್ಲ್ಯುಎಫ್‌ ಸೂಪರ್ 100 ಟೂರ್ನಿಗಳ ಪ್ರಶಸ್ತಿ ಗೆದ್ದುಕೊಂಡಿದ್ದರು. ಸೈಯದ್ ಮೋದಿ ಟೂರ್ನಿಯ ಆರಂಭದಿಂದಲೇ ಅಮೋಘ ಆಟವಾಡಿ ಭಾರತದ ಸವಾಲನ್ನು ಜೀವಂತವಾಗಿ ಉಳಿಸಿದ್ದರು. ಆದರೆ ಫೈನಲ್‌ನಲ್ಲಿ ಸೂ ವೀ ಅವರಿಗೆ ತಕ್ಕ ಉತ್ತರ ನೀಡಲು ಸೌರಭ್‌ಗೆ ಸಾಧ್ಯವಾಗಲಿಲ್ಲ. 48 ನಿಮಿಷಗಳಲ್ಲಿ ಪಂದ್ಯ ಮುಕ್ತಾಯ ಕಂಡಿತು.

ಈ ಹಿಂದೆ ಎರಡು ಬಾರಿ ಮುಖಾಮುಖಿಯಾಗಿದ್ದ ಈ ಇಬ್ಬರು ಆಟಗಾರರು ತಲಾ ಒಂದೊಂದು ಪಂದ್ಯ ಗೆದ್ದಿದ್ದರು. ಹೀಗಾಗಿ ಈ ಪಂದ್ಯ ಕುತೂಹಲ ಕೆರಳಿಸಿತ್ತು. ಆರಂಭದಲ್ಲಿ ದೀರ್ಘ ರ‍್ಯಾಲಿಗಳ ಮೂಲಕ ಉಭಯ ಆಟಗಾರರು ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು. ಇದರಲ್ಲಿ ಸೂ ವೀ ಮೇಲುಗೈ ಸಾಧಿಸಿ 3–1ರ ಮುನ್ನಡೆ ಸಾಧಿಸಿದರು. ನಂತರ ತಂತ್ರಗಳನ್ನು ಬದಲಿಸಿದ ಸೌರಭ್ ಎದುರಾಳಿ ಎಸಗಿದ ತಪ್ಪುಗಳ ಲಾಭ ಪಡೆದುಕೊಂಡು 7–4ರಲ್ಲಿ ಮುನ್ನಡೆದರು.

ಸೂ ವೀ ಕೂಡ ಪಟ್ಟುಬಿಡಲಿಲ್ಲ. ನೆಟ್ ಬಳಿ ಷಟಲ್ ಡ್ರಾಪ್‌ ಮಾಡುವ ತಂತ್ರಕ್ಕೆ ಮೊರೆ ಹೋಗಿ ಪಾಯಿಂಟ್‌ಗಳನ್ನು ಹೆಕ್ಕಿದರು. ಮೊದಲು 8–8ರಿಂದ ಸಮಬಲ ಸಾಧಿಸಿ ನಂತರ 10–8ರ ಮುನ್ನಡೆ ಗಳಿಸಿದರು. ವಿರಾಮದ ನಂತರ ಚುರುಕಿನ ಆಟವಾಡಿದ ಸೂ ವೀ 18–13ರಿಂದ ಪ್ರಾಬಲ್ಯ ಮೆರೆದು ನಂತರ ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲೇ ನಿರಾಸೆ: ಸೌರಭ್‌ ಎರಡನೇ ಗೇಮ್‌ನ ಆರಂಭದಲ್ಲೇ 0–5ರ ಹಿನ್ನಡೆಗೆ ಒಳಗಾದರು. ಬ್ಯಾಕ್‌ಹ್ಯಾಂಡ್ ಶಾಟ್ ಮೂಲಕ ಪ್ರೇಕ್ಷಕರನ್ನು ರಂಜಿಸಿ ಮೊದಲ ಪಾಯಿಂಟ್ ಗಳಿಸಿದ ಸೌರಭ್ ನಂತರ ಹಿನ್ನಡೆಯನ್ನು 5–7ಕ್ಕೆ ಇಳಿಸಿ ನಿರೀಕ್ಷೆ ಮೂಡಿಸಿದರು. ವಿರಾಮದ ನಂತರ ಮತ್ತಷ್ಟು ಪ್ರಭಾವಿ ಆಟದ ಮೂಲಕ 13–13ರ ಸಮಬಲ ಸಾಧಿಸಿದರು. ಪ್ರಬಲ ಸ್ಮ್ಯಾಷ್‌ಗಳ ಮೂಲಕ ಮಿಂಚಿದ ಸೂ ವೀ ಮುನ್ನಡೆ ಗಳಿಸಿ, ನಂತರ ಬಿಗಿ ಹಿಡಿತ ಸಾಧಿಸಿ ಗೇಮ್‌ ಮತ್ತು ಪಂದ್ಯವನ್ನು ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT