ಸೋಮವಾರ, ಜುಲೈ 4, 2022
24 °C
ಟಿಸಿಎಸ್‌ ಬೆಂಗಳೂರು ವಿಶ್ವ 10ಕೆ; ಕೆನ್ಯಾ ಅಥ್ಲೀಟ್‌ಗಳ ಪ್ರಾಬಲ್ಯ

ಟಿಸಿಎಸ್‌ ಬೆಂಗಳೂರು ವಿಶ್ವ 10ಕೆ; ನಿಕೊಲಸ್‌, ಐರಿನ್‌ಗೆ ಕೂಟ ದಾಖಲೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉದ್ಯಾನನಗರಿಯಲ್ಲಿ ಭಾನುವಾರ ಮುಂಜಾವು ಸುರಿದ ತುಂತುರು ಮಳೆಯು ಅಥ್ಲೀಟ್‌ಗಳ ಉತ್ಸಾಹಕ್ಕೆ ತಣ್ಣೀರೆರೆಚಲಿಲ್ಲ. ವಿಶ್ವದ ಹಲವೆಡೆಯಿಂದ ಬಂದು ಸೇರಿದ್ದ ಸಾವಿರಾರು ಸ್ಪರ್ಧಿಗಳು ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ವಿಶ್ವ ಟೆನ್ ಕೆ ಓಟದ ಸಂಭ್ರಮದ ಮಳೆಯಲ್ಲಿ ಮಿಂದರು.

ಕೆನ್ಯಾದ ನಿಕೋಲಸ್‌ ಕಿಪ್ಕೊರಿರ್‌ ಕಿಮೇಲಿ ಮತ್ತು ಐರಿನ್ ಚೆಪ್ಟಾಯ್‌ ಅವರು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಆಯೋಜಿಸಿದ್ದ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.

ವಿಶ್ವ ಅಥ್ಲೆಟಿಕ್ಸ್ ಎಲೀಟ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ 10 ಕಿ.ಮೀ ದೂರವನ್ನು ನಿಕೋಲಸ್ 27 ನಿಮಿಷ 38 ಸೆಕೆಂಡುಗಳಲ್ಲಿ ತಲುಪಿದರು. ಇದರೊಂದಿಗೆ 2014ರಲ್ಲಿ ತಮ್ಮದೇ ದೇಶದ ಜಾಫ್ರಿ ಕಮ್‌ವೊರೊರ್‌ (27.44) ಸ್ಥಾಪಿಸಿದ್ದ ದಾಖಲೆಯನ್ನು ಮೀರಿದರು.

ಮಹಿಳೆಯರ ವಿಭಾಗದಲ್ಲಿ ಐರಿನ್ 30 ನಿಮಿಷ 35 ಸೆಕೆಂಡುಗಳ ಸಾಧನೆಯ ಮೂಲಕ 2018ರಲ್ಲಿ ಕೆನ್ಯಾದವರೇ ಆದ ಆ್ಯಗ್ನೆಸ್‌ ಟೈರಪ್‌ (31.19) ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದರು.

ಟೋಕಿಯೊ ಒಲಿಂಪಿಕ್ಸ್‌ನ 5000 ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಕಿಪ್ಕೊರಿರ್‌, ಇಲ್ಲಿ, ಇಥಿಯೋಪಿಯಾದ ಟಡೆಸೆ ವೊರ್ಕು ಅವರನ್ನು ಹಿಂದಿಕ್ಕಿದರು. ಟೆಡೆಸೆ 20 ವರ್ಷದೊಳಗಿನವರ ವಿಶ್ವ 10 ಕಿ.ಮೀ. ಓಟದಲ್ಲಿ ಹಾಲಿ ಚಾಂಪಿಯನ್ ಆಗಿದ್ದಾರೆ. ಈ ಸ್ಪರ್ಧೆಯ ಆರಂಭದಿಂದ ಐದು ಕಿಲೋ ಮೀಟರ್‌ವರೆಗೆ ಮುನ್ನಡೆಯಲ್ಲಿದ್ದ ಕೆನ್ಯಾದ ರೆನಾಲ್ಡ್‌ ಕಿಪ್ಕೊರಿರ್‌ ಒಂಬತ್ತನೇ ಸ್ಥಾನ ಗಳಿಸಿದರು.

ಕೆನ್ಯಾದ ಕಿಬಿವೊಟ್‌ ಕ್ಯಾಂಡಿ ಮೂರನೇ ಸ್ಥಾನ ಗಳಿಸಿದರು. ಪದಕದ ನಿರೀಕ್ಷೆ ಹುಟ್ಟುಹಾಕಿದ್ದ ಇಥಿಯೋಪಿಯಾದ ಮುಖ್ತಾರ್ ಇದ್ರಿಸ್‌ ಮತ್ತು ಅಂಡಮಾಕ್ ಬೆಲಿಹು ಕ್ರಮವಾಗಿ ಏಳು ಮತ್ತು 12ನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಆರಂಭದಲ್ಲಿ ಐರಿನ್‌, ಕೆನ್ಯಾದವರೇ ಆದ ಹೆಲೆನ್ ಒಬಿರಿ ಮತ್ತು ಜಾಯ್ಸ್ ಟೆಲಿ ಮುನ್ನಡೆ ಸಾಧಿಸಿದ್ದರು. ಐದು ಕಿ.ಮೀ. ಬಳಿಕ ಟೆಲಿ ಭಾರೀ ಅಂತರದಿಂದ ಹಿಂದುಳಿದರೆ, ಐರಿನ್ ಮತ್ತು ಒಬಿರಿ ಮುನ್ನಡೆ‌ ಕಾಯ್ದುಕೊಂಡರು.

ಇಬ್ಬರ ಮಧ್ಯೆ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಅಂತಿಮವಾಗಿ ಐರಿನ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು.

ಎಲೀಟ್‌ ಭಾರತೀಯರ ವಿಭಾಗದಲ್ಲಿ ಅಭಿಷೇಕ್ ಪಾಲ್ ಮತ್ತು ಪಾರುಲ್ ಚೌಧರಿ ಕ್ರಮವಾಗಿ  ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕ್ರಮವಾಗಿ ಅಗ್ರಸ್ಥಾನ ಗಳಿಸಿದರು.

ಗೆಲುವಿನ ಹಾದಿಯಲ್ಲಿ ಅಭಿಷೇಕ್ (30:05) ಅವರು ಕಾರ್ತಿಕ್ ಕುಮಾರ್ ಮತ್ತು ಗುಲ್‌ವೀರ್ ಸಿಂಗ್ ಅವರನ್ನು ಹಿಂದಿಕ್ಕಿದರು. ಪಾರುಲ್ (34.38) ಸಂಜೀವನಿ ಜಾಧವ್ ಮತ್ತು ಕೋಮಲ್ ಜಗದಾಳೆ ಅವರ ಸವಾಲು ಮೀರಿದರು. 

 ಫಲಿತಾಂಶಗಳು

ಎಲೀಟ್‌ ಪುರುಷರು: ನಿಕೋಲಸ್‌ ಕಿಪ್ಕೊರಿರ್‌ ಕಿಮೇಲಿ (ಕೆನ್ಯಾ)–1, ಕಾಲ: 27 ನಿಮಿಷ 38 ಸೆಕೆಂಡುಗಳು (ಕೂಟ ದಾಖಲೆ)  ಟಡೆಸೆ ವೊರ್ಕು (ಇಥಿಯೋಪಿಯಾ)–2, ಕಿಬಿವೊಟ್‌ ಕ್ಯಾಂಡಿ (ಕೆನ್ಯಾ)–3. (ಈ ಹಿಂದಿನ ದಾಖಲೆಯನ್ನು ಕೆನ್ಯಾದ ಜಾಫ್ರಿ ಕಮ್‌ವೊರೊರ್‌ 2014ರಲ್ಲಿ (27 ನಿ. 44 ಸೆಕೆಂಡು) ಸ್ಥಾಪಿಸಿದ್ದರು)

 ಎಲೀಟ್‌ ಮಹಿಳೆಯರು: ಐರಿನ್‌ ಚೆಪ್ಟಾಯ್‌ (ಕೆನ್ಯಾ)–1, ಕಾಲ: 30 ನಿಮಿಷ 35 ಸೆಕೆಂಡುಗಳು (ಕೂಟ ದಾಖಲೆ), ಹೆಲೆನ್ ಒಬಿರಿ (ಕೆನ್ಯಾ)–2, ಜಾಯ್ಸ್ ಟೆಲೆ (ಕೆನ್ಯಾ)–3. ( ಈ ಹಿಂದಿನ ದಾಖಲೆಯನ್ನು (31.19) 2018ರಲ್ಲಿ ಎಗ್ನೆಸ್‌ ಟೈರ‍ಪ್ ನಿರ್ಮಿಸಿದ್ದರು)

ಭಾರತೀಯರ ವಿಭಾಗ: ಪುರುಷರು: ಅಭಿಷೇಕ್ ಪಾಲ್‌–1, ಕಾಲ: 30 ನಿಮಿಷ 5 ಸೆಕೆಂಡುಗಳು, ಕಾರ್ತಿಕ್ ಕುಮಾರ್–2, ಗುಲ್‌ವೀರ್ ಸಿಂಗ್‌–3

ಮಹಿಳೆಯರು: ಪಾರುಲ್ ಚೌಧರಿ–1, ಕಾಲ: 34 ನಿಮಿಷ 38 ಸೆಕೆಂಡುಗಳು, ಸಂಜೀವನಿ ಜಾಧವ್‌–2, ಕೋಮಲ್ ಜಗದಾಳೆ–3

ಸಾಕ್ಷಿಯಾದ ಸಾವಿರಾರು ಜನರು: ಓಪನ್ 10ಕೆ, ಮಜಾ ರನ್‌ , ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಇದ್ದ ಸ್ಪರ್ಧೆಗಳಲ್ಲಿ 15000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ರೀತಿಯ ಜಾಗೃತಿ, ಅರಿವು ಮೂಡಿಸುವ ಫಲಕಗಳನ್ನು ಹಿಡಿದ ಜನರು ಸ್ಪರ್ಧೆಯ ಮಾರ್ಗದುದ್ದಕ್ಕೂ ಗಮನಸೆಳೆದರು. ವಿವಿಧ ರೀತಿಯ ಸಂಗೀತ, ನೃತ್ಯ ಮೇಳಗಳೂ ಮೇಳೈಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು