ಶುಕ್ರವಾರ, ಏಪ್ರಿಲ್ 23, 2021
22 °C
ಕೆ.ಎಸ್‌.ಆರ್‌.ಎ. ರಾಜ್ಯ ಶೂಟಿಂಗ್ ಚಾಂಪಿಯನ್‌ಷಿಪ್‌

ರಾಜ್ಯ ಶೂಟಿಂಗ್ ಚಾಂಪಿಯನ್‌ಷಿಪ್‌: ತೇಜಸ್‌ ಕೃಷ್ಣಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತೇಜಸ್ ಕೃಷ್ಣ ಹಾಗೂ ಹೆಟ್ ದೇಸಾಯಿ ಅವರು ಇತ್ತೀಚೆಗೆ ಕೊನೆಗೊಂಡ ರಾಜ್ಯ ಶೂಟಿಂಗ್ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯು (ಕೆ.ಎಸ್‌.ಆರ್‌.ಎ) ಎಲೀಟ್ ಶೂಟಿಂಗ್‌ ಕ್ಲಬ್‌ ಹಾಗೂ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್ ಎಕ್ಸ್‌ಲೆನ್ಸ್‌ನ ಸಹಯೋಗದೊಂದಿಗೆ ಟೂರ್ನಿಯನ್ನು ಆಯೋಜಿಸಿತ್ತು.

ಫೆಬ್ರುವರಿ 23ರಿಂದ ಆರು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ರಾಜ್ಯದಾದ್ಯಂತ 400ಕ್ಕೂ ಹೆಚ್ಚು ಶೂಟಿಂಗ್ ಪಟುಗಳು ಪಾಲ್ಗೊಂಡಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿ ಈ ಟೂರ್ನಿ ನಡೆಯಿತು.

21 ವರ್ಷಕ್ಕಿಂತ ಮೇಲಿನ ಪುರುಷರ ವಿಭಾಗದ ರೈಫಲ್ಸ್ ಸ್ಪರ್ಧೆಯಲ್ಲಿ, ಅಂತರರಾಷ್ಟ್ರೀಯ ಮಟ್ಟದ ಶೂಟರ್‌ ತೇಜಸ್‌ ಕೃಷ್ಣ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡರು. ಅವರ ಕೋಚ್‌ ಹಾಗೂ ಅಂತರರಾಷ್ಟ್ರೀಯ ಶೂಟರ್‌ ರಾಕೇಶ್ ಮನ್‌ಪತ್‌ ಬೆಳ್ಳಿ ಪದಕ ಗೆದ್ದರು. ಜೂನಿಯರ್ ಪುರುಷರ (21 ವರ್ಷದೊಳಗಿನವರು) ವಿಭಾಗದಲ್ಲಿ ಟಿ.ಆರ್.ಶ್ರೀಜಯ್‌ ಹಾಗೂ ಗೌತಮ್ ಮಚೇರಿ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪ‍ದಕಗಳಿಗೆ ಮುತ್ತಿಟ್ಟರು. ಯೂತ್ ವಿಭಾಗ (18 ವರ್ಷದೊಳಗಿನವರು) ವಿಭಾಗದಲ್ಲೂ ಇದೇ ಜೋಡಿಗೆ ಮೊದಲ ಮತ್ತು ಎರಡನೇ ಸ್ಥಾನ ಒಲಿಯಿತು.

ಮಹಿಳಾ ವಿಭಾಗದ ರೈಫಲ್ಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಶೂಟರ್ ಹೆಟ್‌ ದೇಸಾಯಿ ಚಿನ್ನದ ಪದಕದ ಒಡತಿಯಾದರೆ, ಮೇಘನಾ ಸಜ್ಜನರ್‌ ಬೆಳ್ಳಿ ಗೆದ್ದರು. ಜೂನಿಯರ್ ಹಾಗೂ ಯೂತ್ ಎರಡೂ ವಿಭಾಗಗಳಲ್ಲಿ ಉತ್ಸವಿ ವಸ್ವಾನಿ ಹಾಗೂ ನತಾಶಾ ಜಾವೇರಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದ ಪಿಸ್ತೂಲ್ ಸ್ಪರ್ಧೆಗಳಲ್ಲಿ, ವಿನುತಾ ಶಿವಪ್ರಸಾದ್‌ ಚಿನ್ನ ಗೆದ್ದರೆ, ಸ್ಪರ್ಶಾ ಅರುಣ್ ಅವರು ಯೂತ್ ಹಾಗೂ ಜೂನಿಯರ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. ರೋಹಿತಾ ಗೋಟೆಟಿ ಅವರು ಮೂರೂ ವಿಭಾಗಗಗಳಲ್ಲಿ ಬೆಳ್ಳಿ ಪದಕ ಗೆದ್ದರು.

ಪುರುಷರ ವಿಭಾಗದ ಪಿಸ್ತೂಲ್ ಸ್ಪರ್ಧೆಗಳಲ್ಲಿ, ಗುರುಸಿಮ್ರನ್‌ ಸಿಂಗ್‌ (ಸೀನಿಯರ್ ಹಾಗೂ ಜೂನಿಯರ್) ಚಿನ್ನ ಗೆದ್ದರೆ, ಸಾತ್ವಿಕ್‌ ಗುಪ್ತಾ (ಯೂತ್ ವಿಭಾಗ) ಅಗ್ರಸ್ಥಾನ ಗಳಿಸಿದರು. ತಂಡ ವಿಭಾಗದಲ್ಲಿ ಹೌಕೇ ಅಕಾಡೆಮಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು