ಬೆಳಗಾವಿ: ಹ್ಯಾಂಡ್‌ಬಾಲ್‌ನಲ್ಲಿ ಸೋದರಿಯರ ಸಾಧನೆ

ಮಂಗಳವಾರ, ಜೂಲೈ 23, 2019
20 °C
ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಥಣಿ ಆಟಗಾರ್ತಿಯರು

ಬೆಳಗಾವಿ: ಹ್ಯಾಂಡ್‌ಬಾಲ್‌ನಲ್ಲಿ ಸೋದರಿಯರ ಸಾಧನೆ

Published:
Updated:
Prajavani

ಅಥಣಿ: ಇಲ್ಲಿನ ಸೋದರಿಯರು ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಸತತ ಪ್ರಯತ್ನ, ಕಠಿಣ ಶ್ರಮ ವಹಿಸಿ ಆಡಿದರೆ ಗೆಲುವು ನಿಶ್ಚಿತ ಎನ್ನುವುದು ನಿರೂಪಿಸುತ್ತಾ ಸಾಗಿದ್ದಾರೆ.

ಕೆ.ಎ. ಲೋಕಾಪುರ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾದ ಕಾಗಲೆ ಪರಿವಾರದ ಪವಿತ್ರಾ ಹಾಗೂ ಐಶ್ವರ್ಯಾ ಕಾಗಲೆ ಭಾಗವಹಿಸಿದ ಸ್ಪರ್ಧೆಗಳಲ್ಲೆಲ್ಲಾ ಉತ್ತಮ ಸಾಧನೆ ತೋರುವ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. ಇದರಿಂದ ಇಲ್ಲಿನ ಜನರು, ಕಾಲೇಜಿನ ಬೋಧಕ–ಬೋಧಕೇತರ ವರ್ಗದವರ ಮೆಚ್ಚುಗೆಗೂ ಒಳಗಾಗುತ್ತಿದ್ದಾರೆ. ಅವರಿಗೆ ಪ್ರಕಾಶ ನರಗಟ್ಟಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಐಶ್ವರ್ಯಾ ‘ಭಾರತೀಯ ಹ್ಯಾಂಡ್‌ಬಾಲ್ ತಂಡದ ಅಪ್‌ಕಮಿಂಗ್ ಪ್ಲೇಯರ್‌’ ಎಂಬ ಭರವಸೆ ಮೂಡಿಸಿದ್ದಾರೆ. ಇವರು ನವದೆಹಲಿಯಲ್ಲಿ ನಡೆದ 60ನೇ ಹಾಗೂ 62ನೇ ರಾಷ್ಟ್ರಮಟ್ಟದ ಹ್ಯಾಂಡಬಾಲ್ ಸ್ಕೂಲ್ ಗೇಮ್, ತೆಲಂಗಣಾದ ವಾರಂಗಲ್‌ನಲ್ಲಿ ನಡೆದ 61ನೇ ರಾಷ್ಟ್ರಮಟ್ಟದ ಮತ್ತು  ಹಾವೇರಿಯಲ್ಲಿ ನಡೆದ 40ನೇ ಕಿರಿಯರ ಹ್ಯಾಂಡ್‌ಬಾಲ್ ಸ್ಕೂಲ್ ಗೇಮ್, ಉಡುಪಿಯಲ್ಲಿ ನಡೆದ ಪಿಯು ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಲಾ 4 ಬಾರಿ ಕಿರಿಯರ ತಂಡ ಹಾಗೂ ರಾಷ್ಟ್ರೀಯ ತಂಡದಲ್ಲಿ ಕರ್ನಾಟಕ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು (ಆರ್‌ಸಿಯು) ಪ್ರತಿನಿಧಿಸಿದ್ದಾರೆ. 7 ಬಾರಿ ಕರ್ನಾಟಕದ ಪರವಾಗಿ ಆಡಿದ್ದಾರೆ.

ಇವರ ಅಕ್ಕ ಪವಿತ್ರಾ ಕಾಗಲೆ 2 ಬಾರಿ ಆರ್‌ಸಿಯು ಪ್ರತಿನಿಧಿಸಿದ್ದಾರೆ. ಆರ್‌ಸಿಯು ನಡೆಸಿದ ಸ್ಪರ್ಧೆಯಲ್ಲಿ ಮೂರು ಬಾರಿ ಹ್ಯಾಂಡ್‌ಬಾಲ್‌ ಹಾಗೂ ಬಾಲ್ ಬ್ಯಾಂಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಸರಾ ಕ್ರೀಡಾಕೂಟದಲ್ಲಿ ಸತತ 2 ಬಾರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕರ್ನಾಟಕ ಹ್ಯಾಂಡ್‌ಬಾಲ್‌ ತಂಡದಲ್ಲಿ 3 ಬಾರಿ ಆಡಿದ್ದಾರೆ.

ಚಮಕೇರಿ ಕುಟುಂಬದ ಮೇಘಾ ಮೈಸೂರಿನಲ್ಲಿ ನಡೆದ 30ನೇ ಸಬ್ ಜೂನಿಯರ್‌ ರಾಷ್ಟ್ರೀಯ, ಪಂಜಾಬ್‌ನಲ್ಲಿ ಆಯೋಜಿಸಿದ್ದ 38ನೇ ರಾಷ್ಟ್ರೀಯ ಜೂನಿಯರ್, ತಮಿಳುನಾಡಿನಲ್ಲಿ ನಡೆದ 46ನೇ ರಾಷ್ಟ್ರೀಯ, ಬಿಹಾರದಲ್ಲಿ ನಡೆದ ರಾಜೀವ್‌ಗಾಂಧಿ ಖೇಲ್ ಅಭಿಯಾನ, ರಾಣೆಬೆನ್ನೂರಿನಲ್ಲಿ ನಡೆದ 40ನೇ ಕಿರಿಯರ ರಾಷ್ಟ್ರಮಟ್ಟದ ಸ್ಪರ್ಧೆ ಮೊದಲಾದ ಕಡೆಗಳಲ್ಲಿ ಆಡಿದ್ದಾರೆ. ರಾಜ್ಯತಂಡ ಪ್ರತಿನಿಧಿಸಿದ್ದಾರೆ. ಆರ್‌ಸಿಯು ಹ್ಯಾಂಡ್‌ಬಾಲ್‌ ಹಾಗೂ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. 7 ಬಾರಿ ಕರ್ಣಾಟಕ ತಂಡ ಪ್ರತಿನಿಧಿಸಿದ್ದಾರೆ. ಒಮ್ಮೆ ನಾಯಕಿಯೂ ಆಗಿದ್ದರು. ಅವರ ತಂಗಿ ವಿದ್ಯಾ ಚಮಕೇರಿ ಹಿಮಾಚಲ ಪ್ರದೇಶ, ಉಡುಪಿ, ಮಂಡ್ಯದಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆರ್‌ಸಿಯು ಹ್ಯಾಂಡ್‌ಬಾಲ್ ತಂಡದ ಬ್ಲೂ ಆಗಿ ಹೊರಹೊಮ್ಮಿದ್ದಾರೆ. 2 ಬಾರಿ ಕರ್ನಾಟಕ ತಂಡ ಪ್ರತಿನಿಧಿಸಿದ್ದಾರೆ.

ಅದೇ ರೀತಿ, ಜಂಬಗಿ ಕುಟುಂಬದ ಸುಹಾನಾ ಹಾಗೂ ಸಾನಿಯಾ ಕೂಡ ವಿವಿಧ ಪಂದ್ಯಗಳಲ್ಲಿ ಆಡಿ ಸಾಧನೆ ತೋರುತ್ತಾ ಗಮನಸೆಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !