ಶನಿವಾರ, ಸೆಪ್ಟೆಂಬರ್ 25, 2021
22 °C

ಉದ್ದೀಪನ ಮದ್ದು ಭಾರತಕ್ಕೆ ಎಚ್ಚರಿಕೆ ಗಂಟೆ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಈ ವರ್ಷ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಆಟಗಾರ್ತಿ ಪಿ.ವಿ. ಸಿಂಧು, ಇತ್ತೀಚೆಗಷ್ಟೇ ವಿಶ್ವಕಪ್ ಶೂಟಿಂಗ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆದು ಒಲಿಂಪಿಕ್ ಅರ್ಹತೆ ಗಿಟ್ಟಿಸಿರುವ ಮೂವರು ಶೂಟಿಂಗ್ ಪಟುಗಳು, ಕುಸ್ತಿಪಟುಗಳು, ಬಾಕ್ಸರ್‌ಗಳು ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ಬರುವ ಕನಸು ಕಾಣುತ್ತಿದ್ದಾರೆ. ಭಾರತದ ಕೋಟಿ ಕೋಟಿ ಕ್ರೀಡಾಪ್ರೇಮಿಗಳ ಕಂಗಳಲ್ಲಿಯೂ ಅದೇ ನಿರೀಕ್ಷೆ ಮನೆ ಮಾಡಿದೆ.

ಆದರೆ..

ಈ ಬಾರಿ ಭಾರತದ ಅಥ್ಲೀಟ್‌ಗಳು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ ಮತ್ತು ತ್ರಿವರ್ಣ ಧ್ವಜದ ಬದಲು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಯ ಧ್ವಜದಡಿ ಸ್ಪರ್ಧಿಸುವಂತಾದರೆ ಎಂದು ಒಂದರೆಕ್ಷಣ ಯೋಚಿಸಿದರೂ ಮೈನಡುಕ ಬರುವದು ಸಹಜ. ಹೌದು ತತ್‌ಕ್ಷಣವೇ ಭಾರತ ಎಚ್ಚೆತ್ತುಕೊಳ್ಳದಿದ್ದರೆ ಇಂತಹ ಗತಿ ಬಂದರೂ ಅಚ್ಚರಿಯೇನಿಲ್ಲ.

ರಷ್ಯಾಗೆ ಆದ ಗತಿ ನಮಗೂ ಆಗಬಹುದು. ಹೋದ ಆಗಸ್ಟ್‌ನಲ್ಲಿ ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ಪ್ರಯೋಗಾಲಯ (ಎನ್‌ಡಿಟಿಎಲ್)ವನ್ನು ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಘಟಕ) ನಿಷೇಧಿಸಿತ್ತು. ಕ್ರೀಡಾಪಟುಗಳಿಂದ ಪಡೆದ ಮಾದರಿಗಳ ಪರೀಕ್ಷೆಯಲ್ಲಿ ಲೋಪ, ಅವ್ಯವಹಾರ ಮತ್ತು ಅನೈತಿಕ ಪದ್ಧತಿಗಳನ್ನು ಅನುಸರಿಸಿದ ಆರೋಪ ಎನ್‌ಡಿಟಿಎಲ್‌ ಮೇಲೆ ಇದೆ.

ಇದೀಗ ರಷ್ಯಾದ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯಕ್ಕೆ ಬೀಗ ಹಾಕಿರುವುದು ಕೂಡ ಇಂತಹದ್ದೇ ಕಾರಣಗಳಿಗಾಗಿ. ಆ ಪ್ರಯೋಗಾಲಯವು ಉದ್ದೀಪನ ಮದ್ದು ಸೇವನೆ ಮಾಡಿದ ಅಥ್ಲೀಟ್‌ಗಳ ವಿವರಗಳನ್ನು ವಾಡಾಗೆ ಸಲ್ಲಿಸಿರಲಿಲ್ಲ. ಇದರಿಂದಾಗಿ ತಪ್ಪಿತಸ್ಥ ಅಥ್ಲೀಟ್‌ಗಳಿಗೆ ಶಿಕ್ಷೆಯಾಗುವುದು ತಪ್ಪಿತ್ತು. ಇದಕ್ಕೆ ಸಂಬಂಧಿತ ಸಾಕ್ಷ್ಯಾಧಾರಗಳನ್ನೂ ರಷ್ಯಾದ ಪ್ರಯೋಗಾಲಯ ನಾಶ ಮಾಡಿದೆ ಎಂಬ ಆರೋಪವೂ ಇದೆ. ಆದ್ದರಿಂದ ನಾಲ್ಕು ವರ್ಷಗಳ ಅವಧಿಗೆ ಈ ಪ್ರಯೋಗಾಲಯವನ್ನು ವಾಡಾ ನಿಷೇಧಿಸಿದೆ. ಇದರಿಂದಾಗಿ  ಆ ದೇಶದ ಅಥ್ಲೀಟ್‌ಗಳು ರಷ್ಯಾದ ಧ್ವಜದಡಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ, ನಿಷ್ಕಳಂಕ ಅಥ್ಲೀಟ್‌ಗಳಿಗೆ ಅನ್ಯಾಯವಾಗದಿರಲಿ ಎಂಬ ಕಾರಣಕ್ಕೆ ಐಒಸಿ ಧ್ವಜದಡಿ ಸ್ಪರ್ಧಿಸಲು ಅಲ್ಲಿಯ ಕೆಲವು ತಂಡಗಳಿಗೆ ಅವಕಾಶ ನೀಡಲಾಗುತ್ತಿದೆ. ಈ ಅಥ್ಲೀಟ್‌ಗಳು  ಒಂದೊಮ್ಮೆ ಪದಕ ಗೆದ್ದರೂ ತಮ್ಮ ನೆಲಕ್ಕಂಟಿದ ಕಳಂಕವನ್ನೇ ಮೆಲುಕು ಹಾಕುವ ಸ್ಥಿತಿ ಬರುತ್ತದೆ. ಎಂತಹ ವಿಪರ್ಯಾಸವಲ್ಲವೇ? 

ಈ ಪ್ರಕರಣದಿಂದ ಭಾರತ ಪಾಠ ಕಲಿಯುವ ಅಗತ್ಯ ಈಗ ಇದೆ. ಇತ್ತೀಚೆಗಷ್ಟೇ ಭಾರತದ ಬಾಕ್ಸರ್‌ಗಳಾದ ಸುಮಿತ್ ಸಂಗ್ವಾನ್ ಮತ್ತು ನೀರಜಾ ಪೋಗಟ್ ಕೂಡ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ.

‘ಅತ್ಯಂತ ನಿಷ್ಠಾವಂತ ಬಾಕ್ಸರ್‌ಗಳು ಇವರು. ಇವರ ವೃತ್ತಿಪರತೆ ಶಿಸ್ತು ಉತ್ತಮವಾಗಿದೆ. ಆದರೆ, ಇಂತಹದೊಂದು ಪ್ರಮಾದ ಆಗಿರುವುದು ಬೇಸರ ಮೂಡಿಸಿದೆ. ಎಲೀಟ್ ಬಾಕ್ಸಿಂಗ್ ಪಟುಗಳು ಸಿಕ್ಕಿಬಿದ್ದಿರುವುದು ಆಘಾತಕಾರಿ’ ಎಂದು ಭಾರತ ಬಾಕ್ಸಿಂಗ್ ತಂಡದ ಕೋಚ್ ಸಿ.ಎ. ಕುಟ್ಟಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಹೋದ ನಾಲ್ಕು ಒಲಿಂಪಿಕ್ಸ್‌ಗಳ ಸಾಧನೆಯ ಪುಟಗಳನ್ನು ತಿರುವಿ ಹಾಕಿದರೆ; ಶೂಟಿಂಗ್, ಕುಸ್ತಿ, ಬಾಕ್ಸಿಂಗ್‌ ಪಟುಗಳೇ ದೇಶಕ್ಕೆ ಪದಕದ ಕಾಣಿಕೆ ನೀಡಿದ್ದಾರೆ. 2012 ಮತ್ತು 2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಮಾಡಿದ ಪದಕ ಸಾಧನೆ ಅವಿಸ್ಮರಣೀಯ. ಜಪಾನಿನಲ್ಲಿ ಇನ್ನೂ ಹೆಚ್ಚು ಪದಕಗಳನ್ನು ಗೆಲ್ಲುವ ದೃಷ್ಟಿಯಿಂದ ಕೇಂದ್ರ ಕ್ರೀಡಾ ಇಲಾಖೆಯು ಕೆಲವು ಯೋಜನೆಗಳನ್ನೂ ಜಾರಿಗೆ ತಂದು ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಒಲಿಂಪಿಕ್‌ ಕೂಟಕ್ಕೆ ಇನ್ನು ಏಳು ತಿಂಗಳು ಬಾಕಿ ಇರುವಾಗ ಇಂತಹ ಆಘಾತಕಾರಿ ಬೆಳವಣಿಗೆ ಆಗಿರುವುದು ಚಿಂತೆಯ ವಿಷಯ. 

ವೇಟ್‌ಲಿಫ್ಟಿಂಗ್‌ನಲ್ಲಿ ಈಗಾಗಲೇ 18 ಲಿಫ್ಟರ್‌ಗಳು ನಿಷೇಧಿತ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿರುವುದು ಸಾಬೀತಾಗಿದೆ. ತೀರಾ ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದಿದ್ದ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿಯೇ ಐವರು ಸಿಕ್ಕಿಬಿದ್ದಿದ್ದಾರೆ. ರವಿಕುಮಾರ್, ಪೂರ್ಣಿಮಾ ಪಾಂಡೆ, ಧರ್ಮರಾಜ್ ಯಾದವ್, ಸಂಜೀತ್ ಮತ್ತು ಗುರ್ಮೇಲ್ ಸಿಂಗ್ ಅವರ ಮೇಲೆ ನಾಡಾ ನಾಲ್ಕು ವರ್ಷಗಳ ನಿಷೇಧ ಹೇರಿದೆ.

ಇನ್ನಿಬ್ಬರು ಸಿಕ್ಕಿಬಿದ್ದರೆ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್‌ ಅನ್ನು ಅಂತರರಾಷ್ಟ್ರೀಯ ಫೆಡರೇಷನ್ ನಿಷೇಧ ಮಾಡುತ್ತದೆ. 20 ಮಂದಿ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದರೆ ಇಂತಹ ಕ್ರಮಕೈಗೊಳ್ಳುವ ನಿಯಮ ಇದೆ.

ಆದರೆ ದೇಶದೊಳಗೇ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಡಿವಾಣ ಹಾಕಬೇಕಾದ ನಾಡಾದ ಕಾರ್ಯವೈಖರಿ ತೃಪ್ತಿಕರವಾಗಿಲ್ಲ. ಒಂದು ರಾಷ್ಟ್ರೀಯ ಕೂಟವನ್ನೇ ಕಳಂಕಮುಕ್ತವಾಗಿ ನಡೆಸುವ ಸಾಮರ್ಥ್ಯ ನಮಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈಚೆಗೆ ಲಖನೌನಲ್ಲಿ ಅಂತರರಾಜ್ಯ ಅಥ್ಲೆಟಿಕ್ಸ್ ನಡೆದಾಗಲೂ ಮೊದಲ ದಿನವೇ ‘ನಾಡಾ’ ಗೈರುಹಾಜರಾಗಿದ್ದು ವರದಿಯಾಗಿತ್ತು.

ಕ್ರಿಕೆಟ್‌ ಕ್ರೀಡೆಯನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ದೊಡ್ಡ ಸಾಹಸ ಮಾಡಿ ಕಡೆಗೂ ನಾಡಾ ಗೆದ್ದಿದೆ. ಆದರೆ, ಅದರ ತರುವಾಯ ಅಮಾನತಿಗೆ ಒಳಗಾಗಿ ಹಲ್ಲು ಕಿತ್ತ ಹಾವಿನಂತಾಗಿದೆ. ಇದರಿಂದಾಗಿ ‘ಸ್ವಚ್ಛ ಕ್ರೀಡೆ’ ಆಶಯಕ್ಕೆ ಹಿನ್ನಡೆ ಉಂಟಾಗಿದೆ.

‘ನಾಡಾದಲ್ಲಿ ಸ್ಯಾಂಪಲ್ ಸಂಗ್ರಹಿಸುವ, ಸಂರಕ್ಷಿಸುವ ಕೆಲಸಗಳು ಆಗುತ್ತವೆ ನಿಜ. ಆದರೆ, ಈ ಎಲ್ಲ ಕೆಲಸಗಳನ್ನು ಮಾಡಲು ಅವರಲ್ಲಿ ಪರಿಣತ ವೈದ್ಯರುಗಳಿಲ್ಲ. ಅರ್ಹತೆ ಇರುವ ಸಿಬ್ಬಂದಿ ಇಲ್ಲ. ಬರೀ ತಂತ್ರಜ್ಞಾನವೊಂದಿದ್ದರೆ ಸಾಕೆ? ಅದನ್ನು ಬಳಸುವ ನುರಿತ ಮತ್ತು ಜವಾಬ್ದಾರಿಯುತ ಸಿಬ್ಬಂದಿ ಬೇಕು’ ಎಂದು ಬಿಸಿಸಿಐ ಮೊದಲಿನಿಂದಲೂ ಆರೋಪಿಸುತ್ತಲೇ ಇದೆ. ಕ್ರಿಕೆಟ್‌ ಮಂಡಳಿಯ ಕೆಲವು ಬೇಡಿಕೆಗಳಿಗೆ ‘ನಾಡಾ’ ಒಪ್ಪಿದ ನಂತರವೇ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿಸಿತ್ತು.

ತನ್ನೊಳಗಿನ ಲೋಪಗಳನ್ನು ಸರಿಪಡಿಸಿಕೊಳ್ಳುವ ಅನಿವಾರ್ಯತೆ ನಾಡಾಕ್ಕೆ ಇದೆ. 2016ರ ರಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣವನ್ನು ನಿರ್ವಹಿಸಿದ ರೀತಿಯಿಂದ ನಾಡಾ ತೀವ್ರ ಟೀಕೆಗೆ ಒಳಗಾಗಿತ್ತು.

ಇದೀಗ ಅಥ್ಲೀಟ್‌ಗಳಲ್ಲಿ ಉದ್ದೀಪನ ಮದ್ದು ಪಿಡುಗಿನ ಕುರಿತು ಜಾಗೃತಿ ಮೂಡಿಸಲು ಬಾಲಿವುಡ್ ನಟ, ದೇಹದಾರ್ಢ್ಯ ಪಟು ಸುನಿಲ್ ಶೆಟ್ಟಿ ಅವರನ್ನು ತನ್ನ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.

ಕ್ರೀಡಾಪಟುಗಳ ಜೈವಿಕ ಪಾಸ್‌ಪೋರ್ಟ್ ಸಿದ್ಧಪಡಿಸಲು ಕೇಂದ್ರ ಕ್ರೀಡಾ ಇಲಾಖೆ ಮುಂದಾಗಿದೆ. ಇದರಲ್ಲಿ ಕ್ರೀಡಾಪಟುವಿನ ರಕ್ತ, ಮೂತ್ರಗಳ ಸ್ಯಾಂಪಲ್‌ಗಳನ್ನು ಕಾಲಕಾಲಕ್ಕೆ ಪರೀಕ್ಸಿಸಿ ಫಲಿತಾಂಶವನ್ನು ಡಿಜಿಟಲ್ ದಾಖಲೆ ಮಾಡಲಾಗುತ್ತದೆ. ಆದ್ದರಿಂದ ಕ್ರೀಡಾಕೂಟದಲ್ಲಿ, ಕ್ರೀಡಾಕೂಟದಿಂದ ಹೊರಗೆ ಕೂಡ ಅಥ್ಲೀಟ್‌ಗಳ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿರುವ ದೇಶಗಳಲ್ಲಿ ಭಾರತವೂ ಒಂದು. ದಶಕಗಳ ಹಿಂದಿನ ಪರಿಸ್ಥಿತಿ ಈಗಿಲ್ಲ. ಫ್ರಾಂಚೈಸ್ ಲೀಗ್‌ಗಳು ಬಹುತೇಕ ಎಲ್ಲ ಕ್ರೀಡೆಗಳಿಗೂ ಕಾಲಿಟ್ಟಿದೆ. ಹಣ, ಹೆಸರು, ಪ್ರಚಾರ, ವಿದೇಶಿ ಕೋಚ್‌ಗಳ ಮಾರ್ಗದರ್ಶನ ಮತ್ತು ಆಧುನಿಕ ಫಿಟ್‌ನೆಸ್‌ ತಂತ್ರಗಳು ಲಭಿಸುತ್ತಿವೆ. ಇದು ಎಲ್ಲ ಕ್ಷೇತ್ರಗಳಲ್ಲಿಯೂ ಪೈಪೋಟಿ ಹೆಚ್ಚಲು ಕಾರಣವಾಗಿದೆ. ಇದರಲ್ಲಿ ಯಶಸ್ಸು ಗಳಿಸಲು ವಾಮಮಾರ್ಗ ಹಿಡಿಯುವವರೂ ಇದ್ದಾರೆ.  ಅದಕ್ಕಾಗಿ ಸಾಮರ್ಥ್ಯವನ್ನು ಉದ್ದೇಪಿಸುವ ನಿಷೇಧಿತ ಮದ್ದುಗಳ ಮೊರೆ ಹೋಗುತ್ತಿದ್ದಾರೆ. ಅನಾಬಾಲಿಕ್ ಸ್ಟಿರಾಯ್ಡ್‌ಗಳನ್ನು ಸೇವಿಸಿ ಸಿಕ್ಕಿಬೀಳುತ್ತಾರೆ. ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುವುದರ ಜೊತೆಗೆ ದೇಶದ ಹೆಸರನ್ನು ಮಣ್ಣುಪಾಲು ಮಾಡುತ್ತಾರೆ. ಚಿಟಿಕೆಯಷ್ಟು ಮದ್ದಿಗೆ ಹೋದ ಮಾನ, ಮಣಭಾರದ ಚಿನ್ನದಿಂದಲೂ ಮರಳಿ ಬರುವುದಿಲ್ಲ ಎಂಬ ಅರಿವು ಮೂಡಬೇಕಿದೆ. 

ಕ್ರೀಡಾ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ: ಪುಟಿನ್

ವಾಡಾದ ಈ ಕ್ರಮದ ವಿರುದ್ಧ ಕ್ರೀಡಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ಲೋಪಗಳಿಗೆ ಶಿಕ್ಷೆ ನೀಡಲಿ. ಆದರೆ ಈ ರೀತಿ ಸಾರಾಸಗಟಾಗಿ ಇಡೀ ದೇಶದ ಕ್ರೀಡೆಯನ್ನೇ ಅಮಾನತು ಮಾಡುವುದು ಸಲ್ಲದು. ನಮ್ಮ ಪರಿಣತರು, ಕಾನೂನು ತಜ್ಞರು ಮತ್ತು ಕ್ರೀಡಾ ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡುತ್ತೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ವಾಡಾ ವಿಧಿಸಿರುವ ಶಿಕ್ಷೆಯಿಂದಾಗಿ ರಷ್ಯಾದ ಅಥ್ಲೀಟ್‌ಗಳು  ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಷಿಪ್‌ಗಳು, 2022ರ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿಯೂ ತಮ್ಮ ದೇಶದ ಧ್ವಜದಡಿಯಲ್ಲಿ ಸ್ಪರ್ಧಿಸುವಂತಿಲ್ಲ.

ಕ್ರೀಡಾ ಸಚಿವ ರಿಜಿಜು ಕಳವಳ

ಭಾರತದಲ್ಲಿ ಈ ವರ್ಷ 150ಕ್ಕೂ ಹೆಚ್ಚು ಉದ್ದೀಪನ ಮದ್ದು ಸೇವನೆ ಪ್ರಕರಣಗಳು ವರದಿಯಾಗಿವೆ. ಎಲ್ಲ ಕ್ರೀಡಾಪಟುಗಳು ಅರಿವು ಇದ್ದೇ ಮದ್ದು ಸೇವಿಸುತ್ತಾರೆ ಎಂದು ಹೇಳುವುದುತಪ್ಪಾಗುತ್ತದೆ. ತಿಳಿದೋ. ತಿಳಿಯದೆಯೋ ತಪ್ಪು ಮಾಡುತ್ತಾರೆ. ಆದ್ದರಿಂದ ಎಲ್ಲರಿಗೂ ಅರಿವು ಮೂಡಿಸುವುದು ಮುಖ್ಯ. ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಪಾಲಕರಿಗೆ ಈ ಕುರಿತು ಜಾಗೃತಿ ಮೂಡಿಸುವುದೇ ಮುಖ್ಯ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು