ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics ಅಥ್ಲೆಟಿಕ್ಸ್: ಸಬ್ಳೆ 'ಜಸ್ಟ್ ಮಿಸ್'; ದ್ಯುತಿ, ಜಬೀರ್ ಹೊರಕ್ಕೆ

Last Updated 30 ಜುಲೈ 2021, 7:54 IST
ಅಕ್ಷರ ಗಾತ್ರ

ಟೋಕಿಯೊ: ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರೂ ಭಾರತದ ಅವಿನಾಶ್ ಸಬ್ಳೆ ಅವರಿಗೆ ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಗಿಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ದ್ಯುತಿ ಚಾಂದ್ ಹಾಗೂ ಎಂ.ಪಿ. ಜಬೀರ್ ತಮ್ಮ ತಮ್ಮ ವಿಭಾಗಗಳಿಂದ ನಿರ್ಗಮಿಸಿದ್ದಾರೆ.

26 ವರ್ಷದ ಸಬ್ಳೆ ಅವರಿಗೆ ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಇತರೆ ಹೀಟ್ಸ್‌ನಲ್ಲಿ ಸ್ಪರ್ಧಿಸಿದ ಅಥ್ಲೀಟ್‌ಗಿಂತಲೂ ಉತ್ತಮ ಪ್ರದರ್ಶನ ನೀಡಿದರೂ ಫೈನಲ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಹೀಟ್ 2ರಲ್ಲಿ ಸ್ಪರ್ಧಿಸಿದ ಸಬ್ಳೆ 8 ನಿಮಿಷ 18.12 ಸೆಕೆಂಡುಗಳಲ್ಲಿ ಏಳನೆಯವರಾಗಿ ಗುರಿ ಮುಟ್ಟಿದರು. ಈ ಮೂಲಕ ಮಾರ್ಚ್‌ನಲ್ಲಿ ಫೆಡರೇಷನ್ ಕಪ್ (8 ನಿಮಿಷ 20.20 ಸೆಕೆಂಡು) ದಾಖಲೆಯನ್ನು ಉತ್ತಮಪಡಿಸಿದರು.

ಪ್ರತಿ ಹೀಟ್ಸ್‌ನಲ್ಲೂ ಅಗ್ರ ಮೂವರು ಸ್ಪರ್ಧಿಗಳು ಫೈನಲ್‌ಗೆ ನೇರವಾಗಿ ಅರ್ಹತೆಯನ್ನು ಪಡೆಯುತ್ತಾರೆ. ಹೀಟ್ 3ರಲ್ಲಿ ಅರ್ಹತೆ ಗಿಟ್ಟಿಸಿದ ಮೊದಲ ಮೂವರು ಸ್ಪರ್ಧಿಗಿಂತಲೂ ವೇಗವಾಗಿ ಸಬ್ಳೆ ಗುರಿ ತಲುಪಿದರು ಎಂಬುದು ಇಲ್ಲಿ ಗಮನಾರ್ಹ.

ಎಲ್ಲ ಮೂರು ಹೀಟ್ಸ್‌ನ ಅಗ್ರ ಮೂವರು ಅಥ್ಲೀಟ್‌ಗಳು ಮತ್ತು ಅರ್ಹತಾ ಸುತ್ತಿನ ಮುಂದಿನ ಆರು ಅತಿವೇಗದ ಸ್ಪರ್ಧಿಗಳು ಸೇರಿದಂತೆ ಒಟ್ಟು 15 ಮಂದಿ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ಅರ್ಹತಾ ಸುತ್ತಿನ ಹೀಟ್ಸ್‌ನಲ್ಲಿ ಏಳನೇಯ ಅತ್ಯುತ್ತಮ ಮತ್ತು ಒಟ್ಟಾರೆಯಾಗಿ 13ನೇ ಸ್ಥಾನ ಪಡೆದ ಸಬ್ಳೆ ಕೂದಲೆಳೆ ಅಂತರದಲ್ಲಿ ಸೆಮಿಫೈನಲ್‌ಗೇರುವ ಅವಕಾಶವನ್ನು ಕಳೆದುಕೊಂಡರು.

ಅತ್ತ ಮಹಿಳೆಯರ 100 ಮೀಟರ್ ಹೀಟ್ಸ್‌ನಲ್ಲಿ 11.54 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ದ್ಯುತಿ ಚಾಂದ್, ಹೀಟ್ 5ರಲ್ಲಿ ಏಳನೇಯವರಾಗಿ ಮತ್ತು 54 ಸ್ಪರ್ಧಿಗಳ ಪೈಕಿ ಒಟ್ಟಾರೆಯಾಗಿ 45ನೇ ಸ್ಥಾನ ಪಡೆದು ಹೊರಬಿದ್ದರು.

ಪುರುಷರ 400 ಮೀಟರ್ ಹರ್ಡಲ್ಸ್‌ನಲ್ಲಿ 50.77 ಸೆಕೆಂಡುಗಳಲ್ಲಿ ಗುರಿ ತಲುಪಿದ ಎಂ.ಪಿ. ಜಬೀರ್, ಒಟ್ಟಾರೆಯಾಗಿ 33ನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT