ಶನಿವಾರ, ಸೆಪ್ಟೆಂಬರ್ 18, 2021
27 °C
ಸತತ ಮೂರನೇ ಬಾರಿ ಸ್ವರ್ಣ ಗೆದ್ದ ಅನಿಟಾ

Tokyo Olympics: ಇತಿಹಾಸ ಬರೆದ ಪೋಲೆಂಡ್‌ನ ‘ಹ್ಯಾಮರ್‌ ರಾಣಿ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಪೋಲೆಂಡ್‌ನ ಅನಿಟಾ ವ್ಲೊಡಾರ್ಕ್‌ಜಿಕ್‌ ಅವರು ಒಲಿಂಪಿಕ್ಸ್‌ನ ಟ್ರ್ಯಾಕ್‌ ಅಂಡ್‌ ಫೀಲ್ಡ್‌ನ ಒಂದೇ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿ ಚಿನ್ನ ಗೆದ್ದ ಮೊದಲ ಮಹಿಳಾ ಅಥ್ಲೀಟ್‌ ಎನಿಸಿದರು. ಅನಿಟಾ ಮಂಗಳವಾರ ಟೋಕಿಯೊ ಒಲಿಂಪಿಕ್‌ ಕ್ರೀಡೆಗಳ  ಹ್ಯಾಮರ್‌ ಥ್ರೊ ಸ್ಪರ್ಧೆಯಲ್ಲಿ ನಿರಾಯಾಸವಾಗಿ ಸ್ವರ್ಣ ವಿಜೇತರಾದರು.

35 ವರ್ಷದ ಈ ಅಥ್ಲೀಟ್‌ 2012ರ ಲಂಡನ್‌ ಮತ್ತು 2016ರ ರಿಯೊ ಕ್ರೀಡೆಗಳಲ್ಲೂ ಹ್ಯಾಮರ್‌ ಥ್ರೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಕೊರಳಿಗೆ ಹಾಕಿಕೊಂಡಿದ್ದರು. ಇಲ್ಲಿ 78.48 ಮೀಟರ್‌ಗಳ ಅತ್ಯುತ್ತಮ ಥ್ರೊ ಮೂಲಕ ಹ್ಯಾಟ್ರಿಕ್‌ ಸಾಧನೆ ಪೂರೈಸಿದರು.

ಅನಿಟಾಗೆ ಚಿನ್ನದ ಪದಕ ಗೆಲ್ಲಲು ಅಂಥ ಪ್ರಯಾಸವಾಗಲಿಲ್ಲ. ಅವರು ನಿಕಟ ಎದುರಾಳಿಗಿಂತ 1.45 ಮೀ.ಗಳ ದೂರ ಲೋಹದ ಗುಂಡನ್ನು ಎಸೆದಿದ್ದರು. ಚೀನಾದ ವಾಂಗ್‌ ಝೆಂಗ್‌ (77.03 ಮೀ.) ಮತ್ತು ಪೋಲೆಂಡ್‌ನ ಇನ್ನೋರ್ವ ಸ್ಪರ್ಧಿ ಮಲ್ವಿನಾ  ಕಪ್ರೋನ್‌ (75.49 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

‘ನನಗೆ ಖುಷಿಯಾಗಿದೆ. ಹ್ಯಾಮರ್‌ಥ್ರೊ ರಾಣಿ ಎನಿಸಬೇಕೆಂಬ ಕನಸನ್ನು ಹೊಂದಿದ್ದೆ. ಗಾಯಾಳಾಗಿದ್ದ ನಾನು ಸಕಾಲಕ್ಕೆ ಚೇತರಿಸಿಕೊಂಡು ಒಲಿಂಪಿಕ್‌ ಪದಕ ಗೆದ್ದುಕೊಂಡೆ’ ಎಂದು ಅನಿಟಾ ಸಂತಸ ವ್ಯಕ್ತಪಡಿಸಿದರು.

ಅವರ ಮೊದಲ ಯತ್ನ ಬಲೆಗೆ ಸಿಲುಕಿತು. ಎರಡನೇ ಯತ್ನದಲ್ಲಿ 76.01 ಮೀಟರ್‌ ದೂರ ದಾಖಲಿಸಿದ ಅವರು ಮರು ಪ್ರಯತ್ನದಲ್ಲಿ ಹ್ಯಾಮರ್‌ಅನ್ನು 77.44 ಮೀ. ದೂರ ಎಸೆದರಲ್ಲದೇ, ಅಂತಿಮ ಯತ್ನದಲ್ಲಿ ಅದನ್ನು ಇನ್ನಷ್ಟು ಸುಧಾರಿಸಿದರು.

ಕಪ್ರೊನ್ ಅವರಿಗೆ ಬೆಳ್ಳಿಯ ಪದಕ ಖಚಿತವೆನ್ನುವಂತೆ ಕಂಡಿತ್ತು. ಆದರೆ ಆರನೇ ಹಾಗೂ ಅಂತಿಮ ಎಸೆತದಲ್ಲಿ ಚೀನಾ ಸ್ಪರ್ಧಿ ಉತ್ತಮ ಥ್ರೋ ಮಾಡಿ ಎರಡನೇ ಸ್ಥಾನಕ್ಕೇರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು