ಸೋಮವಾರ, ಸೆಪ್ಟೆಂಬರ್ 27, 2021
21 °C
ಹಾಲಿ ಚಾಂಪಿಯನ್‌ ಅರ್ಜೆಂಟೀನಾ ವಿರುದ್ಧ ಗೆದ್ದರೆ ಭಾರತದ ಹಾದಿ ಸುಗಮ

Tokyo Olympics: ಪುರುಷರ ಹಾಕಿ- ನೌಕೌಟ್ ಹಂತಕ್ಕೇರುವ ಕನಸು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕ್ವಾರ್ಟರ್ ಫೈನಲ್ ಹಂತಕ್ಕೇರುವ ಕನಸಿನೊಂದಿಗೆ ಭಾರತ ತಂಡ ಗುರುವಾರ ಒಲಿಂಪಿಕ್ಸ್  ಹಾಕಿಯ ನಾಲ್ಕನೇ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಆದರೆ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾದ ಸವಾಲನ್ನು ಮನ್‌ಪ್ರೀತ್ ಸಿಂಗ್ ಬಳಗ ಎದುರಿಸಬೇಕಾಗಿದೆ.

‘ಎ’ ಗುಂಪಿನಲ್ಲಿ ಆಡುವ ಮೂರು ಪಂದ್ಯಗಳ ಪೈಕಿ ಎರಡನ್ನು ಭಾರತ ಗೆದ್ದುಕೊಂಡಿದೆ. ಆದರೆ ಆಸ್ಟ್ರೇಲಿಯಾ ಎದುರು ಅನುಭವಿಸಿದ ಭಾರಿ ಅಂತರದಿಂದ ಸೋಲು ತಂಡವನ್ನು ಕಾಡುತ್ತಿದೆ. ಅರ್ಜೆಂಟೀನಾ ಕಳೆದ ಬಾರಿ ಚಾಂಪಿಯನ್ ಆಗಿದ್ದರೂ ಈ ಸಲ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲವಾಗಿದೆ. ತಲಾ ಒಂದು ಜಯ, ಡ್ರಾ ಮತ್ತು ಸೋಲಿನೊಂದಿಗೆ ತಂಡ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.  

ಹಿಂದಿನ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಗಳಿಸಿದ ಗೆಲುವು ಭಾರತ ತಂಡದ ಭರವಸೆಯನ್ನು ಹೆಚ್ಚಿಸಿದೆ. ಆದರೆ ಆ ಪಂದ್ಯ ಮುಗಿದ ನಂತರ ಗ್ರಹಾಂ ರೀಡ್ ಅತೃಪ್ತಿ ವ್ಯಕ್ತಪಡಿಸಿದ್ದರು. ಕೆಲವು ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಾಗಿದೆ ಎಂದಿದ್ದರು. ಸ್ಪೇನ್ ತಂಡಕ್ಕೆ ಭಾರತ ಎಂಟು ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟಿತ್ತು. ಇದು ಗ್ರಹಾಂ ರೀಡ್ ಅವರನ್ನು ಹೆಚ್ಚು ಕಾಡಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ ಅರ್ಜೆಂಟೀನಾ ವಿರುದ್ಧ ತಂಡ ಒತ್ತಡವಿಲ್ಲದೆ ಆಡಬಹುದಾಗಿದೆ. ಅರ್ಜೆಂಟೀನಾದ ಬಲಿಷ್ಠ ರಕ್ಷಣಾ ವಿಭಾಗವನ್ನು ಮೀರಿ ನಿಲ್ಲುವ ಸವಾಲು ಕೂಡ ಭಾರತದ ಮುಂದೆ ಇದೆ.

ಡ್ರ್ಯಾಗ್ ಫ್ಲಿಕ್ಕರ್ ರೂಪಿಂದರ್‌ ಪಾಲ್ ಸಿಂಗ್‌, ದಿಲ್‌ಪ್ರೀತ್ ಸಿಂಗ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್ ಈ ವರೆಗೆ ಗೋಲು ಗಳಿಸಿ ಮಿಂಚಿದ್ದಾರೆ. ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ವೈಫಲ್ಯ ಕಂಡಿದ್ದರೂ ಉಳಿದೆರಡು ಪಂದ್ಯಗಳಲ್ಲಿ ‘ಗೋಡೆ’ಯಾಗಿ ಭಾರತದ ರಕ್ಷಣೆಗೆ ನಿಂತಿದ್ದರು.  

ಅರ್ಜೆಂಟೀನಾ ವಿರುದ್ಧ ಈಚೆಗೆ ನಡೆದ ಪಂದ್ಯಗಳಲ್ಲಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ವರ್ಷದ ಆರಂಭದಲ್ಲಿ ನಡೆದಿದ್ದ ಎಫ್‌ಐಎಚ್‌ ಪ್ರೊ ಲೀಗ್‌ನ ಎರಡು ಪಂದ್ಯಗಳ ಪೈಕಿ ಮೊದಲ ಹಣಾಹಣಿಯಲ್ಲಿ 2–2ರಲ್ಲಿ ಡ್ರಾ ಸಾಧಿಸಿದ್ದ ಭಾರತ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 3–2ರ ಜಯ ಗಳಿಸಿತ್ತು. ಅರ್ಜೆಂಟೀನಾ ಪ್ರವಾಸದಲ್ಲೂ ಮನ್‌ಪ್ರೀತ್ ಸಿಂಗ್ ಬಳಗ ಉತ್ತಮ ಸಾಧನೆ ಮಾಡಿತ್ತು.

ಈ ವರೆಗೆ ಭಾರತದ ಹಾದಿ

ಎದುರಾಳಿ;ಫಲಿತಾಂಶ;ಅಂತರ

ನ್ಯೂಜಿಲೆಂಡ್‌;ಜಯ;3–2

ಆಸ್ಟ್ರೇಲಿಯಾ;ಸೋಲು;1–7

ಸ್ಪೇನ್‌;ಗೆಲುವು;3–0

ಅರ್ಜೆಂಟೀನಾ ಸಾಗಿ ಬಂದ ಬಗೆ

ಎದುರಾಳಿ;ಫಲಿತಾಂಶ;ಅಂತರ

ಸ್ಪೇನ್‌;ಡ್ರಾ;1–1

ಜಪಾನ್‌;ಗೆಲುವು;2–1

ಆಸ್ಟ್ರೇಲಿಯಾ;ಸೋಲು;2–5

ರ‍್ಯಾಂಕಿಂಗ್

ಭಾರತ 4

ಅರ್ಜೆಂಟೀನಾ 7

ಒತ್ತಡದಲ್ಲಿ ಮಹಿಳಾ ತಂಡ

ಭಾರತದ ಮಹಿಳಾ ತಂಡ ನಾಕೌಟ್ ಹಂತ ತಲುಪಬೇಕಾದರೆ ಗುಂಪು ಹಂತದಲ್ಲಿ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬುಧವಾರ ಬ್ರಿಟನ್ ಎದುರು ಸೋಲುವುದರೊಂದಿಗೆ ತಂಡ ಸತತ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದೆ.

ಅವಕಾಶಗಳನ್ನು ಕೈಚೆಲ್ಲಿದ ಭಾರತ ತಂಡ ಹಾಲಿ ಚಾಂಪಿಯನ್ ಬ್ರಿಟನ್ ಎದುರು 1–4ರಲ್ಲಿ ಸೋತಿತು. ಹನಾ ಮಾರ್ಟಿನ್‌ (2, 19ನೇ ನಿಮಿಷ), ಲಿಲಿ ಒಸ್ಲಿ (41ನೇ ನಿ) ಮತ್ತು ಗ್ರೇಸ್ ಬಾಲ್ಸ್‌ಡನ್‌ (57ನೇ ನಿಮಿಷ) ಬ್ರಿಟನ್‌ಗಾಗಿ ಗೋಲು ಗಳಿಸಿದರೆ ಭಾರತಕ್ಕಾಗಿ ಏಕೈಕ ಗೋಲು ಗಳಿಸಿದವರು ಶರ್ಮಿಳಾ ದೇವಿ (23ನೇ ನಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು