ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್: ಕುಸ್ತಿ ಅಖಾಡದಲ್ಲಿ ಮತ್ತೊಂದು ಪದಕಕ್ಕೆ ಪಟ್ಟು

ಭಾರತದ ಕನಸಿನ ಪಯಣ
Last Updated 8 ಜುಲೈ 2021, 22:43 IST
ಅಕ್ಷರ ಗಾತ್ರ

ಕೊರೊನಾ ಹಾವಳಿಯ ಕಾರಣ ಜಾರಿಯಾದ ‘ವೈಯಕ್ತಿಕ ಅಂತರ‘ದ ನಿಯಮಕ್ಕೆ ಅತಿ ಹೆಚ್ಚು ನಷ್ಟಕ್ಕೊಳಗಾದ ಕ್ರೀಡೆಯೆಂದರೆ ಕುಸ್ತಿ.

ಪರಸ್ಪರ ಪಟ್ಟು ಹಾಕಿ ಸೆಣಸಾಡುವ ಕುಸ್ತಿಪಟುಗಳು ಹಲವು ತಿಂಗಳು ಕಣಕ್ಕಿಳಿಯಲೇ ಇಲ್ಲ. ಅನ್‌ಲಾಕ್ ಆದಾಗ ಮರದ ದಿಮ್ಮಿಗಳು ಮತ್ತು ಡೆಮಿ (ಗೊಂಬೆ)ಗಳನ್ನು ಬಳಸಿ ಅಭ್ಯಾಸ ಮಾಡಿದರು. ಭಾರತದಲ್ಲಿ ಎರಡನೇ ಅಲೆ ಆರಂಭವಾದಾಗ ಪ್ರಮುಖ ಕುಸ್ತಿಪಟುಗಳು ವಿದೇಶದಲ್ಲಿ ಅಭ್ಯಾಸಕ್ಕೆ ತೆರಳಿದರು. ಇದೀಗ ಟೋಕಿಯೊ ಒಲಿಂಪಿಕ್ಸ್‌ನ ಅಂಗಳದಲ್ಲಿ ತೊಡೆ ತಟ್ಟಲು ಸಿದ್ಧರಾಗಿದ್ದಾರೆ.

ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಕುಸ್ತಿಪಟುಗಳು ಪದಕಗಳ ಕಾಣಿಕೆ ನೀಡಿದ್ದಾರೆ. ಈ ಬಾರಿಯೂ ಗೆಲುವಿನ ಕಾಣಿಕೆ ನೀಡುವ ಭರವಸೆಯಲ್ಲಿ ಬಜರಂಗ್ ಪೂನಿಯಾ, ವಿನೇಶ ಪೋಗಟ್, ದೀಪಕ್ ಪೂನಿಯಾ, ವಿಜಯ್ ದಹಿಯಾ ಮತ್ತಿತರರು ಇದ್ದಾರೆ.

ಜಾಧವ್ ಹಾಕಿದ ಬುನಾದಿ
ಭಾರತ ಹಾಕಿ ತಂಡವು ಒಲಿಂಪಿಕ್ಸ್‌ ಅಂಗಳದಲ್ಲಿ ಚಿನ್ನದ ಹೊಳೆ ಹರಿಸುತ್ತಿದ್ದ ಸಮಯವದು. ಆದರೆ, ವೈಯಕ್ತಿಕ ವಿಭಾಗಗಳಲ್ಲಿ ದೇಶವು ಒಂದೂ ಪದಕ ಜಯಿಸದ ಕೊರಗು ಕೂಡ ಇತ್ತು. ಇದನ್ನು ನೀಗಿಸಿದವರು ಮಹಾರಾಷ್ಟ್ರದ ಕಾಶಾಬಾ ದಾದಾಸಾಹೇಬ್ ಜಾಧವ.

ಸ್ವಾತಂತ್ರ್ಯೋತ್ತರ ಭಾರತವು ಕ್ರೀಡಾಕಣದಲ್ಲಿ ತನ್ನದೊಂದು ಸ್ಥಾನ ಮಾಡಿಕೊಳ್ಳಲು ಕಾರಣರಾದ ಕ್ರೀಡಾಪಟುಗಳಲ್ಲಿ ಜಾಧವ ಪ್ರಮುಖರು. ಹೆಲ್ಸಿಂಕಿಯಲ್ಲಿ 1952ರಲ್ಲಿ ನಡೆದ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಅವರು ಕಂಚಿನ ಪದಕ ಜಯಿಸಿದ್ದರು. ಸಾತಾರ ಜಿಲ್ಲೆಯ ಕರಾಡ ತಾಲೂಕಿನ ಗೋಲೆಶ್ವರ್‌ದವರು ಜಾಧವ. ‘ಪಾಕೆಟ್‌ ಡೈನಮೊ‘ ಎಂದೇ ಪ್ರಸಿದ್ಧರಾಗಿದ್ದವರು. ಅವರು ಕಂಚು ಗೆದ್ದು ಮರಳಿದಾಗ ಕರಾಡದ ರೈಲ್ವೆ ನಿಲ್ದಾಣದಿಂದ ಗ್ರಾಮದವರೆಗೆ ದೊಡ್ಡ ಮೆರವಣಿಗೆಯೇ ನಡೆದಿತ್ತು. 151 ಚಕ್ಕಡಿಗಳಲ್ಲಿ ಅಭಿಮಾನಿಗಳು ಬಂದಿದ್ದರು. ಡೋಲ್, ವಾದ್ಯಗಳ ಸದ್ದು ಮುಗಿಲುಮುಟ್ಟಿತ್ತು. ಸುಮಾರು 10 ಕಿ.ಮೀ ದೂರದವರೆಗೂ ಜನ ಸೇರಿದ್ದರಂತೆ.

ಆದರೆ ಅದಾದ ನಂತರ ಕುಸ್ತಿಯಲ್ಲಿ ಪದಕದ ಹೊಳಪು ಕಾಣಲು 2008ರವರೆಗೂ ಭಾರತ ಕಾಯಬೇಕಾಯಿತು. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕುಮಾರ್ ಕಂಚಿನ ಸಾಧನೆ ಮಾಡಿದರು. ಅದರೊಂದಿಗೆ ಪ್ರತಿ ಒಲಿಂಪಿಕ್ಸ್‌ನಲ್ಲಿಯೂ ಪದಕ ಜಯದ ಭರವಸೆ ಮೂಡಲು ಕಾರಣರಾದರು.

2012ರಲ್ಲಿ ಸುಶೀಲ್ ಬೆಳ್ಳಿ ಗೆದ್ದರು. ಅದೇ ಕೂಟದಲ್ಲಿ ಯೋಗೇಶ್ವರ್ ದತ್ ಕಂಚು ಪಡೆದರು. 2016ರಲ್ಲಿ ಪುರುಷರ ವಿಭಾಗದ ಕುಸ್ತಿಪಟುಗಳು ಚಿತ್ ಆದರು. ಆದರೆ, ಮಹಿಳೆಯರ ವಿಭಾಗದ ಮೊಟ್ಟಮೊದಲ ಪದಕ ಗೆದ್ದ ಸಾಕ್ಷಿ ಮಲಿಕ್ ಭಾರತ ಧ್ವಜ ರಾರಾಜಿಸುವಂತೆ ಮಾಡಿದರು.

ಈ ಬಾರಿ ಎಂಟು ಜನರನ್ನು ಆಯ್ಕೆ ಮಾಡಲಾಗಿದೆ. ಆದರೆ ಸುಮಿತ್ ಮಲಿಕ್ ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದು ಭಾರತಕ್ಕೆ ಆರಂಭದಲ್ಲಿಯೇ ಬಿದ್ದಿರುವ ಪೆಟ್ಟು. ಆದರೂ ಕಳೆದ ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳ ಸಾಧನೆ ಮಾಡಿರುವ ಬಜರಂಗ್ ಪೂನಿಯಾ ಮತ್ತು ವಿನೇಶ ಪೋಗಟ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT