ಶನಿವಾರ, ಸೆಪ್ಟೆಂಬರ್ 18, 2021
22 °C

Tokyo Olympics | ಮುಖಕ್ಕೆ ಪೆಟ್ಟಾದರೂ ಛಲ ಬಿಡದೆ ಬಾಕ್ಸಿಂಗ್ ಆಡಿದ ಭಾರತದ ಯೋಧ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿರಬಹುದು. ಆದರೆ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಚ್ಚೆದೆಯ ಹೋರಾಟ ತೋರುವ ಮೂಲಕ ಭಾರತದ ಈ ಧೀರ ಯೋಧ ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಹೌದು, ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಬಖೊದಿರ್ ಜಲೊಲೊವ್‌ ಅವರ ಕೈಯಿಂದ ಬಲವಾದ ಏಟು ತಿಂದ ಸತೀಶ್ ಕುಮಾರ್, ಅವರ ಹೋರಾಟದ ಮನೋಬಲ ಕಿಂಚಿತ್ತು ಕುಗ್ಗಲಿಲ್ಲ.

ಇದನ್ನೂ ಓದಿ: 

ಕಣ್ಣಿನ ಅಂಚು, ಗಲ್ಲ, ಹಣೆಯಿಂದ ರಕ್ತ ಚೆಲ್ಲುತ್ತಿದ್ದರೂ ಅದ್ಯಾವುದನ್ನು ಲೆಕ್ಕಿಸದ ಸತೀಶ್, ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದಾರೆ. ಇದರಿಂದಾಗಿ ಕಂಚಿನ ಪದಕ ಕೈತಪ್ಪಿದರೂ ಎದುರಾಳಿ ಸೇರಿದಂತೆ ವಿಶ್ವದಾದ್ಯಂತ ಕ್ರೀಡಾಪ್ರೇಮಿಗಳ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಸೂಪರ್ ಹೆವಿವೇಟ್ (91+ ಕೆ.ಜಿ) ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಬಾಕ್ಸರ್ ಎಂಬ ಹಿರಿಮೆಗೂ ಸತೀತ್ ಕುಮಾರ್ ಭಾಜನರಾದರು.

 

 

 

ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡಿದ್ದ ಅವರು ಭಾನುವಾರ ರಿಂಗ್‌ಗೆ ಬರುವಾಗಲೇ ಹಣೆ ಮತ್ತು ಗಲ್ಲಕ್ಕೆ ಸ್ಟಿಚ್ ಹಾಕಿಸಿಕೊಂಡಿದ್ದರು. ಆದರೂ ವಿಶ್ವದ ನಂ.1 ಬಾಕ್ಸರ್ ವಿರುದ್ಧ ಹೋರಾಡಲು ನಿರ್ಧರಿಸಿದ್ದರು. ಕ್ವಾರ್ಟರ್‌ನಲ್ಲಿ ಬಖೊದಿರ್ ಜಲೊಲೊವ್‌ ಏಟಿನಿಂದಾಗಿ ಮತ್ತಷ್ಟು ಗಾಯಗೊಂಡರು.

 

'ಬೌಟ್ ಬಳಿಕ ನನ್ನ ಫೋನ್ ರಿಂಗಣಿಸುತ್ತಲೇ ಇತ್ತು. ನಾನು ಗೆದ್ದಂತೆ ಎಲ್ಲರೂ ಅಭಿನಂದಿಸುತ್ತಿದ್ದರು. ನಾನೀಗ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದೇನೆ' ಎಂದು 32 ವರ್ಷದ ಸತೀಶ್ ಕುಮಾರ್ ತಿಳಿಸಿದ್ದಾರೆ.

'ನನ್ನ ಗಲ್ಲಕ್ಕೆ ಏಳು ಮತ್ತು ಹಣೆಗೆ ಆರು ಸ್ಟಿಚ್ ಹಾಕಿಸಲಾಗಿದೆ. ನಾನು ಹೋರಾಡಲು ಬಂದಿದ್ದೇನೆ. ಇಲ್ಲದಿದ್ದರೆ ಇದೇ ಬೇಸರ ಕಾಡುತ್ತಿತ್ತು. ಈಗ ನಾನು ನಿರಾಳವಾಗಿದ್ದೇನೆ. ಇಲ್ಲಿಂದ ಮತ್ತೆ ಎದ್ದು ಬರುವೆನು' ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್ ಕುಮಾರ್ ದಿಟ್ಟ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: 

'ಬಾಕ್ಸಿಂಗ್ ರಿಂಗ್‌ಗೆ ಇಳಿಯದಂತೆ ನನ್ನ ಪತ್ನಿ ಸಲಹೆ ನೀಡಿದರು. ತಂದೆ ಕೂಡಾ ಈ ರೀತಿಯ ಹೋರಾಟವನ್ನು ನೋಡಲು ಇಷ್ಟಪಡುವುದಿಲ್ಲ ಎಂದಿದ್ದರು. ಅದು ಸಹಜ, ನನಗೆ ನೋವಾಗುವುದನ್ನು ಅವರು ಬಯಸುವುದಿಲ್ಲ. ಆದರೆ ಅವರೀಗ ನಾನು ಹೋರಾಡಲು ಬಯಸುತ್ತೇನೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.

 

 

 

ಎರಡು ಮಕ್ಕಳ ತಂದೆಯಾಗಿರುವ ಸತೀಶ್ ಕುಮಾರ್, ಈ ಪಂದ್ಯದ ಬಳಿಕ ಮಕ್ಕಳು ಹೆಮ್ಮೆಪಡುತ್ತಾರೆ ಎಂದು ಹೇಳಿದ್ದಾರೆ.

 

ಸತೀಶ್ ಕುಮಾರ್ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು