ಶುಕ್ರವಾರ, ಜೂನ್ 25, 2021
28 °C

PV Web Exclusive: ಒಲಿಂಪಿಕ್ಸ್‌ ಆಯೋಜನೆಗೆ ಸೋಂಕಿನ ಭೀತಿ

ನಾಗೇಶ್ ಶೆಣೈ Updated:

ಅಕ್ಷರ ಗಾತ್ರ : | |

ಟೋಕಿಯೊದಲ್ಲಿ ವಿಶ್ವದ ಮಹೋನ್ನತ ಕ್ರೀಡಾ ಮೇಳ– ಒಲಿಂಪಿಕ್ಸ್‌ ಆರಂಭಕ್ಕೆ 76 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ ರೌದ್ರಾವತಾರ ತಾಳಿರುವ ಕೋವಿಡ್‌ ಎರಡನೇ ಅಲೆಯಿಂದಾಗಿ, ಈ ಟೋಕಿಯೊ ಕ್ರೀಡೆಗಳು ನಿಗದಿಯಂತೆ ನಡೆಯುವುದೇ ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಈಗಾಗಲೇ ಒಂದು ಬಾರಿ ಮುಂದೂಡಿಕೆ ಆಗಿರುವ ಒಲಿಂಪಿಕ್ಸ್‌ ಪರಿಷ್ಕೃತ ದಿನಾಂಕದ ಪ್ರಕಾರ ಜುಲೈ 23 ರಿಂದ ಆಗಸ್ಟ್‌ 8ರವರೆಗೆ ನಡೆಯಬೇಕಾಗಿದೆ.

ಮೊದಲ ಅಲೆ ತಾರಕಕ್ಕೆ ಏರಿದ್ದ ಕಾರಣ, ಕಳೆದ ವರ್ಷದ ಜುಲೈ 24ರಂದು ಆರಂಭವಾಗಕಾಗಿದ್ದ ಟೋಕಿಯೊ ಒಲಿಂ‍ಪಿಕ್‌ ಕ್ರೀಡೆಗಳನ್ನು ಮುಂದೂಡುವ ನಿರ್ಧಾರವನ್ನು ನಾಲ್ಕು ತಿಂಗಳ ಮೊದಲೇ (ಮಾರ್ಚ್‌ 27ರಂದು) ಕೈಗೊಳ್ಳಲಾಗಿತ್ತು. ಅದಕ್ಕೆ 10 ದಿನ ಹಿಂದಿನವರೆಗೂ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮತ್ತು ಟೋಕಿಯೊ ಗೇಮ್ಸ್‌ ಸಂಘಟನಾ ಸಮಿತಿ ಒಂದೇ ಧ್ವನಿಯಲ್ಲಿ ಕ್ರೀಡೆಗಳನ್ನು ನಡೆಸಿಯೇ ನಡೆಸುವುದಾಗಿ ಜಿದ್ದಿಗೆ ಬಿದ್ದಂತೆ ಹೇಳಿದ್ದವು. ಆಗಿನ ಪ್ರಧಾನಿ ಶಿಂಜೊ ಅಬೆ ಕೂಡ ಕ್ರೀಡೆಗಳ ಆತಿಥ್ಯಕ್ಕೆ ಉತ್ಸುಕರಾಗಿದ್ದರು. ಆದರೆ ಕೊರೊನಾ ಸೋಂಕು ಕಬಂಧಬಾಹು ಚಾಚಿದ್ದರಿಂದ ಎಲ್ಲರ ಲೆಕ್ಕಾಚಾರಗಳು ಬುಡಮೇಲಾದವು.

ಬೇಡ ಎನ್ನುತ್ತಿರುವ ಜನರು

ಜುಲೈಯಲ್ಲಿ ಕ್ರೀಡೆಗಳ ಆಯೋಜನೆಗೆ ಈಗ ಸ್ವತಃ ಜಪಾನ್‌ ನಾಗರಿಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಒಲಿಂಪಿಕ್ಸ್‌ ಸದ್ಯ ಬೇಡವೆಂದು ಟೋಕಿಯೊದ ಪ್ರಭಾವಿ ವಕೀಲ ಕೆಂಜಿ ಉತ್ಸುಮೋಯಾ ಅವರು ಆರಂಭಿಸಿದ ಆನ್‌ಲೈನ್‌ ಅಭಿಯಾನಕ್ಕೆ ಶೇ 70 ರಿಂದ 80ರಷ್ಟು ಮಂದಿ ಬೆಂಬಲ ನೀಡಿದ್ದಾರೆ. ಒಲಿಂಪಿಕ್‌ ಕ್ರೀಡೆಗಳನ್ನು ಒಂದೂ ರದ್ದು ಮಾಡಬೇಕು, ಇಲ್ಲವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. ಒಂದೇ ದಿನ 50,000 ಮಂದಿ ಪ್ರತಿಕ್ರಿಯಿಸಿದ್ದಾರೆ. ಟೋಕಿಯೊ ಜನರ ಜೀವ ಮತ್ತು ಜೀವನಾಧಾರದ ದೃಷ್ಟಿಯಿಂದ ಒಲಿಂಪಿಕ್ಸ್‌ ರದ್ದುಮಾಡಬೇಕು ಎಂಬ ಶೀರ್ಷಿಕೆಯುಳ್ಳ ಕರೆಯನ್ನು ಈ ಅಭಿಯಾನ ಹೊಂದಿತ್ತು.

ಜಪಾನ್‌ನ ಒಂದು ಸಾವಿರ ವೈದ್ಯರು ಒಟ್ಟಾಗಿ ನಡೆಸಿದ ಸಮೀಕ್ಷೆಯಲ್ಲೂ ಶೇ 75ರಷ್ಟು ಮಂದಿ ಕ್ರೀಡೆಗಳನ್ನು ಮುಂದೂಡುವುದೇ ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ ಲಸಿಕೆ ಅಭಿಯಾನದಲ್ಲೂ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಲಸಿಕೆ ಕಂಡುಹಿಡಿಯುವ ಸಮರದಲ್ಲೂ ಜಪಾನ್‌ ಹೆಸರು ಕಾಣಿಸಿರಲಿಲ್ಲ. ಮೇ ತಿಂಗಳ ಮೊದಲ ಐದು ದಿನಗಳ ನಂತರ ಜಪಾನ್‌ನಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇಕಡಾ 3 ಕೂಡ ದಾಟಿಲ್ಲ.

ಇದಕ್ಕಿಂತ ಪ್ರಮುಖ ಮತ್ತು ಕಳವಳದ ವಿಷಯ ಎಂದರೆ ಜಪಾನ್‌ನಲ್ಲಿ ಕೆಲವು ದಿನಗಳಿಂದ ಸೋಂಕು ಪ್ರಮಾಣ ಜಾಸ್ತಿಯಾಗಿರುವುದು. ಮಾರ್ಚ್‌ ತಿಂಗಳ ಅವಧಿಯಲ್ಲಿ ಬಹುತೇಕ 1,500 ರಿಂದ 2,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು. ಮೇ ತಿಂಗಳ ಮೊದಲ ಆರು ದಿನ  ದಿನನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸರಾಸರಿ 4 ಸಾವಿರ ದಾಟಿದೆ. ಮೇ 1ರಂದು 5,589, ಮೇ 2ರಂದು 5,897, 3ರಂದು 4,475, 4ರಂದು 4,197, ಮೇ 5ರಂದು 4,068 ಪ್ರಕರಣಗಳು ವರದಿಯಾಗಿರುವುದನ್ನು ಅಲ್ಲಿನ ಮಾಧ್ಯಮಗಳು ಪ್ರಕಟಿಸಿವೆ. ಮೇ 6ರಂದು 4,813 ಹೊಸ ಪ್ರಕರಣಗಳು ವರದಿಯಾಗಿವೆ. ಟೋಕಿಯೊದಲ್ಲೂ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಒಸಾಕಾದಲ್ಲಿ ಸತತ ಆರು ದಿನಗಳಿಂದ ಹೊಸದಾಗಿ ಸೋಂಕಿಗೆ ಒಳಗಾಗಿರುವವರ ಸಂಖ್ಯೆ ನಿತ್ಯ ಸಾವಿರ ದಾಟುತ್ತಿದೆ.

ನಿರ್ಬಂಧ ವಿಸ್ತರಣೆ

ಕೊರೊನಾ ಸೋಂಕು ತಹಬಂದಿಗೆ ತರಲು ಜಪಾನ್‌ನ ಕೆಲವು ನಗರಗಳಲ್ಲಿ ತುರ್ತುಸ್ಥಿತಿ ಹೇರಲಾಗಿದೆ. ಒಲಿಂಪಿಕ್ಸ್‌ ನಡೆಯುವ ಟೋಕಿಯೊ ಅಲ್ಲದೇ ಒಸಾಕಾ ಇವುಗಳಲ್ಲಿ ಒಳಗೊಂಡಿವೆ. ಈ ತುರ್ತುಸ್ಥಿತಿಯನ್ನು ಮೇ 7ರಂದು ಮತ್ತಷ್ಟು ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಅಲ್ಲಿನ ಪ್ರಧಾನಿ ಯೊಶಿಹಿಡೆ ಸುಗಾ ತಿಳಿಸಿದ್ದಾರೆ. ಮೇ 11ರವರೆಗೆ ಅಲ್ಲಿ ತುರ್ತುಸ್ಥಿತಿ ಹೇರಿ ಈ ಹಿಂದೆ ಆದೇಶ ಹೊರಡಿಸಿದ್ದು, ಈಗ ಮತ್ತಷ್ಟು ನಗರಗಳಿಗೆ ವಿಸ್ತರಿಸಲಾಗಿದೆ.

ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಈ ಪ್ರಬಲ ವೈರಸ್‌ಗಳಿಗೆ ಅವು ಲೆಕ್ಕಕ್ಕೆ ಇಲ್ಲ ಎಂಬುದು ದೃಢವಾಗಿದೆ.  ಭಾರತದಲ್ಲಿ  ಐಪಿಎಲ್‌ ಬಯೋಬಬಲ್‌ ಒಡೆದುಹಾಕಿದ್ದು ಕಣ್ಣಮುಂದೆಯೇ ಇದೆ. ಯುರೋಪಿನ ಫುಟ್‌ಬಾಲ್‌ ಲೀಗ್‌ಗಳ ಮೇಲೂ ಅವು ದಾಳಿಯಿಟ್ಟಿವೆ.

‘ಒಲಿಂಪಿಕ್ಸ್‌ ನಡೆಸುವ ತನ್ನ ನಿರ್ಧಾರವನ್ನು ಜಪಾನ್‌ ಮರುಪರಿಶೀಲಿಸಬೇಕು. ಈಗಲೂ ದೊಡ್ಡ ಪ್ರಮಾಣದಲ್ಲಿ ಜನರು ಸೇರುವುದು ಸುರಕ್ಷಿತವಲ್ಲ’ ಎಂದು ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ ಕಳೆದ ತಿಂಗಳು ಎಚ್ಚರಿಕೆ ನೀಡಿದೆ.

ಹೊಸ ಅವತಾರದಲ್ಲಿರುವ ವೈರಾಣುಗಳ ನೀಡುತ್ತಿರುವ ಕಾಟದ ಮಧ್ಯೆ ಒಲಿಂಪಿಕ್ಸ್‌ ನಡೆಸುವುದು ತುಂಬಾ ಕಷ್ಟವಾದೀತು ಎಂದು ಟೋಕಿಯೊ ಮೆಡಿಕಲ್‌ ಅಸೋಸಿಯೇಷನ್‌ ಸಂಸ್ಥೆಯ ಅಧ್ಯಕ್ಷ ಹರುವೊ ಒಝಾಕಿ ಎಚ್ಚರಿಸಿದ್ದಾರೆ.

ಒಲಿಂಪಿಕ್ಸ್‌ಗೆ ಜಪಾನ್‌ ಇದುವರೆಗೆ ಅಧಿಕೃತವಾಗಿ ಮಾಡಿರುವ ಖರ್ಚು 15.4 ಶತಕೋಟಿ ಡಾಲರ್‌ (ಸುಮಾರು ₹1.12 ಲಕ್ಷ ಕೋಟಿ) ಆಗಿದೆ. ಹೀಗಾಗಿ ಮುಂದೂಡಿದಷ್ಟೂ ಖರ್ಚು ಜಾಸ್ತಿ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಗೂ ನಷ್ಟ. ಅದು ತನ್ನ ವರಮಾನದಲ್ಲಿ ಶೇ 70ಕ್ಕೂ ಹೆಚ್ಚು ಪಾಲನ್ನು ಟಿ.ವಿ. ಪ್ರಸಾರ ಹಕ್ಕುಗಳ ಮೂಲಕ ಬಾಚಿಕೊಳ್ಳುತ್ತದೆ.

ಹೀಗಾಗಿ ಐಒಸಿ ಅಧ್ಯಕ್ಷ ಥಾಮಸ್‌ ಬಾಚ್‌, ಟೋಕಿಯೊ ಕ್ರೀಡೆಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸೀಕೊ ಹಶಿಮೊಟೊ ಮತ್ತು ಪ್ರಧಾನಿ ಸುಗಾ ಅವರು ಈ ಬಾರಿ ಕ್ರೀಡೆಗಳನ್ನು ನಡೆಸಿಯೇ ಬಿಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ.

ಕ್ರೀಡೆಗಳ ವೇಳೆ 10,000 ಆರೋಗ್ಯ ಕಾರ್ಯಕರ್ತರ ಅವಶ್ಯಕತೆಯಿದೆ. ಜೊತೆಗೆ 500 ಮಂದಿ ಹೆಚ್ಚುವರಿ ಶುಶ್ರೂಷಕಿಯರು ಅಗತ್ಯ ಬೀಳಲಿದೆ. ಇದರ ಜೊತೆಗೆ 200 ಮಂದಿ ಕ್ರೀಡಾ ಔಷಧಿ ತಜ್ಞರು ಬೇಕಾಗಲಿದ್ದಾರೆ ಎಂದು ಸಂಘಟಕರು ಹೇಳಿದ್ದಾರೆ. ಆದರೆ ಇದಕ್ಕೆ ನರ್ಸ್‌ಗಳ ಒಕ್ಕೂಟ ಅಸಮಾಧಾನ ಸೂಚಿಸಿದೆ. ಈಗಾಗಲೇ ಸೋಂಕಿತರ ಆರೈಕೆಯಲ್ಲಿ ತೊಡಗಿ ಹೈರಾಣಾಗಿರುವ ಇವರು ‘ಜನರ ಜೀವನವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ’ ಎಂದು ಬೇಸರ ತೋಡಿಕೊಂಡಿದ್ದಾರೆ.

ಇದರ ಜೊತೆಗೆ ಅಂತರರಾಷ್ಟ್ರೀಯವಾಗಿ ಹಲವು ದೇಶಗಳು ಪೂರ್ಣಪ್ರಮಾಣದಲ್ಲಿ ಸಿದ್ಧತೆ ನಡೆಸಲೂ ತೊಂದರೆಯಾಗಿದೆ. ನಿರ್ಬಂಧದ ಮಧ್ಯೆ ಅಭ್ಯಾಸ ನಡೆಸುವ ಅನಿವಾರ್ಯತೆಯಲ್ಲಿ ಕ್ರೀಡಾಪಟುಗಳಿದ್ದಾರೆ. ವಿವಿಧ ಕ್ರೀಡೆಗಳ ಅರ್ಹತಾ ಟೂರ್ನಿಗಳು ಮುಂದಕ್ಕೆ ಹೋಗಿವೆ. ಕೆಲವು ರದ್ದಾಗಿವೆ. ಇನ್ನು ಕೆಲವು ಅನಿಶ್ಚಿತ ಸ್ಥಿತಿಯಲ್ಲಿವೆ.  ವಿದೇಶಕ್ಕೆ ಹೋಗಿ ಅಭ್ಯಾಸ ನಡೆಸೋಣ ಎಂದರೆ ವಿಮಾನಯಾನಕ್ಕೆ ನಿರ್ಬಂಧಗಳಿವೆ. ಲಸಿಕೆ ಅಭಿಯಾನ ಹಲವು ದೇಶಗಳಲ್ಲಿ ನಿಧಾನಗತಿಯಲ್ಲಿದೆ. ಕೆಲವು ಕ್ರೀಡಾಪಟುಗಳ ಮಾನಸಿಕ ಸ್ಥಿತಿಯ ಮೇಲೆ ಲಾಕ್‌ಡೌನ್‌ ಪರಿಣಾಮ ಬೀರಿದೆ. ಕೆಲವರು ಸ್ವತಃ ಸೋಂಕುಪೀಡಿತರಾಗಿದ್ದಾರೆ.

ಇಷ್ಟೆಲ್ಲಾ ತೊಡಕುಗಳ ಮಧ್ಯೆ ಒಲಿಂಪಿಕ್ಸ್‌ ನಡೆದರೆ ಅದು ದೊಡ್ಡ ಸಾಹಸವಾಗಲಿದೆ. ಇದೂ ಮುಂದಿನ ಕೆಲವು ದಿನಗಳಲ್ಲಿ ವೈರಸ್‌ ಅಟಾಟೋಪ ಹೇಗಿರುತ್ತದೆ ಎಂಬುದರ ಮೇಲೆ ಒಲಿಂಪಿಕ್ಸ್‌ ಆಯೋಜನೆಯ ಭವಿಷ್ಯ ನಿಂತಿದೆ. ಎರಡು ಮಹಾಯುದ್ಧಗಳನ್ನು ಬಿಟ್ಟರೆ ಒಲಿಂಪಿಕ್ಸ್‌ ನಿಯಮಿತ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತ ಬಂದಿದೆ. 1980ರಲ್ಲಿ ಶೀತಲ ಸಮರದಿಂದ ಅಮೆರಿಕ ನೇತೃತ್ವದ ದೇಶಗಳು ಮಾಸ್ಕೊ ಕ್ರೀಡೆಗಳಿಗೆ ಬಹಿಷ್ಕಾರ ಹಾಕಿದ್ದವು. 1984ರಲ್ಲಿ ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ಕ್ರೀಡೆಗಳು ನಡೆದಾಗ ರಷ್ಯ ನೇತೃತ್ವದ ಬಣದ ರಾಷ್ಟ್ರಗಳು ಭಾಗವಹಿಸಲಿಲ್ಲ. ಆದರೂ ಕ್ರೀಡೆಗಳು ಸಾಂಗವಾಗಿ ನಡೆದಿದ್ದವು. ಕೊರೊನಾ ಸೋಂಕಿನಿಂದ ಕಳೆದ ವರ್ಷ ಈ ಸರಪಣಿ ತುಂಡಾಗಿತ್ತು. ಈಗ ಮತ್ತೆ ಕ್ರೀಡೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳುವ ಸಮಯ ಸಮೀಪಿಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು