ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಹಾಕಿ ‘ಮಾಸ್ಟರ್’ ಆಗುವ ಬಯಕೆ

Last Updated 1 ಡಿಸೆಂಬರ್ 2020, 20:30 IST
ಅಕ್ಷರ ಗಾತ್ರ

ದೇಹಕ್ಕೆ ವಯಸ್ಸಾದರೂ ಜೀವನೋತ್ಸಾಹಕ್ಕೆ ಮುಪ್ಪಿಲ್ಲ ಎಂಬುದನ್ನು ಸಾಬೀತು ಮಾಡುವಂತಿದೆ, ‘ಮಾಸ್ಟರ್ಸ್ ಹಾಕಿ‘ಯಲ್ಲಿ ಪಾಲ್ಗೊಳ್ಳುವ ಹಿರಿಯ ಜೀವಗಳ ಸಂಭ್ರಮ. ಪ್ರತಿ ವರ್ಷ ನಡೆಯುವ ಮಾಸ್ಟರ್ಸ್ ವಿಶ್ವಕಪ್ ಟೂರ್ನಿ ಮತ್ತು ಇತರ ಸ್ಪರ್ಧೆಗಳಲ್ಲಿ ವಿವಿಧ ದೇಶಗಳ ಹತ್ತಾರು ತಂಡಗಳು ಪಾಲ್ಗೊಳ್ಳುತ್ತವೆ. ಈಗ ಸ್ಪರ್ಧಾಕಣದಲ್ಲಿ ಭಾರತವೂ ಸೇರಿಕೊಂಡಿದೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ‘ಹಾಕಿ ಮಾಸ್ಟರ್‌’ಗಳಾಗಲು ರಾಷ್ಟ್ರೀಯ ತಂಡದ ಮಾಜಿ ಆಟಗಾರರನ್ನೂ ಒಳಗೊಂಡಿರುವ ಭಾರತ ತಂಡ ಸಜ್ಜಾಗುತ್ತಿದೆ. ಬೆಂಗಳೂರನ್ನು ಹಿರಿಯರ ಚಟುವಟಿಕೆಯ ಕೇಂದ್ರವಾಗಿಸುವ ಪ್ರಯತ್ನ ಬಿರುಸು ಪಡೆದುಕೊಂಡಿದೆ.

38 ದೇಶಗಳಲ್ಲಿ ಮಾಸ್ಟರ್ಸ್ ಹಾಕಿ ಸಮಿತಿಗಳು ಅಸ್ತಿತ್ವದಲ್ಲಿವೆ. ಮಾಸ್ಟರ್ಸ್ ಟೂರ್ನಿಯಲ್ಲಿ ಆಡುವುದು ಭಾರತದ ಆಟಗಾರರ ಕನಸಾಗಿಯೇ ಉಳಿದಿತ್ತು. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ‘ಮಾಸ್ಟರ್ಸ್ ಹಾಕಿ‘ಯ ಘಟಕ ಭಾರತದಲ್ಲೂ ಉದಯಿಸಿದ್ದರಿಂದ ಅವರಲ್ಲಿ ಹೊಸಬೆಳಕಿನ ಕಿರಣ ಮೂಡಿತು. ಹಾಕಿ ಇಂಡಿಯಾ ರಚಿಸಿದ ಸಮಿತಿಯ ಮುಖ್ಯಸ್ಥರಾಗಿ ಹರ್ಬಿಂದರ್ ಸಿಂಗ್ ನೇಮಕವಾಗಿದ್ದಾರೆ. ಸಂಚಾಲಕರಾಗಿ ಆರ್‌.ಪಿ.ಸಿಂಗ್, ಸದಸ್ಯರಾಗಿ ಬಿ.ಪಿ.ಗೋವಿಂದ, ಜಗ್ಬೀರ್ ಸಿಂಗ್‌, ಸುರಿಂದರ್ ಕೌರ್‌ ಮತ್ತು ಎಂ. ರೇಣುಕಾ ಲಕ್ಷ್ಮಿ ಮತ್ತು ಕರ್ನಾಟಕದ ಎ.ಬಿ.ಸುಬ್ಬಯ್ಯ ನೇಮಕಗೊಂಡಿದ್ದಾರೆ. ಈಗ, ಕೋವಿಡ್‌–19 ಹಾವಳಿ ಕಡಿಮೆಯಾಗುತ್ತಿದ್ದಂತೆ ಸಮಿತಿಯಲ್ಲಿ ಉತ್ಸಾಹ ಗರಿಗೆದರಿದೆ.

‘ಸುಮಾರು 17 ರಾಜ್ಯಗಳಲ್ಲಿ ಚಟುವಟಿಕೆ ಆರಂಭವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಸಮಿತಿ ರಚಿಸುವ ಪ್ರಯತ್ನ ನಡೆಯುತ್ತಿದೆ. ಕೋವಿಡ್ ಕಾರಣದಿಂದಾಗಿ ನಿರೀಕ್ಷಿತ ಪ್ರಗತಿ ಸಾಧಿಸಲು ಆಗಲಿಲ್ಲ ನಿಜ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಉತ್ಸಾಹದಿಂದ ಹೆಚ್ಚು ಕಾರ್ಯಪ್ರವೃತ್ತರಾಗಲಿದ್ದೇವೆ’ ಎಂದು ರಾಷ್ಟ್ರೀಯ ತಂಡದ ಮಾಜಿ ನಾಯಕರೂ ಆಗಿದ್ದ ಸಂಚಾಲಕ ಆರ್‌.ಪಿ.ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣದ ಚಟುವಟಿಕೆಗೆ ಕರ್ನಾಟಕ ಹೆಬ್ಬಾಗಿಲು

ಕರ್ನಾಟಕದಲ್ಲಿ ಈಗಾಗಲೇ ‘ಹಾಕಿ ಕರ್ನಾಟಕ ಮಾಸ್ಟರ್ಸ್ ಕಮಿಟಿ’ ಎಂಬ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಎ.ಬಿ.ಸುಬ್ಬಯ್ಯ, ಸಮಿತಿಯ ಮುಖ್ಯಸ್ಥರಾಗಿದ್ದು ಜಮುನಾ ಅನೂಪ್ ಸಂಚಾಲಕರಾಗಿದ್ದಾರೆ. ಹೀರಾ ಶೆಟ್ಟಿ, ಚಂಪಾ ದಿಲೀಪ್‌, ಪೂಣಚ್ಚ ಕೆ.ಕೆ, ಬಿ.ಜೆ.ಕಾರ್ಯಪ್ಪ ಮತ್ತು ರಿಕಿ ಗಣಪತಿ ಸದಸ್ಯರಾಗಿದ್ದಾರೆ.

‘ದಕ್ಷಿಣ ಭಾರತದಲ್ಲಿ ಹಿರಿಯರ ಹಾಕಿಗೆ ಕರ್ನಾಟಕವೇ ಹೆಬ್ಬಾಗಿಲು ಆಗಲಿದೆ. ಕೋವಿಡ್‌–19 ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಚಟುವಟಿಕೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಜನವರಿ ಆರಂಭದಲ್ಲೇ ಟೂರ್ನಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಸುಬ್ಬಯ್ಯ ತಿಳಿಸಿದರು.

‘ಸದ್ಯ ಹಿರಿಯ ಆಟಗಾರರ ಮಾಹಿತಿ ಕಲೆ ಹಾಕಲಾಗುತ್ತಿದೆ. ರಾಷ್ಟ್ರೀಯ, ರಾಜ್ಯ ತಂಡಗಳು ಮತ್ತು ವಿವಿಧ ಕಂಪನಿಗಳ ಪರವಾಗಿ ಆಡಿದ ಸಾಕಷ್ಟು ಮಂದಿ ಆಟಗಾರರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಪೈಕಿ ಈಗಲೂ ಅಂಗಣಕ್ಕೆ ಇಳಿಯುವವರನ್ನು ಪತ್ತೆ ಮಾಡಲಾಗುತ್ತಿದೆ. ಕ್ರೀಡಾ ಚಟುವಟಿಕೆಯಿಂದ ಸಂಪೂರ್ಣ ದೂರ ಉಳಿದವರು ಮತ್ತೆ ಆಡುವುದು ಕಷ್ಟಸಾಧ್ಯ, ಆದ್ದರಿಂದ ಅವರನ್ನು ಪರಿಗಣಿಸುವುದಿಲ್ಲ‘ ಎಂದು ಸುಬ್ಬಯ್ಯ ವಿವರಿಸಿದರು.

‘ವಿಭಾಗೀಯ ಮಟ್ಟದಲ್ಲಿ ಪ್ರದರ್ಶನ ಪಂದ್ಯಗಳನ್ನು ಆಯೋಜಿಸಿ ಕೊನೆಯಲ್ಲಿ ‘ಬೆಂಗಳೂರು ಚಾಂಪಿಯನ್‌ಷಿಪ್‌’ ಹಮ್ಮಿಕೊಳ್ಳುವ ಯೋಜನೆ ಇದೆ. ಮೂರು ತಿಂಗಳ ಹಿಂದೆಯೇ ಆಟಗಾರರ ಮಾಹಿತಿ ಕೋರಲಾಗಿದೆ. ಕರ್ನಾಟಕದಲ್ಲಿ ಭದ್ರ ಬುನಾದಿ ಹಾಕಿದ ನಂತರ ದಕ್ಷಿಣ ಭಾರತದ ಇತರ ಕಡೆಗಳಲ್ಲೂ ಮಾಸ್ಟರ್ಸ್ ಹಾಕಿಯನ್ನು ಬೆಳೆಸಲಾಗುವುದು. ವಿಶ್ವಕಪ್‌ ಟೂರ್ನಿಗಾಗಿ ಸಮರ್ಥ, ಉತ್ಸಾಹಿ ತಂಡ ರಚಿಸುವುದು ಸಮಿತಿಯ ಉದ್ದೇಶ’ ಎಂದು ಅವರು ಹೇಳಿದರು.

ಮುಂದಿನ ವರ್ಷ ವಿಶ್ವಕಪ್‌ ಟೂರ್ನಿ

ಅಂತರರಾಷ್ಟೀಯ ಹಾಕಿ ಫೆಡರೇಷನ್ ಮಾನ್ಯತೆ ನೀಡಿರುವ ವಿಶ್ವ ಮಾಸ್ಟರ್ಸ್ ಹಾಕಿ ಸಂಸ್ಥೆಯು ಜಪಾನ್ ಹಾಕಿ ಸಂಸ್ಥೆಯ ಸಹಯೋಗದಲ್ಲಿ ಮುಂದಿನ ವರ್ಷದ ನವೆಂಬರ್ ಏಳರಿಂದ 17ರ ವರೆಗೆ ಟೋಕಿಯೊದಲ್ಲಿ ವಿಶ್ವಕಪ್ ಆಯೋಜಿಸಲಿದೆ. ಈ ವರ್ಷದ ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಒಂದು ವರ್ಷದ ಅವಧಿಗೆ ಮುಂದೂಡಲು ನಿರ್ಧರಿಸಲಾಗಿದೆ. ಮೂರು ಕ್ರೀಡಾಂಗಣಗಳಲ್ಲಿ ನಡೆಯಲಿರುವ ಪಂದ್ಯಗಳಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT