ಮಂಗಳವಾರ, ಫೆಬ್ರವರಿ 18, 2020
18 °C
ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 12 ಜಯದೊಂದಿಗೆ ಅಜೇಯ ಓಟ ಮುಂದುವರಿಸಿರುವ ಬಾಕ್ಸರ್‌

ಒಲಿಂಪಿಕ್ ರಿಂಗ್‌ನಲ್ಲಿ ಸೆಣಸಲಿದ್ದಾರೆ ವೃತ್ತಿಪರ ಬಾಕ್ಸಿಂಗ್ ವೀರ ವಿಜೇಂದರ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೇಚೂರ್‌ ಬಾಕ್ಸಿಂಗ್ ತ್ಯಜಿಸಿ ವೃತ್ತಿಪರ ಬಾಕ್ಸಿಂಗ್‌ನತ್ತ ಮುಖ ಮಾಡಿದ್ದ ಬಾಕ್ಸರ್ ವಿಜೇಂದರ್‌ ಸಿಂಗ್‌ ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿಜೇಂದರ್‌, ಟೋಕಿಯೊ ಒಲಿಂಪಿಕ್‌ನಲ್ಲಿ ಭಾಗವಹಿಸುವ ಸಂಬಂಧ ಮಾತನಾಡಿದ್ದಾರೆ. ಅವರು, ‘ಖಂಡಿತಾ, ಟೋಕಿಯೊ ಒಲಿಂಪಿಕ್‌ನಲ್ಲಿ ಕಣಕ್ಕಿಳಿಯುವ ಯೋಜನೆಯಲ್ಲಿದ್ದೇನೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯದ ಓಟ ಮುಂದುವರಿಸಿದ ವಿಜೇಂದರ್‌

ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಒಪ್ಪಂದಕ್ಕೆ ಬದ್ಧವಾಗಿರುವುದು ಹಾಗೂ ಅದರೊಟ್ಟಿಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮುಂದುವರಿಯುವುದು ಸುಲಭದ ಹಾದಿಯಲ್ಲ. ಆ ಕುರಿತು ವಿಜೇಂದರ್‌, ‘ಕ್ರೀಡೆಯಲ್ಲಿ ಯಾವುದೂ ಸುಲಭದ್ದಲ್ಲ. ಇಂತಹ ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ನಾನು ಎದುರಿಸಿದ್ದೇನೆ’ ಎಂದಿದ್ದಾರೆ.

‘ಬಿಎಫ್‌ಐ ಜೊತೆಗೆ ನೇರ ಮಾತುಕತೆ ನಡೆಸುವ ವಿಶ್ವಾಸದಲ್ಲಿದ್ದೇನೆ. ಒಲಿಂಪಿಕ್‌ನಲ್ಲಿ ಅರ್ಹತೆ ಪಡೆಯಲು ಟ್ರಯಲ್ಸ್‌ನಲ್ಲಿ ಭಾಗವಹಿಸಬೇಕು ಎನ್ನುವುದಾದರೆ ಅದಕ್ಕೇನು ಅಡ್ಡಿಯಿಲ್ಲ. ಭಾಗವಹಿಸುತ್ತೇನೆ. ಯಾರೊಡನೆ ಸೆಣಸಬೇಕು ಹೇಳಲಿ. ಅವರೊಂದಿಗೆ ಹೋರಾಡುತ್ತೇನೆ. ಆಯ್ಕೆಯಾದರೆ ಮುನ್ನಡೆಯುತ್ತೇನೆ. ಇಲ್ಲವಾದರೆ ಮರಳುತ್ತೇನೆ. ಒಟ್ಟಿನಲ್ಲಿ ಒಲಿಂಪಿಕ್‌ನಲ್ಲಿ ದೇಶದ ಬಾವುಟ ಮೇಲೇರಿಸಬೇಕು ಎಂಬುದು ನನ್ನಾಸೆ. ಅದಕ್ಕಾಗಿ ಪ್ರಯತ್ನಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. 

2012ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ವಿಜೇಂದರ್‌, 2015ರಲ್ಲಿ ವೃತ್ತಿಪರ ಬಾಕ್ಸಿಂಗ್‌ನತ್ತ ನಡೆದಿದ್ದರು. 2016ರ ರಿಯೊ ಒಲಿಂಪಿಕ್‌ಗೂ ಮುನ್ನ, ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲು ವೃತ್ತಿಪರ ಬಾಕ್ಸರ್‌ಗಳಿಗೂ ಅವಕಾಶ ನೀಡಲಾಗಿತ್ತು. ಆದರೆ, ಅಂತರರಾಷ್ಟ್ರೀಯ ಬಾಕ್ಸಿಂಗ್‌ ಒಕ್ಕೂಟ (ಎಐಬಿಎ) ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ತಡವಾಗಿ ಈ ನಿರ್ಧಾರ ಕೈಗೊಂಡಿದ್ದರಿಂದ, ಕೇವಲ ಮೂವರು ವೃತ್ತಿಪರ ಬಾಕ್ಸರ್‌ಗಳಷ್ಟೇ ರಿಯೊ ಒಲಿಂಪಿಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಅಂದಹಾಗೆ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಹೋರಾಟ ನಡೆಸಿರುವ 36 ವರ್ಷದ ವಿಜೇಂದರ್‌ ಎಲ್ಲ ಪಂದ್ಯಗಳನ್ನೂ ಗೆದ್ದುಕೊಂಡಿದ್ದಾರೆ.

ಅಮೆರಿಕದ ಬಾಬ್‌ ಆರಮ್‌ ಅವರ ಟಾಪ್‌ ರ‍್ಯಾಂಕ್‌ ಪ್ರೊಮೋಷನ್ಸ್‌ ಹಾಗೂ ಭಾರತದ ಐಒಎಸ್‌ ಬಾಕ್ಸಿಂಗ್‌ ಕ್ಲಬ್‌ಗಳನ್ನು ಪ್ರತಿನಿಧಿಸುವ ವಿಜೇಂದರ್‌ ಅವರು ಮುಂದಿನ ವರ್ಷ ವೃತ್ತಿಪರ ಬಾಕ್ಸಿಂಗ್‌ನ ವಿಶ್ವ ಕಿರೀಟಕ್ಕಾಗಿ ಸೆಣಸುವ ಸಾಧ್ಯತೆ ಇದೆ.

ಉದ್ದೀಪನ ಮದ್ದು ಸೇವನೆ ರಷ್ಯಾಗೆ ನಿಷೇಧ ಉತ್ತಮ ನಿರ್ಧಾರ: ಸಿಂಗ್
ಉದ್ದೀಪನ ಮದ್ದು ಸೇವನೆ ನಿಯಮಗಳನ್ನು ನಿರ್ಲಕ್ಷಿಸಿದ ಕಾರಣ ಒಲಿಂಪಿಕ್‌ ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಾಲ್ಕು ವರ್ಷಗಳ ಕಾಲ ಭಾಗವಹಿಸದಂತೆ ರಷ್ಯಾಗೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜೇಂದರ್‌ ಇದೊಂದು ಉತ್ತಮ ನಿರ್ಧಾರ ಎಂದಿದ್ದಾರೆ.

ಇದನ್ನೂ ಓದಿ: ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣನೆ: ರಷ್ಯಾಗೆ ನಾಲ್ಕು ವರ್ಷ ನಿಷೇಧ

‘ರಷ್ಯಾವನ್ನು ಒಲಿಂಪಿಕ್‌ನಿಂದ ನಿಷೇಧಿಸಿರುವುದು ಉತ್ತಮ ನಿರ್ಧಾರ. ಇಂತಹ (ಉದ್ದಿಪನ ಮದ್ದುಸೇವನೆ) ಪ್ರಕರಣಗಳಲ್ಲಿ ಭಾಗವಹಿಸುವವರಿಗೆ ಖಂಡಿತ ಶಿಕ್ಷೆಯಾಗಬೇಕು. ಸಲಹಾ ಸೂತ್ರ ಅಥವಾ ನಿಯಮಾವಳಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ ಎಂಬುದನ್ನು ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ಸ್ಪಷ್ಟಪಡಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು