ಬುಧವಾರ, ಆಗಸ್ಟ್ 4, 2021
23 °C

ಆಟಗಾರನಾಗಿ ಕಂಡ ಕನಸು ಕೋಚ್‌ ಆಗಿ ಕೈಗೂಡಿದಾಗ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕದ ವಾಲಿಬಾಲ್‌ ಪ್ರಿಯರ ದಶಕಗಳ ಕೊರಗು ಹೊಸ ವರ್ಷದ ಆರಂಭದಲ್ಲಿ ದೂರವಾಗಿದೆ. ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡ ಪ್ರಶಸ್ತಿಗೆ ಮುತ್ತಿಕ್ಕಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

1952ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆಗಿನ ಮೈಸೂರು ರಾಜ್ಯ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿತ್ತು. ಅದಾಗಿ 44 ವರ್ಷಗಳ ನಂತರ (1996) ಕರ್ನಾಟಕ ತಂಡ ಕಂಚಿನ ಪದಕ ಜಯಿಸಿತ್ತು. ‘ಸಿಟಿ ಆಫ್‌ ಜಾಯ್‌’ ಎಂದೇ ಪ್ರಸಿದ್ಧವಾಗಿರುವ ಕೋಲ್ಕತ್ತದಲ್ಲಿ ಆ ಸಾಧನೆ ಮೂಡಿಬಂದಿತ್ತು. 18 ವರ್ಷಗಳ ಹಿಂದೆ ರಾಯಪುರದಲ್ಲಿ ಆಯೋಜನೆಯಾಗಿದ್ದ (2001) ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಸೆಮಿಫೈನಲ್‌ ಪ್ರವೇಶಿಸಿತ್ತು. ಆಗ ತಂಡದಲ್ಲಿದ್ದ ಕೆ.ಆರ್‌. ಲಕ್ಷ್ಮೀನಾರಾಯಣ್‌ ಅವರು ಈ ಬಾರಿ ರಾಜ್ಯ ತಂಡವನ್ನು ತರಬೇತುಗೊಳಿಸಿದ್ದರು. ಅವರ ಗರಡಿಯಲ್ಲಿ ಪಳಗಿದ್ದ ಎ.ಕಾರ್ತಿಕ್‌ ಬಳಗ ಟ್ರೋಫಿಗೆ ಮುತ್ತಿಕ್ಕಿದೆ. ಈ ಸಾಧನೆಯ ಕುರಿತು ತಂಡದ ಮುಖ್ಯ ಕೋಚ್‌ ಹಾಗೂ ಪೋಸ್ಟಲ್‌ ತಂಡದ ಕ್ರೀಡಾ ಅಧಿಕಾರಿಯೂ ಆಗಿರುವ ಲಕ್ಷ್ಮೀನಾರಾಯಣ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ದಶಕಗಳ ನಂತರ ರಾಜ್ಯ ತಂಡ ಟ್ರೋಫಿ ಗೆದ್ದಿದೆ. ಈ ಸಾಧನೆ ಬಗ್ಗೆ ಹೇಳಿ?
ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ತಂಡ ಪ್ರಶಸ್ತಿ ಜಯಿಸಬೇಕೆಂಬುದು ಎಲ್ಲರ ಹೆಬ್ಬಯಕೆಯಾಗಿತ್ತು. ಹಿಂದೆ ನಾನು ಎಂಟು ಸಲ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದೆ. ಆಗ ಚಿನ್ನ ಜಯಿಸುವ ಕನಸು ಕೈಗೂಡಿರಲಿಲ್ಲ. ಕೋಚ್‌ ಆದ ನಂತರ ಆಸೆ ಈಡೇರಿದೆ. ಇದರಿಂದ ತುಂಬಾ ಆನಂದವಾಗುತ್ತಿದೆ.

2001ರಲ್ಲಿ ಕರ್ನಾಟಕ ಸೆಮಿಫೈನಲ್‌ ಪ್ರವೇಶಿಸಿ ರೈಲ್ವೇಸ್‌ ಎದುರು ನಿರಾಸೆ ಕಂಡಿತ್ತು. ಆಗ ನಾನೂ ತಂಡದಲ್ಲಿದ್ದೆ. ಆ ನೋವು ಎಡಬಿಡದೆ ಕಾಡು ತ್ತಿತ್ತು. ಈ ಸಲ ತಂಡವನ್ನು ಬಲಪಡಿಸಲು ಸಾಕಷ್ಟು ಶ್ರಮಿಸಿದ್ದೆ. ಅದಕ್ಕೆ ಫಲ ಸಿಕ್ಕಿದೆ.

* ಚಾಂಪಿಯನ್‌ಷಿಪ್‌ಗೂ ಮುನ್ನ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಿರಿ?
ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಕಾಲಾವಕಾಶವೇ ಇರಲಿಲ್ಲ. ಭಾರತ ವಾಲಿಬಾಲ್‌ ಫೆಡರೇಷನ್‌, ಕರ್ನಾಟಕ ವಾಲಿಬಾಲ್‌ ಸಂಸ್ಥೆಯನ್ನು (ಕೆವಿಎ) ಅಮಾನತು ಮಾಡಿತ್ತು. ಅಡ್‌ಹಾಕ್‌ ಸಮಿತಿ ರಚನೆಯಾದ ನಂತರ ಕೊನೆಯ ಕ್ಷಣದಲ್ಲಿ ತಂಡವನ್ನು ಚಾಂಪಿಯನ್‌ಷಿಪ್‌ಗೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಯಿತು. ಹೀಗಾಗಿ ತರಾತುರಿಯಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸಿ ತಂಡವನ್ನು ಅಂತಿಮಗೊಳಿಸಿದೆವು. ಚಾಂಪಿಯನ್‌ಷಿಪ್‌ ಆರಂಭಕ್ಕೆ ಕೆಲ ದಿನಗಳು ಬಾಕಿ ಇದ್ದಾಗ ಕೋಲಾರದಲ್ಲಿ ಜಿಲ್ಲಾಮಟ್ಟದ ಚಾಂಪಿಯನ್‌ಷಿಪ್‌ ನಡೆಯುತ್ತಿತ್ತು. ನಾನು ಕೋಲಾರ ಜಿಲ್ಲಾ ವಾಲಿಬಾಲ್‌ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರಿಂದ ತಂಡವನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಪ್ರದರ್ಶನ ಪಂದ್ಯಗಳನ್ನು ಆಡಿಸಿದೆ. 

* ಹಿಂದಿನ ವರ್ಷ ರಾಜ್ಯ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿತ್ತಲ್ಲವೇ?
ಹೋದ ವರ್ಷ ‘ಸಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದೆವು. ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ ಎಂಟು ತಂಡಗಳು ಇರುತ್ತವೆ. ಇವು ಗುಂಪಿನಲ್ಲಿ ಒಂದು ಪಂದ್ಯ ಗೆದ್ದರೂ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಡುತ್ತವೆ. ಆದರೆ  ಸಿ, ಡಿ, ಇ ಮತ್ತು ಎಫ್‌ ಗುಂಪುಗಳಲ್ಲಿ ಸ್ಥಾನ ಪಡೆದ ತಂಡಗಳು ಆಯಾ ಗುಂಪುಗಳಲ್ಲಿ ಅಗ್ರಸ್ಥಾನ ಗಳಿಸಬೇಕು. ಬಳಿಕ ಇನ್ನೊಂದು ಗುಂಪಿನ ವಿಜೇತ ತಂಡದ ಜೊತೆ ‘ಪ್ಲೇ ಆಫ್‌’ ಪಂದ್ಯ ಆಡಬೇಕು. ಅದರಲ್ಲಿ ಗೆದ್ದ ನಂತರ ‘ಎ’ ಮತ್ತು ‘ಬಿ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ತಂಡಗಳ ಎದುರು ಪ್ರೀ ಕ್ವಾರ್ಟರ್‌ನಲ್ಲಿ ಪೈಪೋಟಿ ನಡೆಸಬೇಕು. ಹೋದ ವರ್ಷ ನಾವು ಈ ಎಲ್ಲಾ ಸವಾಲುಗಳನ್ನು ಮೀರಿ ಎಂಟರ ಘಟ್ಟ ಪ್ರವೇಶಿಸಿದ್ದೆವು. 

* ಈ ಬಾರಿ ತಂಡದ ಪ್ರಶಸ್ತಿಯ ಹಾದಿ ಹೇಗಿತ್ತು?
ಈ ಸಲ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದೆವು. ಚಾಂಪಿಯನ್‌ಷಿಪ್‌ಗೂ ಮುನ್ನ ಆಟಗಾರರು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿರಲಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೇರಳದ ಎದುರು ಸೋತೆವು. ಆ ಸೋಲಿನ ಬಗ್ಗೆ ಯೋಚಿಸುತ್ತಾ ಕೂರುವಷ್ಟು ಸಮಯ ನಮಗಿರಲಿಲ್ಲ. ನಂತರದ ಪಂದ್ಯಗಳಲ್ಲಿ ಪಂಜಾಬ್‌ ಮತ್ತು ತಮಿಳುನಾಡಿನಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿತ್ತು. ಮಹತ್ವದ್ದೆನಿಸಿದ್ದ ಆ ಎರಡು ಹಣಾಹಣಿಗಳಲ್ಲೂ ನಮ್ಮ ಆಟಗಾರರು ಶ್ರೇಷ್ಠ ಸಾಮರ್ಥ್ಯ ತೋರಿದರು. ಹೀಗಾಗಿ ಕ್ವಾರ್ಟರ್‌ ಫೈನಲ್‌ ಹಾದಿ ಸುಗಮವಾಯಿತು. ಎಂಟರ ಘಟ್ಟದಲ್ಲಿ ಹರಿಯಾಣವನ್ನು ಮಣಿಸಿದ್ದು ವಿಶ್ವಾಸ ಹೆಚ್ಚುವಂತೆ ಮಾಡಿತ್ತು.

ಸೆಮಿಫೈನಲ್‌ನಲ್ಲಿ ಮತ್ತೆ ಪಂಜಾಬ್‌ ಎದುರು ಸೆಣಸಬೇಕಿತ್ತು. ಫೈನಲ್‌ನಲ್ಲಿ ತಮಿಳುನಾಡು ತಂಡದ ಸವಾಲು ಎದುರಾಯಿತು. ಗುಂಪು ಹಂತದಲ್ಲೇ ಈ ಎರಡು ತಂಡಗಳನ್ನು ಸೋಲಿಸಿದ್ದರಿಂದ ಆಟಗಾರರ ಮನೋಬಲ ಹೆಚ್ಚಿತ್ತು. ಕೆಲ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಿಳಿದೆವು. ಛಲದಿಂದ ಹೋರಾಡಿ ಗೆದ್ದೆವು.

* ಪಂದ್ಯಕ್ಕೂ ಮುನ್ನ ನೀವು ಹೆಣೆಯುತ್ತಿದ್ದ ಯೋಜನೆಗಳೇನು?
ಪಂದ್ಯ ಮುಗಿದ ಬಳಿಕ ಯಾರೂ ಕೊಠಡಿಗಳಿಗೆ ಹೋಗಿ ವಿರಮಿಸುತ್ತಿರಲಿಲ್ಲ. ಕ್ರೀಡಾಂಗಣದಲ್ಲಿ ಕುಳಿತು ಎದುರಾಳಿ ತಂಡಗಳ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆವು. ಯಾರು ಹೇಗೆ ಆಡುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆವು. ಅದರ ಆಧಾರದಲ್ಲಿ ಯೋಜನೆ ರೂಪಿಸುತ್ತಿದ್ದೆವು. ಚಾಂಪಿಯನ್‌ಷಿಪ್‌ನ ಅವಧಿಯಲ್ಲಿ ಯಾರೂ ಮೊಬೈಲ್‌ ಬಳಸಬೇಡಿ, ನಿಮ್ಮ ಗಮನ ವಾಲಿಬಾಲ್‌ ಮೇಲೆ ಮಾತ್ರ ಇರಲಿ. ರಾತ್ರಿ ಆದಷ್ಟು ಬೇಗ ಮಲಗಿ. ಈ ಸಲ ಟ್ರೋಫಿ ಗೆಲ್ಲಲು ಉತ್ತಮ ಅವಕಾಶ ಇದೆ. ಇದನ್ನು ಕೈಚೆಲ್ಲಬೇಡಿ ಎಂದು ಪ್ರತಿ ದಿನವೂ ಆಟಗಾರರಿಗೆ ತಿಳಿಹೇಳುತ್ತಿದ್ದೆವು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.  

* ಅಡ್‌ಹಾಕ್‌ ಸಮಿತಿಯ ಬೆಂಬಲದ ಬಗ್ಗೆ ಹೇಳಿ?
ಸಮಿತಿಯ ಮುಖ್ಯಸ್ಥರಾದ ರಾಮಚಂದ್ರಮೂರ್ತಿ, ತಂಡದ ಸಂಪೂರ್ಣ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಹೀಗಾಗಿ   ಪಾರದರ್ಶಕವಾಗಿ ತಂಡವನ್ನು ಆಯ್ಕೆಮಾಡಲು ಸಾಧ್ಯವಾಯಿತು. ನನ್ನ ಜೊತೆ ಇದ್ದ ಸಹಾಯಕ ಕೋಚ್‌ಗಳು ಉತ್ತಮವಾಗಿ ಸ್ಪಂದಿಸಿದರು. ಚೆನ್ನೈಯಲ್ಲಿ ಇದ್ದ ಅಷ್ಟು ದಿನವೂ ರಾಮಚಂದ್ರಮೂರ್ತಿ ಅವರ ಮಗ ಹರ್ಷಾ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು.

* ಪ್ರೊ ವಾಲಿಬಾಲ್‌ ಲೀಗ್‌ ಬಗ್ಗೆ ಹೇಳಿ?
ಭಾರತ ವಾಲಿಬಾಲ್‌ ಫೆಡರೇಷನ್‌ ಈ ಸಲ ಪ್ರೊ ವಾಲಿಬಾಲ್‌ ಲೀಗ್‌ ನಡೆಸಲು ನಿರ್ಧರಿಸಿದೆ. ಇದು ಸ್ವಾಗತಾರ್ಹ. ಇದರಿಂದ ದೇಶದ ಎಲ್ಲಾ ಭಾಗಗಳಿಗೂ ಕ್ರೀಡೆಯ ಕಂಪು ಪಸರಿಸಬಹುದು. ಈ ಲೀಗ್‌ನಲ್ಲಿ ನಮ್ಮ ರಾಜ್ಯದ ಎ.ಕಾರ್ತಿಕ್‌, ಗಣೇಶ್‌ ಗೌಡ, ವಿನಾಯಕ, ರಾಯ್‌ಸನ್‌ (ನಾಲ್ವರೂ ಪೋಸ್ಟಲ್‌), ಅಶ್ವಲ್‌ ರೈ ಮತ್ತು ಹರಿಪ್ರಸಾದ್‌ ಆಡುತ್ತಿದ್ದಾರೆ ಎಂಬುದು ಖುಷಿಯ ಸಂಗತಿ.

* ಲೀಗ್‌ನಲ್ಲಿ ಆಡುವ ಯು ಮುಂಬಾ ತಂಡದ ಕೋಚ್‌ ಮತ್ತು ಸಲಹೆಗಾರರಾಗಿ ನೇಮಕಗೊಂಡಿದ್ದೀರಿ. ಈ ಬಗ್ಗೆ ಹೇಳಿ?
ಈ ಜವಾಬ್ದಾರಿ ಸಿಕ್ಕಿದ್ದು ಖುಷಿಯಿಂದ ಬೀಗುವಂತೆ ಮಾಡಿದೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. 

* ಕರ್ನಾಟಕದಲ್ಲಿ ವಾಲಿಬಾಲ್‌ ಬೆಳವಣಿಗೆ ಹೇಗಿದೆ?
ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಹಿಂದೆ ಕೆವಿಎ ಆಡಳಿತ ನಡೆಸಿದವರು ಕ್ರೀಡೆಯ ಬೆಳವಣಿಗೆಗಿಂತಲೂ ಸ್ವ ಹಿತಾಸಕ್ತಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ಪದೇ ಪದೇ ಕೋಚ್‌ಗಳನ್ನು ಬದಲಾವಣೆ ಮಾಡುತ್ತಿದ್ದರು. ಆಯ್ಕೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಹೀಗಾಗಿ ತಂಡದ ಸಾಮರ್ಥ್ಯವೂ ಕುಗ್ಗಿತ್ತು. ಈ ಬಾರಿ ಅದ್ಯಾವುದಕ್ಕೂ ಆಸ್ಪದ ನೀಡಲಿಲ್ಲ. 

ನಮ್ಮಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಒಳಾಂಗಣ ಕ್ರೀಡಾಂಗಣವಿದ್ದರೂ ಅದರಲ್ಲಿ ಅಭ್ಯಾಸ ನಡೆಸುವಂತಿಲ್ಲ.  ಸರ್ಕಾರದಿಂದಲೂ ಅಗತ್ಯ ಪ್ರೋತ್ಸಾಹ ಸಿಗುತ್ತಿಲ್ಲ. ನಾಲ್ಕು ವರ್ಷಗಳ ಹಿಂದೆ ಫೆಡರೇಷನ್‌ ಕಪ್‌ ಗೆದ್ದಾಗ ಸರ್ಕಾರ ಘೋಷಿಸಿದ್ದ ಬಹುಮಾನ ಮೊತ್ತ ಇನ್ನೂ ಆಟಗಾರರ ಕೈಸೇರಿಲ್ಲ. ಹೀಗಿರುವಾಗ ಕ್ರೀಡೆಯ ಬೆಳವಣಿಗೆ ಹೇಗೆ ಸಾಧ್ಯ. 


ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಕರ್ನಾಟಕ ವಾಲಿಬಾಲ್‌ ತಂಡ. (ನಿಂತವರು, ಎಡದಿಂದ), ನಕುಲ್‌ ದೇವ್‌, ಗಣೇಶ್‌ ಗೌಡ, ರವಿಕುಮಾರ್‌, ಎಸ್‌.ಎ.ಕಾರ್ತಿಕ್‌, ರಾಯ್‌ಸನ್‌, ಪ್ರತೀಕ್‌ ಶೆಟ್ಟಿ ಮತ್ತು ಅಶ್ವಲ್‌ ರೈ. (ಕುಳಿತವರು) ಪಿ.ಸಿ.ಸತೀಶ್‌ (ಮ್ಯಾನೇಜರ್‌), ವಿಶುಕುಮಾರ್‌ (ಸಹಾಯಕ ಕೋಚ್‌), ಕೆ.ಆರ್‌.ಲಕ್ಷ್ಮೀನಾರಾಯಣ್‌ (ಕೋಚ್‌), ದರ್ಶನ್‌ ಗೌಡ, ಭರತ್‌, ಎ.ಕಾರ್ತಿಕ್‌, ವಿನಾಯಕ್‌ ಮತ್ತು ಸುಜಿತ್‌ ಆಚಾರ್ಯ –ಪ್ರಜಾವಾಣಿ ಚಿತ್ರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು