ಸೋಮವಾರ, ಮಾರ್ಚ್ 20, 2023
25 °C
ಭಾರತ ಒಲಿಂಪಿಕ್ಸ್‌ ಸಮಿತಿ ಆಡಳಿತ ನೋಡಿಕೊಳ್ಳಲು ಕ್ರಮ

ಐಒಎ ದೈನಂದಿನ ವ್ಯವಹಾರ ನೋಡಿಕೊಳ್ಳಲು ತಟಸ್ಥ ವ್ಯಕ್ತಿ ನೇಮಕ: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ : ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ದೈನಂದಿನ ವ್ಯವಹಾರ ನೋಡಿಕೊಳ್ಳಲು ‘ತಟಸ್ಥ ವ್ಯಕ್ತಿ’ಯನ್ನು ನೇಮಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿತು.

ಈ ಸಂಬಂಧ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಜತೆ ಮಾತುಕತೆ ನಡೆಸುವಂತೆ ಕ್ರೀಡಾ ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶಿಸಿತು.

ಡಿಸೆಂಬರ್‌ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರದಿದ್ದರೆ, ಐಒಎಯನ್ನು ಅಮಾನತು ಮಾಡುವುದಾಗಿ ಐಒಸಿ ಸೆ.8 ರಂದು ಅಂತಿಮ ಎಚ್ಚರಿಕೆ ನೀಡಿತ್ತು. ಐಒಎಗೆ ‘ಹಂಗಾಮಿ/ ಮಧ್ಯಂತರ ಅಧ್ಯಕ್ಷ‘ರನ್ನು ನೇಮಿಸಿದರೆ ಅದನ್ನು ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಐಒಎ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ, ತಟಸ್ಥ ವ್ಯಕ್ತಿಯ ನೇಮಕಕ್ಕೆ ಸಂಬಂಧಿಸಿದಂತೆ ಐಒಸಿಯ ಒಲಿಂಪಿಕ್‌ ಸಾಲಿಡಾರಿಟಿ ಮತ್ತು ಎನ್‌ಒಸಿ ವಿಭಾಗದ ನಿರ್ದೇಶಕರ ಜತೆ ಮಾತುಕತೆ ನಡೆಸುವಂತೆ ಕ್ರೀಡಾ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಐಒಎ ನಿಯಮಾವಳಿಗಳ ತಿದ್ದುಪಡಿ, ಮತದಾರರ ಪಟ್ಟಿ ಸಿದ್ಧಪಡಿಸುವುದು ಮತ್ತು ಚುನಾವಣೆ ಪ್ರಕ್ರಿಯೆ ನಡೆಸಲು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಬೇಕು’ ಎಂಬ ಸಲಹೆ ನೀಡಿದರು.

‘ಚುನಾವಣೆ ನಡೆದು ಹೊಸ ಆಡಳಿತ ಅಸ್ತಿತ್ವಕ್ಕೆ ಬರುವವರೆಗೆ ಐಒಎಯ ಆಡಳಿತ ನೋಡಿಕೊಳ್ಳಲು ತಟಸ್ಥ ವ್ಯಕ್ತಿಯೊಬ್ಬರನ್ನು ನೇಮಿಸಬೇಕು’ ಎಂಬ ಸಲಹೆಯನ್ನೂ ಮುಂದಿಟ್ಟರು.

‘ಐಒಸಿಯು ಸೆ.27 ರಂದು ಲಾಸನ್‌ನಲ್ಲಿ ಐಒಎ ಪ್ರತಿನಿಧಿಗಳ ಜತೆ ಜಂಟಿ ಸಭೆ ನಡೆಸುವ ಪ್ರಸ್ತಾವ ಮುಂದಿಟ್ಟಿದೆ. ಆದ್ದರಿಂದ ಒಬ್ಬರು ಐಒಸಿ ಜತೆ ಸಂಪರ್ಕದಲ್ಲಿರುವುದು ಅಗತ್ಯವಾಗಿದೆ. ತಟಸ್ಥ ವ್ಯಕ್ತಿಯನ್ನು ನೇಮಿಸುವ ಸಂಬಂಧ ಐಒಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡಬೇಕು’ ಎಂದು ಪೀಠ ಹೇಳಿತು. ವಿಚಾರಣೆಯನ್ನು ಸೆ.22ಕ್ಕೆ ಮುಂದೂಡಿತು.

ಐಒಎ ಚುನಾವಣೆ ಕಳೆದ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು. ಆದರೆ ನಿಯಮಾವಳಿಯ ತಿದ್ದುಪಡಿ ಪ್ರಕ್ರಿಯೆ ನಡೆದ ಕಾರಣ ಚುನಾವಣೆ ನಡೆದಿರಲಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ನರೀಂದರ್‌ ಬಾತ್ರಾ ಅವರನ್ನು ಐಒಎ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು