ಭಾನುವಾರ, ಜೂಲೈ 12, 2020
25 °C
ಏರುತ್ತಿರುವ ಕೋವಿಡ್‌ ಸೋಂಕು ಪ್ರಕರಣಗಳು: ಅಥ್ಲೀಟ್‌ಗಳ ಚರ್ಚೆ

ಆಗಸ್ಟ್‌ನಿಂದ ಕ್ರೀಡಾ ಚಟುವಟಿಕೆ: ಕ್ರೀಡಾಪಟುಗಳಲ್ಲಿ ಅಭಿಪ್ರಾಯ ಭೇದ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಡಳಿತಗಾರರು ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಯೋಜನೆ ರೂಪಿಸುವಲ್ಲಿ ನಿರತರಾಗಿದ್ದಾರೆ. ಇತ್ತ ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಮಧ್ಯೆ  ಆಗಸ್ಟ್‌ ವೇಳೆಗೆ ಸ್ಪರ್ಧಾತ್ಮಕ ಕ್ರೀಡೆಗಳು ಆರಂಭವಾಗುವವೇ ಎಂಬ ಚರ್ಚೆ ಕಾವು ಪಡೆದಿದೆ.

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಕಳೆದ ವಾರ ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್‌ಎಸ್‌ಎಫ್‌)‌ಗಳ ಪ್ರತಿನಿಧಿಗಳೊಂದಿಗೆ ಆನ್‌ಲೈನ್‌ ಸಂವಾದ ನಡೆಸಿದ್ದರು. ಆಗಸ್ಟ್‌ನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೇಕ್ಷಕರ ನಿರ್ಬಂಧದೊಡನೆ ಆರಂಭಿಸುವ ಗುರಿ ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದರು.

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಂದ ತರಬೇತಿ ಹಾಗೂ ಸ್ಪರ್ಧೆಗಳ ವೇಳಾಪಟ್ಟಿ ಸಿದ್ಧಪಡಿಸಲು ಭಾರತ ಒಲಿಂಪಿಕ್‌ ಸಂಸ್ಥೆಯೇನೊ ಮುತುವರ್ಜಿ ವಹಿಸಿದೆ.  ಆದರೆ ಕ್ರೀಡಾಂಗಣಕ್ಕೆ ಇಳಿಯುವ ಅಥ್ಲೀಟುಗಳ ಕಥೆ ಏನು? ಎಂಬ ಪ್ರಶ್ನೆಗೆ ಉತ್ತರ ಹೊಳೆದಿಲ್ಲ.

ಈ ಬಗ್ಗೆ ಪಿಟಿಐ ವಿವಿಧ ಕ್ರೀಡೆಗಳ ಪ್ರಮುಖ ತಾರೆಗಳನ್ನು ಸಂಪರ್ಕಿಸಿದಾಗ ಕೆಲವರು ಇನ್ನಷ್ಟು ದಿನ ಕಾಯುವ ಕುರಿತು ಒಲವು ವ್ಯಕ್ತಪಡಿಸಿದರೆ, ಇನ್ನು ಕೆಲವರು ಫಿಟ್‌ನೆಸ್‌ ಹಾಗೂ ಸಿದ್ಧತೆಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸ್ಪರ್ಧೆಗಳನ್ನು ಪುನರಾರಂಭಿಸುವ ಚರ್ಚೆ ಆರಂಭಿಸುವ ಮೊದಲು ಕೊರೊನಾ ಸೋಂಕು ಬಾಧೆಯನ್ನು ನಿಯಂತ್ರಣಕ್ಕೆ ತರಬೇಕು. ಭಾರತದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಸದ್ಯ ಇದಕ್ಕೆ ಲಸಿಕೆಯೂ ಸಿಗುವಂತೆ ಕಾಣುತ್ತಿಲ್ಲ’ ಎಂದು ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಹೇಳಿದ್ದಾರೆ.

‘ಸ್ಪರ್ಧೆಯ ವೇಳೆ ಅಥ್ಲೀಟ್‌ ಒಬ್ಬ ಸೋಂಕಿಗೆ ಒಳಗಾಗಿ ಇತರರೂ ಅಪಾಯಕ್ಕೆ ಸಿಲುಕಿದರೆ ಅದಕ್ಕೆ ಹೊಣೆ ಯಾರು? ನಾವು ಜೀವಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇದಕ್ಕೆ ಅಂಕುಶ ಹಾಕುವುದು ಹೇಗೆಂದು ಯಾರಿಗೂ ತಿಳಿಯುತ್ತಿಲ್ಲ’ ಎಂದು ಕಾಂಗ್ರೆಸ್‌ ಸದಸ್ಯರೂ ಆಗಿರುವ ವಿಜೇಂದರ್‌ ಅಭಿಪ್ರಾಯಪಟ್ಟರು.

ವಿಜೇಂದರ್‌ ಆತಂಕಕ್ಕೆ ಕಾರಣಗಳಿವೆ. ಇತ್ತೀಚೆಗೆ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌, ಪಾಕಿಸ್ತಾನದ 10 ಮಂದಿ ಕ್ರಿಕೆಟ್‌ ಆಟಗಾರರು ಹಾಗೂ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಟೆನಿಸ್ ಟೂರ್ನಿ ವೇಳೆ ಅಂತರ ಕಾಪಾಡುವ ಗೋಜಿಗೂ ಹೋಗಿರಲಿಲ್ಲ.

ಇನ್ನೊಂದೆಡೆ ಬಜರಂಗ್‌ ಪೂನಿಯಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಲಾಕ್‌ಡೌನ್‌ ಜಾರಿಯಾದಾಗಿನಿಂದ ಅಥ್ಲೀಟುಗಳು ತಮ್ಮ ಮನೆಯಲ್ಲೇ ಬಂದಿಯಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಅವರು ಫಿಟ್‌ನೆಸ್‌ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮ ಕೆಟ್ಟದಾಗಿರುತ್ತದೆ’ ಎಂದು ವಿಶ್ವ ಕುಸ್ತಿಯಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಬಜರಂಗ್‌ ನುಡಿಯುತ್ತಾರೆ.

ಆದರೆ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಿಂದ ಕ್ರೀಡಾಚಟುವಟಿಕೆಗಳ ಪುನರಾರಂಭಕ್ಕೆ ಅಡ್ಡಿಯಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.

ಕೇಂದ್ರ ಸರ್ಕಾರವು ಹೊರಾಂಗಣ ಅಭ್ಯಾಸಕ್ಕೆ ಸಮ್ಮತಿ ಸೂಚಿಸಿದೆ. ಆದರೆ ರಾಜ್ಯ ಸರ್ಕಾರಗಳು ವಿವಿಧ ಹಂತದ ನಿರ್ಬಂಧಗಳನ್ನು ವಿಧಿಸಿವೆ. ಬಾಕ್ಸಿಂಗ್‌ ಹಾಗೂ ಬ್ಯಾಡ್ಮಿಂಟನ್‌ ಫೆಡರೇಷನ್‌ಗಳು ತರಬೇತಿಯನ್ನು ಪುನರಾರಂಭಿಸಲು ಅನುಮತಿ ಕೇಳುತ್ತಿವೆ.

ಟೇಬಲ್‌ ಟೆನಿಸ್‌ ಫೆಡರೇಷನ್‌ ತರಬೇತಿ ಪುನರಾರಂಭಕ್ಕೆ ಪ್ರಯತ್ನಿಸುತ್ತಿದೆ. ಆದರೆ ಆಟಗಾರರ ಮನವೊಲಿಸುವಲ್ಲಿ ಅದಕ್ಕೆ ಸಾಧ್ಯವಾಗಿಲ್ಲ.

ಭಾರತದ 15 ಮಂದಿ ಶೂಟರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ತರಬೇತಿ ಆರಂಭಕ್ಕೆ ಅವರು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಮುಂದುವರಿಯಲು ಅವರು ಬಯಸಿದ್ದಾರೆ.

‘ಇಂತಹ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸುವುದು ಸಮಂಜಸವಲ್ಲ. ಅಪಾಯ ಇದ್ದೇ ಇರುತ್ತದೆ. ಶೂಟಿಂಗ್‌ ವಿಷಯಕ್ಕೆ ಬಂದರೆ 5–6 ಮಂದಿಯ ಬ್ಯಾಚ್‌ ಮಾಡಿಕೊಂಡು ತರಬೇತಿ ನಡೆಸಬಹುದು’ ಎಂದು ವಿಶ್ವಕಪ್‌ ಹಾಗೂ ಕಾಮನ್‌ವೆಲ್ತ್‌ ಪದಕ ವಿಜೇತ ಶೂಟರ್‌ ಸಂಜೀವ್‌ ರಜಪೂತ್‌ ಹೇಳಿದ್ದಾರೆ.

ಬ್ಯಾಡ್ಮಿಂಟನ್‌ ಆಟಗಾರರಾದ ಪರುಪಳ್ಳಿ ಕಶ್ಯಪ್‌, ಬಿ.ಸಾಯಿ ಪ್ರಣೀತ್‌, ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು, ಆರ್ಚರಿ ಪಟು ದೀಪಿಕಾ ಕುಮಾರಿ, ಈಜುಪಟು ಶ್ರೀ ಹರಿ ನಟರಾಜ್‌ ಹಾಗೂ ಚೆಸ್‌ ಆಟಗಾರ್ತಿ ದ್ರೋಣವಳ್ಳಿ ಹರಿಕಾ ಅವರು ಕ್ರೀಡೆ ಪುನರಾರಂಭದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳು ಆರಂಭವಾದರೆ ಅಥ್ಲೀಟುಗಳ ಆಯ್ಕೆ ತುಂಬಾ ಸೀಮಿತವಾಗಿರುತ್ತದೆ’ ಎಂದು ಮೀರಾಬಾಯಿ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು