ಬುಧವಾರ, ಮಾರ್ಚ್ 3, 2021
25 °C
ಬ್ಯಾಡ್ಮಿಂಟನ್‌: ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ನ ಡ್ರಾ ಪ್ರಕಟ

ಸಿಂಧುಗೆ ಕಠಿಣ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಂಗ್‌ ಜೌ: ಈ ಬಾರಿಯ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಕನಸು ಕಂಡಿರುವ ಭಾರತದ ಪಿ.ವಿ.ಸಿಂಧುಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ.

ಸೋಮವಾರ ಟೂರ್ನಿಯ ಡ್ರಾ ಪ್ರಕಟವಾಗಿದ್ದು ಒಲಿಂ‍ಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದಾರೆ. ಜಪಾನ್‌ನ ಅಕಾನೆ ಯಮಗುಚಿ, ಚೀನಾ ತೈಪೆಯ ತೈ ಜು ಯಿಂಗ್‌ ಮತ್ತು ಅಮೆರಿಕದ ಬಿಯೆವೆನ್‌ ಜಾಂಗ್‌ ಅವರೂ ಇದೇ ಗುಂ‍ಪಿನಲ್ಲಿದ್ದಾರೆ. ಹಿಂದಿನ ಆವೃತ್ತಿಯಲ್ಲಿ ಯಮಗುಚಿ ಚಾಂಪಿಯನ್‌ ಆಗಿದ್ದರು. ಯಿಂಗ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ಆಟಗಾರ್ತಿಯರು ಸೆಮಿಫೈನಲ್‌ಗೆ ಅರ್ಹತೆ ಗಳಿಸಲಿದ್ದಾರೆ. ಹೀಗಾಗಿ ಸಿಂಧು ಗುಂಪು ಹಂತದ ಎಲ್ಲಾ ಪಂದ್ಯಗಳಲ್ಲೂ ಗೆಲ್ಲಬೇಕಿದೆ.

ಮೂರನೇ ಬಾರಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಸಿಂಧು, ಯಮಗುಚಿ ಎದುರು 9–4ರ ಗೆಲುವಿನ ದಾಖಲೆ ಹೊಂದಿದ್ದಾರೆ. ಈ ಋತುವಿನಲ್ಲಿ ಭಾರತದ ಆಟಗಾರ್ತಿ, ಅಕಾನೆ ಎದುರು ಐದು ಬಾರಿ ಆಡಿದ್ದು ಈ ಪೈಕಿ ನಾಲ್ಕರಲ್ಲಿ ಸೋತಿದ್ದಾರೆ.

ತೈ ಜು ಯಿಂಗ್‌ ಎದುರು ಆಡಿರುವ ಹಿಂದಿನ ಆರು ಹೋರಾಟಗಳಲ್ಲೂ 23 ವರ್ಷ ವಯಸ್ಸಿನ ಸಿಂಧು ಪರಾಭವಗೊಂಡಿದ್ದಾರೆ. ಜಾಂಗ್‌ ವಿರುದ್ಧದ ಹಿಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸಿಂಧು ಸೋತಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಸಮೀರ್‌ ವರ್ಮಾ ಅವರ ನಾಕೌಟ್‌ ಹಾದಿಯೂ ಕಠಿಣ ಎನಿಸಿದೆ. ಹೋದ ತಿಂಗಳು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಮೀರ್‌ ಮೊದಲ ಸಲ ಟೂರ್ನಿಗೆ ಅರ್ಹತೆ ಗಳಿಸಿದ್ದಾರೆ. ಅವರು ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದ್ದಾರೆ.

ಜಪಾನ್‌ನ ಕೆಂಟೊ ಮೊಮೊಟಾ, ಇಂಡೊನೇಷ್ಯಾದ ಟಾಮಿ ಸುಗಿಯಾರ್ಟೊ ಮತ್ತು ಥಾಯ್ಲೆಂಡ್‌ನ ಕೆಂಟಾಫೊನ್‌ ವಾಂಗ್‌ಚಾರೊಯಿನ್‌ ಅವರೂ ಇದೇ ಗುಂಪಿನಲ್ಲಿದ್ದಾರೆ. ಮೊಮೊಟಾ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬುಧವಾರದಿಂದ ಟೂರ್ನಿ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು