ಶುಕ್ರವಾರ, ಅಕ್ಟೋಬರ್ 30, 2020
25 °C
ಕೋವಿಡ್‌ ಪಿಡುಗಿನಿಂದ ಕುಸ್ತಿಪಟುಗಳು ‘ಚಿತ್‌’

PV Web Exclusive: ಪೈಲ್ವಾನರ ನೆಮ್ಮದಿ ಕದಡಿದ ಕೋವಿಡ್‌

ನಾಗೇಶ್ ಶೆಣೈ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಪಿಡುಗಿನಿಂದ ಅನುಸರಿಸಬೇಕಾಗಿರುವ ಅಂತರದ ನಿಯಮ ‘ಸಂಪರ್ಕ ಕ್ರೀಡೆ’ ಕುಸ್ತಿಯ ಪಾಲಿಗೆ ದೊಡ್ಡ ಬಿಕ್ಕಟ್ಟನ್ನೇ ತಂದಿಟ್ಟಿದೆ. ಈ ಪಿಡುಗು ಇಲ್ಲದಿದ್ದರೆ ಇ‌ಷ್ಟು ಹೊತ್ತಿಗೆ ರಾಜ್ಯದಲ್ಲಿ ವಿವಿಧ ಕಡೆ ನಾಡಕುಸ್ತಿಗಳ ಸಂಭ್ರಮ ಜೋರಾಗಿರುತಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ಮಲ್ಲರು ಮೈಸೂರು ದಸರೆಗೆ ಸಿದ್ಧತೆ ನಡೆಸುತ್ತಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇಲಾಖೆಯಿಂದ ಕುಸ್ತಿ ಹಬ್ಬ ನಡೆಯುತ್ತಿತ್ತು. ಪಾಯಿಂಟ್‌ ಕುಸ್ತಿ ಆಡುವವರು ವಿವಿಧ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು.

ಅನ್‌ಲಾಕ್‌ ನಂತರ ಕೆಲವು ಕ್ರೀಡೆಗಳು ಮರಳಿ ಹಳಿಗೆ ಬಂದವು. ಆದರೆ ಕುಸ್ತಿಯ ಪಾಲಿಗೆ ಕೋವಿಡ್‌ ಪೀಡೆ ದುಃಸ್ವಪ್ನದಂತೆ ಎರಗಿದೆ. ಇಡೀ ಕುಸ್ತಿ ಋತುವೇ ಕೊಚ್ಚಿಕೊಂಡು ಹೋಗಿದೆ. ನಾಡ ಕುಸ್ತಿ ಸ್ಪರ್ಧೆಗಳ ಜೊತೆ, ರಾಷ್ಟ್ರೀಯ ವಯೋವರ್ಗ ಕುಸ್ತಿ ಸ್ಪರ್ಧೆಗಳೂ ನಡೆದಿಲ್ಲ. ದಸರೆಯ ಕುಸ್ತಿ ರದ್ದಾಗಿದೆ. ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯುವ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ.

‘ಪೈಲ್ವಾನಗಿರಿ ಮಾಡುವವರಲ್ಲಿ ಹೆಚ್ಚಿನವರು ಬಡವರು. ಹಳ್ಳಿಯಿಂದ ಬರುವವರು. ಅವರಿಗೆ ಉದ್ಯೋಗವೂ ಇರುವುದಿಲ್ಲ. ನಾಡಕುಸ್ತಿಯಿಂದ ಸಂಪಾದನೆ ಆಗುತ್ತಿದ್ದು, ಅದರಲ್ಲಿ ಕೆಲವರು ನೆಮ್ಮದಿ ಕಾಣುತ್ತಿದ್ದರು. ನಾಡ ಕುಸ್ತಿಯನ್ನೇ (ಮಟ್ಟಿ ಕುಸ್ತಿ) ನಂಬಿಕೊಂಡ ಪೈಲ್ವಾನರು ಸಂಕಷ್ಟದಲ್ಲಿದ್ದಾರೆ’ ಎಂದು ವಿವರಿಸುತ್ತಾರೆ  ದಾವಣಗೆರೆಯ ಅನುಭವಿ ಪೈಲ್ವಾನ್‌ ಕಾರ್ತಿಕ್‌ ಕಾಟೆ. ಮಣ್ಣಿನಂಕಣದ ಕುಸ್ತಿಯಲ್ಲಿ ಕಾಟೆ ಹೆಸರು ಕುಸ್ತಿಪ್ರೇಮಿಗಳಿಗೆ ಚಿರಪರಿಚಿತ.

ನಾಡಕುಸ್ತಿಯಿಂದ ₹ 4–5 ಲಕ್ಷ ಸಂಪಾದಿಸುವ ಮಲ್ಲರೂ ಇದ್ದಾರೆ. ಇದರ ಜೊತೆಗೆ ಒಳ್ಳೆಯ ಸೆಣಸಾಟಕ್ಕೆ  ಪ್ರೋತ್ಸಾಹವಾಗಿ ಹೆಚ್ಚುವರಿಯಾಗಿ ಹಣ ನೀಡುವವರೂ ಇದ್ದಾರೆ. ಕೆಲವು ಕಡೆ ನಗದು ಜೊತೆಗೆ ಬೆಳ್ಳಿಯ ಗದೆಯನ್ನೂ ಬಹುಮಾನವಾಗಿ ನೀಡುವ ಕ್ರಮವಿದೆ.

‘ಸಾಮಾನ್ಯವಾಗಿ ವರ್ಷದ ಈ ಅವಧಿಯಲ್ಲಿ ಹೆಚ್ಚು ನಾಡ ಕುಸ್ತಿಗಳು ನಡೆಯುತ್ತವೆ. ನನಗೆ 85 ರಿಂದ 90 ನಾಡ ಕುಸ್ತಿಗಳಲ್ಲಿ ಆಡುತ್ತಿದ್ದೆ. ನನಗೆ ಕುಸ್ತಿ ಆಡಲು ಬೇರೆ ಬೇರೆ ಕಡೆಗಳಿಂದ ಆಹ್ವಾನ ಬರುತ್ತಿತ್ತು. ರಾಜ್ಯದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರದ ಪುಣೆ, ಕೊಲ್ಹಾಪುರ, ಸಾಂಗ್ಲಿ ಮೊದಲಾದ ಕಡೆ ಹೋಗಿ ಗೆದ್ದುಬರುತ್ತಿದ್ದೆ’ ಎಂದು ಹೇಳುತ್ತಾರೆ ಕಾಟೆ. ಎರಡು ಬಾರಿ (2013, 2014) ಕರ್ನಾಟಕ ಕೇಸರಿ, ಒಮ್ಮೆ (2017ರಲ್ಲಿ) ಕರ್ನಾಟಕ ಕಂಠೀರವ ಟೈಟಲ್‌ ಪಡೆದ ಪೈಲ್ವಾನ್‌ ಅವರು. ಆದರೆ ಕುಸ್ತಿ ಅವರಿಗೆ ಈವರೆಗೆ ಉದ್ಯೋಗ ದೊರಕಿಸಿಕೊಟ್ಟಿಲ್ಲ.

ಪದವಿಯಲ್ಲಿದ್ದಾಗ ಎರಡು ಬಾರಿ ಅಂತರ ವಿಶ್ವವಿದ್ಯಾಲಯ ಕುಸ್ತಿಯಲ್ಲಿ ಪದಕ ಗೆದ್ದಿರುವ ಕಾರ್ತಿಕ್‌ ಸದ್ಯ  ಮಾಗಾನಹಳ್ಳಿಯಲ್ಲಿರುವ ಸೋದರನ ಕುರಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಕುಸ್ತಿ ಸ್ಪರ್ಧೆಗಳು ರದ್ದಾಗಿರುವುದರಿಂದ ಪೈಲ್ವಾನರು ಜೀವನಾಧಾರವಿಲ್ಲದೇ ಪರದಾಡುತ್ತಿದ್ದಾರೆ ಎಂದು ಮತ್ತೊಬ್ಬ ಜನಪ್ರಿಯ ಪೈಲ್ವಾನರಗಿರುವ ಶಿವಯ್ಯ ಪೂಜಾರಿ ಹೇಳುತ್ತಾರೆ. ಇದೇ ಅಭಿಪ್ರಾಯ ಬಹುತೇಕ ಎಲ್ಲ ಪೈಲ್ವಾನರದ್ದು.

ತರಗತಿ ಆರಂಭ: ಈಗಾಗಲೇ 25 ಮಂದಿ ಪೈಲ್ವಾನರು ಕೆಲದಿನಗಳಿಂದ ಅಭ್ಯಾಸದಲ್ಲಿ (ಕಂಡಿಷನಿಂಗ್) ತೊಡಗಿದ್ದಾರೆ. ‘ಪದವಿಪೂರ್ವ ತರಗತಿಗಳಿಂದ ಹಿಡಿದು ಪದವಿವರಗೆ ಕಲಿಯುತ್ತಿರುವ ಕುಸ್ತಿಪಟುಗಳು ಈಗ ಫಿಟ್ನೆಸ್‌, ತಂತ್ರಗಾರಿಕೆ, ತೂಕ ಕಾಪಾಡಿಕೊಳ್ಳುವ ತರಬೇತಿ ಆರಂಭಿಸಿದ್ದಾರೆ’ ಎಂದು ಹೇಳುತ್ತಾರೆ ದಾವಣಗೆರೆಯ ರಾಜ್ಯ ಕ್ರೀಡಾ ಪ್ರಾಧಿಕಾರದ ಹಿರಿಯ ಕೋಚ್‌ ಆರ್‌.ಶಿವಾನಂದ ಅವರು.

ಕೋವಿಡ್‌ನಿಂದ ಯಾವುದೇ ಕುಸ್ತಿ ಚಟುವಟಿಕೆಗಳು ನಡೆಯಲಿಲ್ಲ. ಇದರಿಂದ ನಾಡಕುಸ್ತಿ ಆಡುವವರಿಗೆ ತುಂಬಾ ತೊಂದರೆಯಾಗಿದೆ. ವಯೋವರ್ಗ ಕುಸ್ತಿ ಆಡುವವರಿಗೂ ಒಂದು ವರ್ಷ ವ್ಯರ್ಥವಾಗುವ ಆತಂಕ ಇದೆ ಎಂದು ಅವರು ಹೇಳುತ್ತಾರೆ

‘ದೋಬಿ, ದಾಕ್‌ ಮಾಡುವಾಗ ‘ಡಮ್ಮಿ’ಗಳನ್ನು (ಮಾನವಾಕೃತಿಯ ಬೊಂಬೆ ಮಾದರಿ) ಬಳಸುತ್ತೇವೆ. ಎದುರಾಳಿಯನ್ನು ಎತ್ತಿ ಕೆಳಕ್ಕೆ ಕೆಡವಿಹಾಕುವ ತಂತ್ರಕ್ಕೂ ಡಮ್ಮಿ ಬಳಸಲಾಗುತ್ತಿದೆ. ಇದರಿಂದ ಕುಸ್ತಿಪಟುಗಳು ಪಟ್ಟುಗಳ ಪ್ರಯೋಗದಲ್ಲಿ ವೇಗ, ಚಲನೆಗಳನ್ನು ಮರೆಯುವುದಿಲ್ಲ. ಇದರ ಜೊತೆಗೆ ವಾರಕ್ಕೆ ಎರಡು ಬಾರಿ ದೂರ ಓಟದ ಅಭ್ಯಾಸ ಮಾಡಲಾಗುತ್ತಿದೆ. ದೈಹಿಕ ಕ್ಷಮತೆ ಉಳಿಸಿಕೊಳ್ಳಲು ಕಾರ್ತಿಕ್‌ ಕಾಟೆ ಈ ಓಟದ ಹೊಣೆ ಹೊತ್ತಿದ್ದಾರೆ’ ಎಂದು ಶಿವಾನಂದ ವಿವರಿಸಿದರು.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಬಂದಿದ್ದು ಕುಸ್ತಿಯಲ್ಲಿ. ಇತ್ತೀಚಿನ ಒಲಿಂಪಿಕ್ಸ್‌ಗಳಲ್ಲಿ ಮತ್ತೆ ಈ ಕ್ರೀಡೆಗೆ  ಪದಕಗಳು ಬರತೊಡಗಿವೆ. ಆದರೆ ಈಗ ಸಂಕಷ್ಟದ ಸಮಯ. ಈ ಆಟವನ್ನು ಸೂಕ್ತ ಮುನ್ನೆಚ್ಚರಿಕೆಯೊಡನೆ ಪುನರಾರಂಭ ಮಾಡಲು ಕ್ರಮ ವಹಿಸಬೇಕಾಗಿದೆ. ಆದರೆ ನಾಡಕುಸ್ತಿಗಳು ಜನರಿಲ್ಲದೇ ಕುಸ್ತಿ ನಡೆಯುವುದೂ ಕಷ್ಟ. ಇದಕ್ಕೆ ಜನರೇ ಪ್ರೋತ್ಸಾಹ ಎಂಬ ಟಾನಿಕ್‌ ಕೊಡುವವರು. ‘ಕುಸ್ತಿ ಅಂದರೆ ಯುವಕರು, ವಯಸ್ಸಾದವರು ಎಲ್ಲ ಬರುತ್ತಾರೆ. ಇದನ್ನು ತಡೆಯುವುದು ಕಷ್ಟ’ ಎನ್ನುವ ಅನಿಸಿಕೆ ಕಾಟೆ ಅವರದ್ದು.


ಆರ್‌.ಶಿವಾನಂದ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು