ಶನಿವಾರ, ಮೇ 28, 2022
31 °C

ಟೇಬಲ್ ಟೆನಿಸ್: ಸೆಮಿಗೆ ಮಣಿಕಾ ಬಾತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬುಡಾಪೆಸ್ಟ್: ಭಾರತದ ಮಣಿಕಾ ಬಾತ್ರಾ  ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.  ಮಣಿಕಾ ಅವರು ಜಿ. ಸತ್ಯನ್ ಅವರೊಂದಿಗೆ ಮಿಶ್ರ ಡಬಲ್ಸ್‌ನ ಫೈನಲ್‌ಗೂ ಲಗ್ಗೆ ಇಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಕಾ 7-11, 11-1, 8-11, 13-11, 11-6ರಿಂದ ಭಾರತದವರೇ ಆದ ಶ್ರೀಜಾ ಅಕುಲ್ ವಿರುದ್ಧ ಜಯಿಸಿದರು.

ಮೊದಲ ಗೇಮ್‌ನಲ್ಲಿ ಶ್ರೀಜಾ ವೇಗದ ಆಟವಾಡಿದರು. ಟಾಪ್‌ ಸ್ಪಿನ್‌ಗಳ ಮೂಲಕ ಮಣಿಕಾಗೆ ಆಘಾತ ನೀಡಿದರು. ಎರಡನೇ ಗೇಮ್‌ನಲ್ಲಿ ಇದಕ್ಕೆ ಪ್ರತಿಕಾರ ತೀರಿಸಿಕೊಂಡ ಮಣಿಕಾ ದೊಡ್ಡ ಅಂತರದಿಂದ ಜಯಸಾಧಿಸಿದರು. ಆದರೆ, ಮೂರನೇ ಗೇಮ್‌ನಲ್ಲಿ ಶ್ರೀಜಾ ತಮ್ಮ ಚಾಣಾಕ್ಷ ಆಟದ ಮೂಲಕ ಮೇಲುಗೈ ಸಾಧಿಸಿದರು. ಇದರಿಂದಾಗಿ ಕುತೂಹಲ ಕೆರಳಿಸಿದ್ದ ನಂತರದ ಎರಡೂ ಗೇಮ್‌ಗಳನ್ನು ಮಣಿಕಾ ಗೆದ್ದರು. ಉತ್ತಮ ಸರ್ವ್‌ಗಳು ಮತ್ತು ಮಣಿಕಟ್ಟಿನ ಚಲನೆಯೊಂದಿಗೆ ಆಡಿದ ಮಣಿಕಾ ಜಯಗಳಿಸಿದರು.

ಮಿಶ್ರ ವಿಭಾಗದಲ್ಲಿ ಮಣಿಕಾ ಮತ್ತು ಸತ್ಯನ್ ಅವರು 11-6 11-5 11-4 ರ ನೇರ ಗೇಮ್‌ಗಳಲ್ಲಿ ಬೆಲಾರೂಸ್‌ನ ಅಲೆಕ್ಸಾಂಡ್ರಾ ಖನಿನ್ ಮತ್ತು ದರಿಯಾ ಟ್ರೈಗೊಲೊಸ್ ಅವರನ್ನು ಮಣಿಸಿದರು.

ತಮ್ಮ ಉತ್ತಮ ಹೊಂದಾಣಿಕೆಯ ಆಟದಿಂದ ಎದುರಾಳಿಗೆ ಯಾವುದೇ ಹಂತದಲ್ಲಿಯೂ ಪಾರಮ್ಯ ಸಾಧಿಸಲು ಭಾರತದ ಜೋಡಿ ಬಿಡಲಿಲ್ಲ.

ಪ್ರಶಸ್ತಿ ಸುತ್ತಿನಲ್ಲಿ ಅವರು ಹಂಗರಿಯ ನಂದೊರ್ ಎಕ್ಸೆಕಿ ಮತ್ತು ದೊರಿಯಾ ಮದರಾಸ್ಜ್ ವಿರುದ್ಧ ಸೆಣಸುವರು.

ಮಣಿಕಾ ಬಾತ್ರಾ ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನಲ್ಲಿ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಜಿ. ಸತ್ಯನ್ ಎರಡನೇ ಸುತ್ತಿನಲ್ಲಿ ಪರಾಭವಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು