ಮಂಗಳವಾರ, ಸೆಪ್ಟೆಂಬರ್ 28, 2021
22 °C
ತಂಡ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಂಡ ಭಾರತದ ಬಿಲ್ಗಾರರು

ವಿಶ್ವ ಯೂತ್ ಆರ್ಚರಿ: ಭಾರತಕ್ಕೆ ಮೂರು ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರೋಕ್ಲೊ, ಪೋಲೆಂಡ್‌: ಭಾರತದ ಆರ್ಚರಿಪಟುಗಳು ಯೂತ್ ವಿಶ್ವ ಚಾಂಪಿಯನ್‌ಷಿಪ್‌ನ ಕಾಂಪೌಂಡ್‌ ವಿಭಾಗದಲ್ಲಿ ಮೂರು ಚಿನ್ನ, ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಶ್ರೇಷ್ಠ ಸಾಧನೆ ತೋರಿದ್ದಾರೆ.

ಪ್ರಮುಖ ರಾಷ್ಟ್ರಗಳಾದ ಕೊರಿಯಾ ಹಾಗೂ ಚೀನಾ ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಿಲ್ಲ. ಹೀಗಾಗಿ ಭಾರತ ಪಾರಮ್ಯ ಸಾಧಿಸಿತು. ಕೆಡೆಟ್‌ ವಿಭಾಗದ ಪುರುಷ ಮತ್ತು ಮಹಿಳಾ ತಂಡಗಳು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದವು.

ವೈಯಕ್ತಿಕ ವಿಭಾಗದಲ್ಲಿ ಮೆಕ್ಸಿಕೊದ ಸೆಲೆನೆ ರಾಡ್ರಿಗಸ್ ಎದುರು ಸೋತ ಪ್ರಿಯಾ ಗುರ್ಜರ್ (136–139) ಅವರು ಸ್ವಲ್ಪ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಅವರಿಗೆ ಬೆಳ್ಳಿ ಒಲಿಯಿತು.

ಆದರೆ ಪ್ರಿಯಾ, ಪರ್ಣೀತ್‌ ಕೌರ್‌ ಹಾಗೂ ರಿಧು ಸೆಂಥಿಲ್ ಕುಮಾರ್ ಒಟ್ಟಾರೆ ವಿಶ್ವದಾಖಲೆ ಸ್ಕೋರ್‌ (2067) ಗಳಿಸಿದರು. ಈ ವಿಭಾಗದಲ್ಲಿ ಪರ್ಣೀತ್‌ ಕೌರ್‌ ಕಂಚಿನ ಪದಕ ಗೆದ್ದುಕೊಂಡರು.

ಇದಕ್ಕೂ ಮೊದಲು ಪ್ರಿಯಾ, ಪರ್ಣಿತ್ ಹಾಗೂ ರಿಧಿ ವೈಷ್ಣವಿ ಅವರಿದ್ದ ಮಹಿಳಾ ತಂಡವು 228–216ರಿಂದ ಟರ್ಕಿ ತಂಡವನ್ನು ಪರಾಭವಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಪುರುಷರ ತಂಡದಲ್ಲಿದ್ದ ಕುಶಲ್ ದಲಾಲ್‌, ಸಾಹಿಲ್ ಚೌಧರಿ ಹಾಗೂ ನಿತಿನ್ ಅಪರ್‌ 233-231ರಿಂದ ಅಗ್ರ ಶ್ರೇಯಾಂಕದ ಅಮೆರಿಕ ತಂಡಕ್ಕೆ ಆಘಾತ ನೀಡಿ ಚಿನ್ನ ತಮ್ಮದಾಗಿಸಿಕೊಂಡರು.

ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಹಾಗೂ ದಲಾಲ್‌ ಫೈನಲ್‌ನಲ್ಲಿ 155–152ರಿಂದ ಅಮೆರಿಕ ತಂಡವನ್ನು ಸೋಲಿಸುವುದರೊಂದಿಗೆ  ಕೆಡೆಟ್‌ ತಂಡ ವಿಭಾಗದ ಎಲ್ಲ ಚಿನ್ನದ ಪದಕಗಳನ್ನೂ ಭಾರತ ಗೆದ್ದುಕೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು